ಹುಬ್ಬಳ್ಳಿ:
ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಹಾಗೂ ಬಿರುಗಾಳಿಯಿಂದಾಗಿ ಉಂಟಾಗಿರುವ ವಿವಿಧ ಸಮಸ್ಯೆಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಹೆಸ್ಕಾಂ, ಮಹಾನಗರ ಪಾಲಿಕೆ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಮಳೆ ಹಾಗೂ ಬಿರುಗಾಳಿಯಿಂದಾಗಿ ಆಗಿರುವ ಹಾನಿಯ ಕುರಿತು ಮಾಹಿತಿ ನೀಡಿದರು.ಆಗ ಶಾಸಕರು, ಪಾಲಿಕೆಯ 36, 47, 48 ಹಾಗೂ 49ನೇ ವಾರ್ಡ್‌ಗಳಲ್ಲಿ ಹೆಚ್ಚು ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಈ ವಾರ್ಡ್‌ಗಳಲ್ಲಿ ಕಳೆದ ಸೋಮವಾರ ಸಂಜೆಯಿಂದಲೇ ವಿದ್ಯುತ್ ಪೂರೈಕೆ ಕಡಿತಗೊಂಡಿದೆ ಎಂದರು. ಹುಬ್ಬಳ್ಳಿಯ ಅರ್ಧ ಭಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗುರುವಾರ ಸಂಜೆಯೊಳಗೆ ವಿದ್ಯುತ್ ಸರಬರಾಜು ಆರಂಭಗೊಳ್ಳಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದರು.
4 ದಿನಗಳಲ್ಲಿ ಗಿಡಗಳ ಟೊಂಗೆಗಳನ್ನು ಸಂರ್ಪೂಣವಾಗಿ ತೆರವುಗೊಳಿಸಲಾಗುವುದು ಎಂದು ತಿಳಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿ ಮೊಹ್ಮದ್ ಫಿರೋಜ್, ಗಿಡಗಳನ್ನು ಕಟಾವು ಮಾಡುವುದು ಹಾಗೂ ತೆರವುಗೊಳಿಸುವುದು ನಮ್ಮ ಕೆಲಸವಲ್ಲ. ನಾವು ಉದ್ಯಾನವನ ನಿರ್ವಹಣೆ ತರಬೇತಿ ಪಡೆದಿದ್ದೇವೆ ಎಂದರು. ಇದರಿಂದ ಅಸಮಾಧಾನಗೊಂಡ ಶಾಸಕರು, ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಉದ್ಯಾನಗಳು ನಿರ್ವಹಣೆಯಲ್ಲಿವೆ?, ಎಷ್ಟು ದುಸ್ಥಿತಿಯಲ್ಲಿವೆ? ಎಂದು ಪ್ರಶ್ನಿಸಿದಾಗ ಅಧಿಕಾರಿ ಉತ್ತರಿಸಲು ತಡಕಾಡಿದರು. ತುರ್ತು ಸಮಯದಲ್ಲಿ ನಮ್ಮ ಕೆಲಸ ಅದಲ್ಲ ಎಂಬುವುದು ಸರಿಯಲ್ಲ. ಎಲ್ಲ ಇಲಾಖೆಯವರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಆರ್‌ಎಫ್‌ಒ ಆರ್.ಎಸ್. ಉಪ್ಪಾರ, ಪಾಲಿಕೆ ಸಹಾಯಕ ಆಯುಕ್ತರು ಹಾಗೂ ಅಧಿಕಾರಿಗಳು ಹಾಜರಿದ್ದರು.
ಗೋಕುಲ ರಸ್ತೆ ವಿದ್ಯುತ್ ಸಮಸ್ಯೆ ಕುರಿತು ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸದಾ ಬ್ಯೂಸಿಯಾಗಿರುತ್ತದೆ ಎಂಬ ದೂರು ಶಾಸಕರಿಗೆ ಕೇಳಿಬಂದಿತು. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿ ಶಾಸಕರಿಗೆ ಮತ್ತೊಂದು ಮೊಬೈಲ್ ಸಂಖ್ಯೆ ನೀಡಿದರು. ಅದೂ ಸಹ 10 ನಿಮಿಷಕ್ಕೂ ಹೆಚ್ಚು ಕಾಲ ಬ್ಯೂಸಿ ಬಂದಿತು. ಈ ಕುರಿತು ಶಾಸಕರು ಅಧಿಕಾರಿಗಳನ್ನು ಕೇಳಿದಾಗ ಉತ್ತರಿಸಲು ತಡವರಿಸಿದರು.