ಪಿಡಿಒ ಪರೀಕ್ಷೆ ಗೊಂದಲಕ್ಕೆ ಅಧಿಕಾರಿಗಳೇ ಕಾರಣ!

KannadaprabhaNewsNetwork | Published : Nov 30, 2024 12:47 AM

ಸಾರಾಂಶ

Officials are responsible for PDO exam confusion!

- "ಕನ್ನಡಪ್ರಭ " ಫೋನ್‌ ಇನ್‌ ನೇರ ಕಾರ್ಯಕ್ರಮದಲ್ಲಿ ನೊಂದ ಅಭ್ಯರ್ಥಿಗಳ ಅಳಲು

- ತಮ್ಮ ತಪ್ಪು ಮುಚ್ಚಿ ಹಾಕಲು ಅಭ್ಯರ್ಥಿಗಳ ಮೇಲೆ ದೂರು ದಾಖಲು ಆರೋಪ

- ಸಿಂಧನೂರು ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ ಕನ್ನಡಪ್ರಭ ವಾರ್ತೆ ಯಾದಗಿರಿ

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಇಲಾಖೆ ಕಲ್ಯಾಣ ಕರ್ನಾಟಕ ಭಾಗದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 97 ಖಾಲಿ ಹುದ್ದೆಗಳ ಭರ್ತಿಗಾಗಿ ನ.17ರಂದು ವಿವಿಧೆಡೆ ಲಿಖಿತ ಪರೀಕ್ಷೆ ನಡೆಸಲಾಗಿದ್ದು, 74 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರು.

ಅಂದು ರಾಯಚೂರು ಜಿಲ್ಲೆ ಸಿಂಧನೂರಿನ ಸರ್ಕಾರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಉಂಟಾದ ಗೊಂದಲ, ನಿಗದಿತ ಸಮಯ ಮೀರಿ ಸುಮಾರು 30 ನಿಮಿಷ ಪ್ರಶ್ನೆ ಪತ್ರಿಕೆ ನೀಡುವಲ್ಲಾದ ವಿಳಂಬ, ಖಾಸಗಿ ಶಾಲೆ ವಾಹನದಲ್ಲಿ ಪ್ರಶ್ನೆಪತ್ರಿಕೆ ತರಿಸಿದ ರೀತಿ, ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಮೊದಲೇ ತೆರೆದು ತಂದಿರುವುದು, ಒಎಂಆರ್‌ ಶೀಟ್‌ ಅದಲು ಬದಲು, ಸೋರಿಕೆ ಶಂಕೆ ಮುಂತಾದ ಅವ್ಯವಸ್ಥೆಗಳಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ರಸ್ತೆ ಹೋರಾಟ ನಡೆಸಿದ್ದರು. ಇದು ರಾಜ್ಯವ್ಯಾಪಿ ಭಾರಿ ಚರ್ಚೆಗೆ ಗ್ರಾಸವಾಗಿತ್ತಲ್ಲದೆ, ಪರೀಕ್ಷೆ ನಡೆಸುವ ಹೊಣೆ ಹೊತ್ತಿದ್ದ ಕೆಪಿಎಸ್‌ಸಿ ಆಡಳಿತ ವೈಖರಿ ಬಗ್ಗೆ ಆರೋಪ ಕೇಳಿ ಬಂದಿದ್ದವು.

ಈ ಗೊಂದಲ, ಪ್ರತಿಭಟನೆಯ ನಂತರ ಎಚ್ಚೆತ್ತ ಪರೀಕ್ಷಾ ಅಧಿಕಾರಿಗಳು ತಮ್ಮಿಂದಾದ ತಪ್ಪನ್ನು ಮರೆ ಮಾಚಲು, ಅವ್ಯವಸ್ಥೆ ಪ್ರಶ್ನಿಸಿದ ಪರೀಕ್ಷಾರ್ಥಿಗಳ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆಂಬ ಆರೋಪವಿದ್ದು, ಸಿಂಧನೂರಿನ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದ ಯಾದಗಿರಿ ಜಿಲ್ಲೆಯ 840 ಅಭ್ಯರ್ಥಿಗಳ ಬದುಕು-ಭವಿಷ್ಯದ ಪ್ರಶ್ನೆಯಾಗಿ ಈ ಘಟನೆ ಕಾಡತೊಡಗಿದೆ. ರಸ್ತೆತಡೆ ಪ್ರತಿಭಟನೆಗಳ ಹಿನ್ನೆಲೆ ಜಿಲ್ಲೆಯ 12 ಜನ ಅಭ್ಯರ್ಥಿಗಳ ವಿರುದ್ಧ ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇವರಲ್ಲದೆ ಇನ್ನುಳಿದ 800ಕ್ಕೂ ಹೆಚ್ಚು ಅಭ್ಯರ್ಥಿಗಳು ಮುಂದೇನು ಮಾಡುವುದು ಎಂದು ಕೈಚೆಲ್ಲಿ ಕುಳಿತಿದ್ದಾರೆ. ತಮಗಾದ ಅನ್ಯಾಯಕ್ಕೆ ದನಿಯೆತ್ತಿರುವ ನೊಂದ ಅಭ್ಯರ್ಥಿಗಳು, ಸಿಎಂ ಆದಿಯಾಗಿ ಸಚಿವರು, ಶಾಸಕರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅಲೆದಾಡುತ್ತಿದ್ದಾರೆ.

ಅಭ್ಯರ್ಥಿಗಳ ಸಮಸ್ಯೆ ಹಿನ್ನೆಲೆ ಕನ್ನಡಪ್ರಭ ಶುಕ್ರವಾರ ನೇರ ಫೋನ್‌ ಇನ್‌ ಕಾರ್ಯಕ್ರಮ ಆಯೋಜಿಸಿತ್ತು. ನಿಗದಿಯಂತೆ, ಬೆಳಗ್ಗೆ 10.30ಕ್ಕೆ ಆರಂಭವಾದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕರೆಗಳ ಮಹಾಪೂರವೇ ಹರಿದು ಬಂದಿತ್ತು. 2 ಗಂಟೆ 35 ನಿಮಿಷ ನಡೆದ ಈ ಕಾರ್ಯಕಮದಲ್ಲಿ ಯಾದಗಿರಿ ಜಿಲ್ಲೆ ಸೇರಿ, ಧಾರವಾಡ, ವಿಜಯಪುರ, ವಿಜಯನಗರ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಹಾಸನ, ಬಾಗಲಕೋಟೆ ಮುಂತಾದ ಕಡೆಗಳಿಂದ ಅಭ್ಯರ್ಥಿಗಳು ಕರೆ ಮಾಡಿ ನೋವು ತೋಡಿಕೊಂಡರು. ಮಕ್ಕಳ ಈ ಅನ್ಯಾಯದ ವಿರುದ್ಧ ಫೋನಾಯಿಸಿದ ರೈತ ಮುಖಂಡರು ಸರ್ಕಾರದ ವಿರುದ್ಧ ಮಾತಿನ ಚಾಟಿ ಬೀಸಿದರು.====ಬಾಕ್ಸ್‌=======

- "ಕ್ವೆಶ್ಚನ್‌ ಪೇಪರ್‌ " ಯಾಕೆ ಕೊಟ್ಟಿಲ್ಲ ಅಂದಿದ್ದಕ್ಕೆ ಕೇಸ್ ಹಾಕಿದ್ರು...

ಪ್ರಶ್ನೆ ಪತ್ರಿಕೆ ಕೊಡದಿದ್ದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ದಾಖಲಾದ ದೂರು ತಮ್ಮ ಭವಿಷ್ಯಕ್ಕೆ ಮಾರಕವಾಗಲಿದೆ. ಪರೀಕ್ಷೆ ಕೇಂದ್ರದ ಅಧಿಕಾರಿಗಳು ತಮ್ಮ ತಪ್ಪು ಮರೆಮಾಚಲು ಅಮಾಯಕ ಅಭ್ಯರ್ಥಿಗಳ ಮೇಲೆ ದೂರು ಸಲ್ಲಿಸಿದ್ದಾರೆ ಎಂದು ಬಾಬು, ವೆಂಕಟೇಶ, ಅಯ್ಯನಗೌಡ, ರವಿ ಮುಂತಾದವರು ಆರೋಪಿಸಿದರು. ಅಲ್ಲಾದ ಪ್ರಮಾದಗಳ ಪಟ್ಟಿಯನ್ನು ಬಿಚ್ಚಿಟ್ಟ ಅವರು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸರ್ಕಾರಕ್ಕೆ ಆಗ್ರಹಿಸಿದರು.

-----

ಖಾಸಗಿ ಶಾಲಾ ವಾಹನದಲ್ಲಿ ಯಾವುದೇ ಭದ್ರತೆ ಅಥವಾ ನಿಯೋಜಿತ ಅಭ್ಯರ್ಥಿಗಳಿರದೆ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆಗಳನ್ನು ತಂದಿರುವುದು, ಕೇಂದ್ರಕ್ಕೆ ಪ್ರವೇಶ ಮುನ್ನ ಪರೀಕ್ಷಾರ್ಥಿಗಳ ತಪಾಸಣೆ, ದೃಶ್ಯ ಚಿತ್ರೀಕರಣಕ್ಕೆ ವಿದ್ಯಾರ್ಥಿಗಳ ಬಳಕೆ, 25-30 ನಿಮಿಷ ವಿಳಂಬವಾಗಿ ಪ್ರಶ್ನೆ ಪತ್ರಿಕೆ ಹಂಚಿಕೆ, ಪ್ರಶ್ನೆಪತ್ರಿಕೆಗಳುಳ್ಳ ಬಂಡಲ್ ಮೊದಲೇ ತೆರೆದಿರುವುದು, ಯಾರದ್ದೋ ಒಎಂಆರ್ ಶೀಟಿಗೆ ಇನ್ನಾರೋ ಅಭ್ಯರ್ಥಿಗಳು ಸಹಿ ಮಾಡಿರುವುದು ಮುಂತಾದ ಗೊಂದಲಗಳ ಬಗ್ಗೆ ಅಭ್ಯರ್ಥಿಗಳು ದೂರಿದರು.

ಅವ್ಯವಸ್ಥೆಯನ್ನು ಸರಿಪಡಿಸಬೇಕಾದ ಕೆಪಿಎಸ್‌ಸಿ ಅಧಿಕಾರಿಗಳು, ಎಲ್ಲವೂ ಸರಿಯಾಗಿದೆ ಎಂದು ತೇಪೆ ಹಾಕುವಲ್ಲಿ ಮುಂದಾಗಿರುವುದು ಸರಿಯಲ್ಲ ಎಂದು ಟೀಕಿಸಿದ ಅಭ್ಯರ್ಥಿಗಳು, ವಾಸ್ತವ ಅರಿತು ಕ್ರಮಕ್ಕೆ ಮುಂದಾಗಲಿ. ದೂರು ದಾಖಲಿಸುವ ಮೂಲಕ ಪ್ರಶ್ನಿಸುವ ಹಕ್ಕನ್ನೇ ಕಸಿದುಕೊಂಡಿದ್ದಾರೆ ಎಂದು ಕಿಡಿ ಕಾರಿದರು. ಅಭ್ಯರ್ಥಿಯೊಬ್ಬನ ಮೇಲೆ ಅಧಿಕಾರಿಯೊಬ್ಬರು ನಡೆಸಿದ ಹಲ್ಲೆ ಅಮಾನವೀಯ ಎಂದು ಆತಂಕ ವ್ಯಕ್ತಪಡಿಸಿದರು.

ಆಂಜನೇಯ, ಶ್ರೀಕಾಂತ, ಚೆನ್ನಪ್ಪ, ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ರಾಜಕೀಯ ಮುಖಂಡ ಮಾಣಿಕರೆಡ್ಡಿ ಕುರಕುಂದಾ, ಮಂಜುನಾಥ ಮುಂತಾದವರು ಮಾತನಾಡಿದರು. ಸರ್ಕಾರ ವಾಸ್ತವ ಅರಿತು ಅಭ್ಯರ್ಥಿಗಳಿಗಾದ ಈ ಅನ್ಯಾಯ ಸರಿಪಡಿಸುವಂತೆ, ಪಿಡಿಒ ಮರುಪರೀಕ್ಷೆ ನಡೆಸುವಂತೆ ಆಗ್ರಹಿಸಿದರು.

Share this article