ಚುನಾವಣೆ ಮುಗಿದರೂ ಕಚೇರಿಗೆ ಬರುತ್ತಿಲ್ಲ ಅಧಿಕಾರಿಗಳು

KannadaprabhaNewsNetwork | Updated : May 05 2024, 08:22 AM IST

ಸಾರಾಂಶ

ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವುದನ್ನು ಮರೆತು ಚುನಾವಣೆ ಮುಗಿದು ವಾರ ಕಳೆದರೂ ಅದರ ಗುಂಗಿನಿಂದ ಬಿಬಿಎಂಪಿ ಅಧಿಕಾರಿಗಳು ಹೊರಬಂದಂತೆ ಕಾಣುತ್ತಿಲ್ಲ. ಚುನಾವಣೆಯ ಹೆಸರಿನಲ್ಲಿ ಕಚೇರಿಗೆ ಬರದೇ ಜನಸಾಮಾನ್ಯರನ್ನು ಅಲೆಯುವಂತೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.

ಎಂ.ನರಸಿಂಹಮೂರ್ತಿ

  ಬೆಂಗಳೂರು ದಕ್ಷಿಣ :  ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವುದನ್ನು ಮರೆತು ಚುನಾವಣೆ ಮುಗಿದು ವಾರ ಕಳೆದರೂ ಅದರ ಗುಂಗಿನಿಂದ ಬಿಬಿಎಂಪಿ ಅಧಿಕಾರಿಗಳು ಹೊರಬಂದಂತೆ ಕಾಣುತ್ತಿಲ್ಲ. ಚುನಾವಣೆಯ ಹೆಸರಿನಲ್ಲಿ ಕಚೇರಿಗೆ ಬರದೇ ಜನಸಾಮಾನ್ಯರನ್ನು ಅಲೆಯುವಂತೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.

ಬೊಮ್ಮನಹಳ್ಳಿ ವಲಯದ ಅನೇಕ ಬಿಬಿಎಂಪಿ ಕಚೇರಿಗಳಲ್ಲಿ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ನಿಗದಿತ ಸಮಯಕ್ಕೆ ಕೆಲಸಕ್ಕೆ ಹಾಜರಾಗುವುದಿಲ್ಲ, ಬಂದರೂ ಸಭೆ ಇದೆ ಹಾಗೂ ಸ್ಥಳ ಪರಿವೀಕ್ಷಣೆ ಹೋಗಿದ್ದೇವೆ ಎಂದು ಸಬೂಬು ಹೇಳಿಕೊಂಡು ಕಚೇರಿಯ ಕೆಲಸಕ್ಕೆ ಬರುವ ಜನಸಾಮಾನ್ಯರ ಕೈಗೆ ಸಿಗುವುದೇ ಇಲ್ಲ.

ಕೆಲಸದ ಅವಧಿಯಲ್ಲಿ ಸ್ವಸ್ಥಾನಕ್ಕಿಂತ ಬಿಬಿಎಂಪಿಯ ಅಕ್ಕಪಕ್ಕದ ಟೀ ಅಂಗಡಿಗಳಲ್ಲಿ ಹೆಚ್ಚಾಗಿ ಕಾಲಕಳೆಯುವ ಅಧಿಕಾರಿಗಳು ಕಡತಗಳ ಕೆಲಸಗಳನ್ನು ಅಲ್ಲಿಂದಲೆ ಮಾಡುತ್ತಾ, ಲಂಚ ನೀಡಿದ ಕಡತಗಳನ್ನು ಮಾತ್ರ ವಿಲೇವಾರಿ ಮಾಡುವ ಕಾಯಕದಲ್ಲಿ ತೊಡಗಿ ಭ್ರಷ್ಟಾಚಾರ ಎಸೆಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕಂದಾಯ, ಕಟ್ಟಡ ನಕ್ಷೆ ಮಂಜೂರಾತಿ ಸೇರಿದಂತೆ ವಿವಿಧ ಬಿಬಿಎಂಪಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕಷ್ಟಪಟ್ಟು ದುಡಿದು ಸ್ವಂತ ಸೂರು ಹೊಂದುವ ಅನೇಕ ಬಡ ಹಾಗೂ ಮಧ್ಯಮ ವರ್ಗದ ಜನರೇ ಇವರ ಗುರಿಯಾಗಿದ್ದು, ಖಾತೆ, ಕಂದಾಯ, ನಕ್ಷೆ ಮಂಜೂರಾತಿ ಮಾಡಿಸಿಕೊಡುತ್ತೇವೆ ಎಂದು ಹಣ ಪೀಕುತ್ತಾರೆ. ಇದಕ್ಕೆ ಪರೋಕ್ಷವಾಗಿ ಅಧಿಕಾರಿಗಳ ಬೆಂಬಲವು ಮಧ್ಯವರ್ತಿಗಳಿಗಿದೆ.

ನೇರ ಬಾಗಿಲಿನಿಂದ ಕಡತ ಹೊತ್ತು ಬರುವ ಜನಸಾಮಾನ್ಯರ ಕೈಗೆ ಅಧಿಕಾರಿಗಳು ಸಿಗುವುದೇ ಇಲ್ಲ, ಹಲವು ಬಾರಿ ಅಲೆದರೂ ಕೆಲಸವಾಗಲ್ಲ. ಅಲ್ಲದೆ ಕಡತಗಳಲ್ಲಿ ಇಲ್ಲದ ಲೋಪದೋಷಗಳನ್ನು ಹುಡುಕಿ ತೊಂದರೆ ಕೊಡುತ್ತಾರೆ. ಜನಸಾಮಾನ್ಯರಿಗೆ ಸಿಗದ ಅಧಿಕಾರಿಗಳು ಮಧ್ಯವರ್ತಿಗಳಿಗೆ ಹೇಗೆ ಸಿಗುತ್ತಾರೆ? ಎಂಬುದು ಜನರ ಪ್ರಶ್ನೆ. ಲಂಚ ನೀಡದೆ ಯಾವುದೇ ಕಡತಗಳಿಗೆ ಸಹಿ ಹಾಕುವುದಿಲ್ಲ ಹಾಗೂ ಮುಂದಿನ ಟೇಬಲ್‌ಗೆ ವಿಲೇವಾರಿಯಾಗುವುದಿಲ್ಲ ಎಂಬುದು ಸಾರ್ವಜನಿಕರು ಬೇಸರಕ್ಕೆ ಕಾರಣವಾಗಿದೆ.

ಸರ್ಕಾರಿ ನಿಯಮಗಳಿಗೆ ಕ್ಯಾರೆ ಎನ್ನದ ಸಿಬ್ಬಂದಿ!

ಬೆಳಗ್ಗೆ 10 ಗಂಟೆಗೆ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಕಚೇರಿ ಅವಧಿ ಪೂರ್ಣವಾಗುವವರೆಗೆ ನಿಗದಿತ ಸ್ಥಾನದಲ್ಲಿರಬೇಕು. ಕಚೇರಿ ಅವಧಿಯಲ್ಲಿ ಅನ್ಯ ಕೆಲಸದ ಮೇಲೆ ತೆರಳಿದ್ರೆ, ಅದಕ್ಕೆ ಕಾರಣವೇನು ಅನ್ನೋದನ್ನ ನಮೂದಿಸಿ ಅಧಿಕಾರಿಗಳ ಪೂರ್ವಾನುಮತಿ ಪಡೆದುಕೊಳ್ಳಬೇಕು. ನೌಕಕರು ಕೆಲಸಕ್ಕೆ ತಡವಾಗಿ ಬಂದರೆ, ಕಚೇರಿ ಅವಧಿಯಲ್ಲಿ ಸ್ವಸ್ಥಾನದಲ್ಲಿ ಇಲ್ಲದಿದ್ದರೆ, ಮೇಲಧಿಕಾರಿಗಳ ಅನುಮತಿ ಪಡೆಯದಿದ್ದರೆ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿ ಆದೇಶ ಹೊರಡಿಸಿದ್ದರೂ ಕ್ಯಾರೆ ಎನ್ನುತ್ತಿಲ್ಲ

ಮೇಲಧಿಕಾರಿಗಳು ಕಚೇರಿಗಳಿಗೆ ದಿಢೀರ್ ಭೇಟಿಯನ್ನು ಯಾವ ಸಮಯದಲ್ಲಾದರೂ ನೀಡಿ, ಗೈರು ಹಾಜರಾತಿ ಕಂಡುಬಂದಲ್ಲಿ ಮತ್ತು ಕರ್ತವ್ಯ ಲೋಪವೆಸಗಿದಲ್ಲಿ ಸಿಬ್ಬಂದಿ ಸಂಬಳ ತಡೆ ಹಿಡಿಯಬೇಕು. ಸಾರ್ವಜನಿಕರ ಅಹವಾಲು ಆಲಿಸದ ಹಾಗೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದ ಹೊರತು ಇಂತಹ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಸಾಧ್ಯವಿಲ್ಲ.

– ಶೇಖರ್, ಸ್ಥಳೀಯ ನಿವಾಸಿ , ಬೇಗೂರು.

ವಲಯ ವ್ಯಾಪ್ತಿಗೆ ಬರುವ ಎಲ್ಲಾ ಕಚೇರಿಗಳಿಗೂ ಶೀಘ್ರದಲ್ಲಿಯೇ ಭೇಟಿ ನೀಡಲಾಗುವುದು. ಸಾರ್ವಜನಿಕರಿಗೆ ಸ್ಪಂದಿಸದ ಹಾಗೂ ಸರಿಯಾದ ಸಮಯಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಬಗ್ಗೆ ಮುಕ್ತವಾಗಿ ಯಾವುದೇ ಸಮಯದಲ್ಲಿ ನನ್ನನ್ನು ಭೇಟಿ ಮಾಡಬಹುದು.

- ಅಜಿತ್, ಬೊಮ್ಮನಹಳ್ಳಿ ವಲಯ ಆಯುಕ್ತರು.

Share this article