ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವ ಮಧ್ಯವರ್ತಿಗಳ ಕೆಲಸಕ್ಕೆ ಸೀಮಿತವಾಗದೇ ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ರೈತರಿಗೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಕೃಷಿ ಕ್ಷೇತ್ರವನ್ನು ಲಾಭದಾಯಕವನ್ನಾಗಿ ಮಾಡಲು ಒತ್ತು ನೀಡಬೇಕು ಎಂದು ಶಾಸಕ ಎಚ್.ಟಿ.ಮಂಜು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ, ಅರಣ್ಯ ಕೃಷಿ, ತೋಟಗಾರಿಕಾ ಬೆಳೆಗಳು ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುವುದು, ಕುರಿ ಮತ್ತು ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ, ಅಣಬೆ ಬೇಸಾಯ ಮತ್ತಿತರ ಕೃಷಿ ಚಟುವಟಿಕೆಗಳ ಬಗ್ಗೆಯೂ ರೈತ ಸಮೂಹಕ್ಕೆ ಅರಿವು ಮೂಡಿಸಿ ಜಾಗೃತಿಗೊಳಿಸಿ, ಉತ್ತೇಜಿಸಬೇಕು ಎಂದರು.
ಅಭಿವೃದ್ಧಿ ವಿಚಾರದಲ್ಲಿ ನಾನು ಎಂದಿಗೂ ಪಕ್ಷ ರಾಜಕಾರಣ ಮಾಡಲ್ಲ. ಕೃಷಿ ಇಲಾಖೆ ಸರ್ಕಾರದ ಸವಲತ್ತುಗಳ ವಿತರಣೆ ಮಾಡುತ್ತಿದೆ. ಕೃಷಿಕ ಸಮಾಜದ ಸದಸ್ಯರೂ ಇದಕ್ಕೆ ಕೈಜೋಡಿಸಬೇಕು. ಕೃಷಿಕ ಸಮಾಜದ ರೈತ ಪರವಾದ ಎಲ್ಲ ಕಾರ್ಯಯೋಜನೆಗಳಿಗೂ ನನ್ನ ಸಹಕಾರ ಇರುತ್ತದೆ ಎಂದರು.ನರೇಗಾ ಯೋಜನೆಯಡಿ ಕೃಷಿಹೊಂಡ ನಿರ್ಮಾಣವನ್ನು ಕೈಬಿಟ್ಟಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಯೋಜನೆಗಳು ಜಾರಿಗೊಂಡರೂ ಅದರಲ್ಲಿ ಒಂದಷ್ಟು ಲೋಪಗಳು ಇದ್ದೇ ಇರುತ್ತವೆ. ಅಧಿಕಾರಿಗಳು ಯೋಜನೆಗಳ ಅನುಷ್ಠಾನದ ವೇಳೆ ಕಂಡು ಬರುವ ಲೋಪ ಸರಿಪಡಿಸಬೇಕು. ಅದನ್ನು ಬಿಟ್ಟು ಯೋಜನೆಯನ್ನೆ ಸ್ಥಗಿತಗೊಳಿಸುವುದು ಸರಿಯಲ್ಲ ಎಂದರು.
ಮಂಡ್ಯ ಜಿಲ್ಲೆಯನ್ನು ಅಡಿಕೆ ಬೆಳೆ ಪ್ರದೇಶ ಎಂದು ಪರಿಗಣಿಸದಿರುವುದರಿಂದ ಅಡಿಕೆ ಬೆಳೆಗಾರರಿಗೆ ಸರ್ಕಾರದ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ. ಈ ಬಗ್ಗೆ ರಾಜ್ಯ ಕೃಷಿ ಮತ್ತು ತೋಟಗಾರಿಕಾ ಸಚಿವರೊಂದಿಗೆ ಪ್ರಸ್ತಾಪಿಸಿ ಮಂಡ್ಯ ಜಿಲ್ಲೆಯನ್ನು ಅಡಿಕೆ ಕೃಷಿ ಕ್ಷೇತ್ರದ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತೇನೆ ಎಂದರು.