ಪ್ರಜ್ವಲ್‌ ಮೊಬೈಲ್‌ ಬಳಸಿದ್ದಕ್ಕೆ ಅಧಿಕಾರಿ ತಲೆದಂಡ

KannadaprabhaNewsNetwork |  
Published : Aug 13, 2026, 02:00 AM ISTUpdated : Aug 13, 2026, 11:40 AM IST
prajwal revanna video

ಸಾರಾಂಶ

ಅತ್ಯಾಚಾರ ಪ್ರಕರಣದ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಶೋಕಾಸ್‌ ನೋಟಿಸ್ ನೀಡಿ ಹಾಗೂ ಆ ಭದ್ರತಾ ವಿಭಾಗದ ಉಸ್ತುವಾರಿ ಸಹಾಯಕ ಅಧೀಕ್ಷಕ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

 ಬೆಂಗಳೂರು : ಅತ್ಯಾ*ರ ಪ್ರಕರಣದ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಶೋಕಾಸ್‌ ನೋಟಿಸ್ ನೀಡಿ ಹಾಗೂ ಆ ಭದ್ರತಾ ವಿಭಾಗದ ಉಸ್ತುವಾರಿ ಸಹಾಯಕ ಅಧೀಕ್ಷಕ (ಎಎಸ್‌ಪಿ) ಅವರನ್ನು ಅಮಾನತುಗೊಳಿಸಿ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಬುಧವಾರ ಆದೇಶಿಸಿದ್ದಾರೆ.

ಈ ಸಂಬಂಧ ಬುಧವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್‌ ಕುಮಾರ್‌, ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ನಿಷೇಧಿತ ವಸ್ತುಗಳ ಬಳಕೆಯನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದರು.

ಕೈದಿ ಪ್ರಜ್ವಲ್ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾಗಿರುವುದು ಸ್ಪಷ್ಟವಾಗಿ ಭದ್ರತಾ ಲೋಪವಾಗಿದೆ. ಈ ಸಂಬಂಧ ಡಿಐಜಿ (ದಕ್ಷಿಣ) ಅವರ ವರದಿ ಆಧರಿಸಿ ಪ್ರಜ್ವಲ್ ಅವರಿರುವ ಬ್ಯಾರಕ್‌ನ ಭದ್ರತಾ ಉಸ್ತುವಾರಿಯಾಗಿದ್ದ ಸಹಾಯಕ ಅಧೀಕ್ಷಕ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ವಿವರಣೆ ಕೇಳಿ ಕಾರಾಗೃಹದ ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರಿಗೆ ಶೋಕಾಸ್‌ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.

ಸಮವಸ್ತ್ರ ಧರಿಸುವಂತೆ ಪ್ರಜ್ವಲ್‌ಗೆ ತಾಕೀತು:

ಜೈಲಿನಲ್ಲಿ ಕೈದಿಗಳ ಸಮವಸ್ತ್ರ ಧರಿಸುವಂತೆ ಪ್ರಜ್ವಲ್‌ಗೆ ತಾಕೀತು ಮಾಡಲಾಗಿದೆ. ಅತ್ಯಾ*ರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ಅವರಿಗೆ ಅಧಿಕಾರಿಗಳು ಸಮವಸ್ತ್ರ ವಿತರಿಸಿದ್ದರು. ಆದರೆ ಕೆಲ ದಿನಗಳು ಧರಿಸಿದ ನಂತರ ಪ್ರಜ್ವಲ್ ಸಮವಸ್ತ್ರ ಧರಿಸುತ್ತಿರಲಿಲ್ಲ. ಈ ವಿಷಯ ಗೊತ್ತಾಗಿ ಕಾರಾಗೃಹದ ಅಧಿಕಾರಿಗಳಿಗೆ ಮೆಮೋ ಸಹ ನೀಡಲಾಗಿತ್ತು. ಆದಾದ ಬಳಿಕ ಪ್ರಜ್ವಲ್‌ಗೆ ಸಮವಸ್ತ್ರವನ್ನು ಅಧಿಕಾರಿಗಳು ಕಡ್ಡಾಯಗೊಳಿಸಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ.

ಏರ್‌ಟೆಲ್‌ ಕಂಪನಿ ವಿರುದ್ಧ ಎಫ್‌ಐಆರ್‌

ಪರಪ್ಪನ ಅಗ್ರಹಾರ ಜೈಲಲ್ಲಿ ಅತ್ಯಾಧುನಿಕ ಮೊಬೈಲ್ ಜಾಮರ್ ಅಳ‍ವಡಿಸಲಾಗಿದೆ. ಹೀಗಿದ್ದರೂ ಆಂಧ್ರದ ಏರ್‌ಟೆಲ್‌ ಸಿಮ್‌ಗಳು ಮಾತ್ರ ಆಕ್ಟಿವ್ ಆಗಿವೆ. ಏರ್‌ಟೆಲ್‌ ಸಿಮ್‌ಗಳು ಹೇಗೆ ಸಂಪರ್ಕ ಸಾಧಿಸುತ್ತಿವೆ ಎಂಬ ಬಗ್ಗೆ ಆ ಕಂಪನಿ ಅಧಿಕಾರಿಗಳಿಂದ ವಿವರಣೆ ಪಡೆಯಲಾಯಿತು. ಹೀಗಾಗಿ ಏರ್‌ಟೆಲ್‌ ಮೇಲೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅಲೋಕ್ ತಿಳಿಸಿದ್ದಾರೆ.

ಪ್ರಜ್ವಲ್‌ಗೆ ಮನೆ ಊಟ, ಮಂಚ ಕಟ್‌

ಪ್ರಜ್ವಲ್‌ಗೆ ಮನೆ ಊಟ ಹಾಗೂ ಸೆಲ್‌ನಲ್ಲಿ ದಿವಾನ್ ಕಾಟ್‌ (ಮಂಚ) ಬಳಕೆಗೆ ಕಾರಾಗೃಹ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಈ ಮೊದಲು ಅನಾರೋಗ್ಯದ ಸಬೂಬು ಹೇಳಿ ಮಂಚವನ್ನು ಪ್ರಜ್ವಲ್ ಪಡೆದಿದ್ದರು. ಅಲ್ಲದೆ ವಿಚಾರಣಾಧೀನ ಕೈದಿ ಅವಧಿಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮನೆಯಿಂದ ಅವರಿಗೆ ಊಟ ಪೂರೈಕೆಯಾಗುತ್ತಿತ್ತು. ಆದರೆ ಸಜಾ ಕೈದಿಯಾದ ಬಳಿಕ ಅವರಿಗೆ ಮನೆ ಊಟ ನಿರ್ಬಂಧಿಸಿದ್ದಾರೆ. ಅಲ್ಲದೆ ಮಂಚವನ್ನು ತೆರ‍ವುಗೊಳಿಸಿದ್ದಾರೆ.

ವರ್ಗಾವಣೆ ದಿನವೇ ಅಮಾನತು

ಕರ್ತವ್ಯಲೋಪ ಆರೋಪದ ಮೇರೆಗೆ ಜೈಲಿನ ಎಎಸ್‌ಪಿ ಈರಣ್ಣರನ್ನು ಚಿಕ್ಕಮಗಳೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಡಿಜಿಪಿ ಅಲೋಕ್ ಮಂಗಳವಾರ ಆದೇಶಿಸಿದ್ದರು. ಆದರೆ ಈ ಆದೇಶ ಎಎಸ್‌ಪಿ ಅವರ ಕೈ ಸೇರುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ನಡೆಯಿತು. ಪ್ರಜ್ವಲ್‌ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಆ ವಿಭಾಗದ ಭದ್ರತೆ ಉಸ್ತುವಾರಿಯಾಗಿದ್ದ ಈರಣ್ಣರ ತಲೆದಂಡವಾಗಿದೆ. -ಕೋಟ್‌-

ಕಾರಾಗೃಹದಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಚಟುವಟಕೆಗಳಿಗೆ ಸಹಿಸುವುದಿಲ್ಲ. ತಪ್ಪು ಕಂಡು ಬಂದರೆ ನಿರ್ದಾಕ್ಷ್ಯಿಣ್ಯ ಕ್ರಮ ಜರುಗಿಸುತ್ತೇವೆ. ಕೆಲ ಅಧಿಕಾರಿಗಳು ಆಮಿಷ ಹಾಗೂ ದುರಾಸೆಗೊಳಗಾಗಿ ಕಾನೂನುಬಾಹಿರ ಕೃತ್ಯಕ್ಕೆ ನೆರವಾಗುತ್ತಿದ್ದಾರೆ.

-ಅಲೋಕ್ ಕುಮಾರ್, ಡಿಜಿಪಿ, ಕಾರಾಗೃಹ ಮತ್ತು ಸುಧಾರಣಾ ಇಲಾಖೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಯಚೂರು: ಮೊಬೈಲ್‌ ಟಾರ್ಚ್‌ ಬೆಳಕಿನಲ್ಲಿ ನಡೆದ ಬರ ಅಧ್ಯಯನ!
ನಕಲಿ ಡ್ರಗ್ಸ್‌ ದಂಧೆಯ ಕಿಂಗ್‌ಪಿನ್‌ ಪ್ರಶಾಂತ್‌ ಟರ್ಕಿ ರಹಸ್ಯ ಬಯಲು