ರೈತ ಸಂಘಟನೆಗಳಿಂದ ಪ್ರತಿಭಟನೆ

KannadaprabhaNewsNetwork | Published : Sep 28, 2024 1:17 AM

ಸಾರಾಂಶ

ಸಣ್ಣ ಹಿಡುವಳಿದಾರರೇ ಹೆಚ್ಚು ಇದ್ದು, ಈ ವೆಚ್ಚವನ್ನು ಭರಿಸಲು ಸಾಧ್ಯವೇ ಇಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ವಿವಿಧ ಬಣಗಳ ಪದಾಧಿಕಾರಿಗಳು ನಗರದ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟಿಸಿದರು.

ರೈತ ಸಂಘದ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರು ಕೃಷಿ ಪಂಪ್‌ ಸೆಟ್‌ಗಳಿಗೆ ಹೊಸ ಸಂಪರ್ಕ ಪಡೆಯಲು ಹಾಗೂ ಅನಧಿಕೃತ ಸಂಪರ್ಕ ಸಕ್ರಮಗೊಳಿಸಿಕೊಲ್ಳಲು ರೈತರೇ ಎಲ್ಲಾ ಖರ್ಜು ಭರಿಸಬೇಕ ಎಂದು ಸರ್ಕಾರ ನಿಯಮ ರೂಪಿಸಿದ್ದು, ಇದರಿಂದಾಗಿ ಲಕ್ಷಾಂತರ ರೂ. ರೈತರ ಮೇಲೆ ಹೊರೆಯಾಗುತ್ತದೆ ಎಂದರು.

ಸಣ್ಣ ಹಿಡುವಳಿದಾರರೇ ಹೆಚ್ಚು ಇದ್ದು, ಈ ವೆಚ್ಚವನ್ನು ಭರಿಸಲು ಸಾಧ್ಯವೇ ಇಲ್ಲ. ಈ ಕಾರಣಕ್ಕೆ ನಿಯಮ ಹಿಂದಕ್ಕೆ ಪಡೆದು ಹಿಂದಿನಂತೆ ನಾಮಿನಲ್‌ ವೆಚ್ಚದಲ್ಲಿ ಸಂಪರ್ಕ ಕಲ್ಪಿಸಬೇಕು, ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಕರೆ ಮೇರೆಗ ಕರ ನಿರಾಕರಣ ಚಳವಳಿಯಲ್ಲಿ ಚಾಮರಾಜನಗರ, ಮಂಡ್ಯ, ಹಾಸನ, ಕೊಪ್ಪಳ ಜಿಲ್ಲೆಯಲ್ಲಿ ರೈತರು ಗೃಹ ವಿದ್ಯುತ್‌ಬಿಲ್‌ಪಾವತಿಸಿರಲಿಲ್ಲ ಎಂದರು.

ಈ ಸಂಬಂಧ 2014ರಲ್ಲಿ ತಮ್ಮ ನೇತೃತ್ವದ ಸರ್ಕಾರ ಈ ಬಾಕಿಯನ್ನು ಕೈಬಿಡಲು ತೀರ್ಮಾನಿಸಿತ್ತು. ಈ ಸಂಬಂಧ 2014ರಲ್ಲಿ ತಮ್ಮ ನೇತೃತ್ವದ ಸರ್ಕಾರ ಈ ಬಾಕಿಯನ್ನು ಕೈಬಿಡಲು ತೀರ್ಮಾನಿಸಿತ್ತು. ಆದರೆ ಈವರೆಗೂ ಸಂಬಂಧಿಸಿದ ಎಸ್ಕಾಂಗಳಿಗೆ ಬಾಕಿ ಹಣ ಪಾವತಿಸದೇ ಇರುವುದರಿಂದ ಬಿಲ್‌ ನಲ್ಲಿ ಬಾಕಿ ಇದೆ ಎಂದು ಮುಂದುವರೆಯುತ್ತಿದೆ. ಕೂಡಲೇ ಹಳೇ ಬಾಕಿಯನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ತರಲು ಹೊರಟಿರುವ ವಿದ್ಯುತ್ಛಕ್ತಿ ತಿದ್ದುಪಡಿ ಬಿಲ್‌ಅನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ರಾಜ್ಯದಲ್ಲಿ ಕುಲಾಂತರಿ ತಳಿಗಳಿಗೆ ಅವಕಾಶ ನೀಡದೇ ನಿಷೇಧ ಹೇರಬೇಕು. ರಾಜ್ಯದ ಜಲಾಶಯಗಳ ಸಂರಕ್ಷಣೆಗಾಗಿ ಡ್ಯಾಂ ಸೇಪ್ಟಿ ಬಿಲ್ಲನ್ನು ಕೂಡಲೇ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಮುಖಂಡ ಪಿ. ಮರಂಕಯ್ಯ, ಹೊಸೂರು ಕುಮಾರ್‌, ಹೊಸಕೋಟೆ ಬಸವರಾಜು, ಮಂಡಕಳ್ಳಿ ಮಹೇಶ್‌ ಮೊದಲಾದವರು ಇದ್ದರು.

ಕಬ್ಬು ಬೆಳೆಗಾರರ ಸಂಘ

ಪ್ರಸಕ್ತ ಸಾಲಿಗೆ ಪ್ರತಿ ಟನ್‌ಕಬ್ಬಿಗೆ ನಾಲ್ಕು ಸಾವಿರ ನಿಗದಿಪಡಿಸಬೇಕು. ಪತ್ರ ಕಾರ್ಖಾನೆಗಳ ಮುಂದೆ ಎಪಿಎಂಸಿಯ ಮೂಲಕ ತೂಕದ ಯಂತ್ರ ಅಳವಡಿಸಬೇಕು. ಕೆ.ಆರ್‌. ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಯ ಪ್ರಾರಂಭಕ್ಕೆ ಇರುವ ಕಾನೂನು ತೊಡಕು ಸರಿಪಡಿಸಿ ಕಬ್ಬು ಅರೆಯಲು ಕ್ರಮವಹಿಸಬೇಕು. ಕಬ್ಬು ಖರೀದಿ ಮಂಡಳಿಯ ಕಳೆದ ವರ್ಷದ ತೀರ್ಮಾನದಂತೆ ಪ್ರತಿ ಟನ್ನೊಂದಕ್ಕೆ 150 ರೂ.ನಂತೆ ಸುಮಾರು ರಾಜ್ಯದಲ್ಲಿ 950 ಕೋಟಿ ರೂ. ರೈತರಿಗೆ ಬರಬೇಕಿದೆ. ಕೂಡಲೇ ಇದನ್ನು ಪಾವತಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕಟಾವು ಸಾಗಾಣಿಕೆಯು ರಾಜ್ಯಾದ್ಯಂತ ಏಕ ರೀತಿಯಾಗಿ ನಿಗದಿಪಡಿಸಬೇಕು. ಇಲ್ಲದಿದ್ದರೆ ಸಕ್ಕರೆ ಕಾರ್ಖಾನೆಗಳು ರೈತರನ್ನು ಸುಲಿಗೆ ಮಾಡುತ್ತಾರೆ. ಉತ್ತರ ಮತ್ತು ದಕ್ಷಿಣ ಎಂಬ ಯಾವುದೇ ತಾರತಮ್ಯ ಇರಬಾರದು. ಕೃಷಿ ಹೊಸ ಪಂಪ್‌ ಸೆಟ್‌ಗಳಿಗೆ ಸಂಪರ್ಕ ಪಡೆಯಲು ಸುಮಾರು 3 ಲಕ್ಷದವರೆಗೆ ರೈತರಿಗೆ ಖರ್ಚಾಗುತ್ತದೆ. ಆದ್ದರಿಂದ ಅಕ್ರಮ, ಸಕ್ರಮ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಅಂಕನಹಳ್ಳಿ ತಮ್ಮಪ್ಪ, ರಾಜಶೇಖರಮೂರ್ತಿ, ಮಹೇಶ್‌, ಚಂದ್ರ, ಶಿವಣ್ಣ, ಮಾದನಾಯ್ಕ ಮೊದಲಾದವರು ಇದ್ದರು.

ಕೋಚನಹಳ್ಳಿ ರೈತ ಹೋರಾಟ ಸಮಿತಿ

ಹೆರಿಟೇಜ್‌ಗಾಲ್ಫ್‌ಕ್ಲಬ್‌ಕಂಪನಿಯ ಬೇನಾಮಿ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಪರಿಹಾರವನ್ನು ರೈತರಿಗೆ ಕೊಡಿಸಬೇಕು ಮತ್ತು ಕೆಐಎಡಿಬಿಯು ವಸತಿ ಸೌಕರ್ಯಕ್ಕಾಗಿ ಮೀಸಲಿರಿಸಿರುವ ವರುಣ ಹೋಬಳಿಯ ಕೋಚನಹಳ್ಳಿ ಗ್ರಾಮದ ಸರ್ವೇ ನಂ. 77, 92, 99, 112 ಮತ್ತು 119 ಜಮೀನುಗಳಲ್ಲಿ ಕಂಪನಿಯಿಂದ ಮೋಸ ಹೋದ ಮೂಲ ರೈತರ ಕುಟುಂಬಗಳಿಗೆ ನಿವೇಶನ ನೀಡುವಂತೆ ಅವರು ಆಗ್ರಹಿಸಿ ಕೋಚನಹಳ್ಳಿ ರೈತರ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟಿಸಿದರು.

ಕೋಚಲನಹಳ್ಳಿ ಗ್ರಾಮದ ರೈತರು ಸುಮಾರು 1.275ಕ್ಕೂ ಹೆಚ್ಚು ದಿನಗಳಿಂದ ನ್ಯಾಯಕ್ಕಾಗಿ ಮುಷ್ಕರ ನಡೆಸುತ್ತಿದ್ದಾರೆ. ಈ ಹಿಂದೆ ತಮ್ಮ ಸಮ್ಮುಖದಲ್ಲಿ ಆದ ತೀರ್ಮಾನದಂತೆ ಹೆರಿಟೇಜ್‌ಗಾಲ್ಫ್‌ಕಂಪನಿಯವರು ರೈತರಿಗೆ ಪರಿಹಾರ ನೀಡಿಲ್ಲ. ಆದ್ದರಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಅವರು ಆಗ್ರಹಿಸಿದರು.

ರೈತರು ಜೀವನ ನಡೆಸಲು ಇತ್ತ ಕೃಷಿ ಜಮೀನು ಇಲ್ಲದೇ, ಅತ್ತ ಕೂಡಲೇ ಯಾವುದೇ ಉದ್ಯೋಗವೂ ಇಲ್ಲದೆ, ಕೆಐಎಡಿಬಿಯಿಂದ ಬರಬೇಕಾದ ಪರಿಹಾರವನ್ನೂ ಪಡೆಯದೇ ರೈತರು ಅತಂತ್ರರಾಗಿದ್ದಾರೆ. ಆದ್ದರಿಂದ ಬಾಧಿತ ರೈತರಿಗೆ ಈ ಹಿಂದೆ ತಮ್ಮ ಸಮ್ಮುಖದಲ್ಲಿ ಆದ ತೀರ್ಮಾನದಂತೆ ಪರಿಹಾರ ನೀಡಲು ಕಂಪನಿಯ ವ್ಯಕ್ತಿಗಳಿಗೆ ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಸದಸ್ಯರಾದ ಶಿವಣ್ಣನಾಯಕ, ಮಹೇಶ್‌, ಮಿಣಕಪ್ಪ ಮೊದಲಾದವರು ಇದ್ದರು.

Share this article