ಶಾಸಕ ಬಾಲಕೃಷ್ಣ ಖಡಕ್ ಸೂಚನೆ । ಕುದೂರು ಗ್ರಾಪಂನಲ್ಲಿ ಜನಸ್ಪಂದನ ಕಾರ್ಯಕ್ರಮ
ನೀವು ಸರಿಯಾಗಿ ಕೆಲಸ ಮಾಡದೇ ಹೋದರೆ ಜಿಲ್ಲಾಧಿಕಾರಿಗಳಿಗೆ ರಿಪೋರ್ಟ್ ಮಾಡಬೇಕಾಗುತ್ತದೆ. ಇಷ್ಟವಿಲ್ಲದೇ ಹೋದರೆ ನಿಮಗಿಷ್ಟ ಬಂದ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿ. ಇಲ್ಲಿದ್ದ ಮೇಲೆ ಕೆಲಸ ಮಾಡದೇ ನಿಮಗೆ ಬೇರೆ ದಾರಿ ಇಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಕುದೂರು ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಶಾಸಕರ ಜನಸ್ಪಂದನ ಕಾರ್ಯಕ್ರಮದಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕ ಬಾಲಕೃಷ್ಣ , ಅಧಿಕಾರಿಗಳು ಯಾವುದೇ ಮಾಹಿತಿ ತೆಗೆದುಕೊಂಡು ಬಾರದೆ ನೆಂಟರ ಮನೆಗೆ ಬಂದಂತೆ ಬರುತ್ತೀರಾ? ಗ್ರಾಮಾಂತರ ಪ್ರದೇಶದಲ್ಲಿ ಶಾಸಕರ ಸಭೆ ನಡೆಯುವಾಗ ರೈತಾಪಿ ಜನರು, ಮಹಿಳೆಯರು ಇಲ್ಲಿರುತ್ತಾರೆ. ಆಗ ನೀವು ಮೀಟಿಂಗ್ ಮತ್ತಿತರೆ ಸಬೂಬು ಹೇಳುವಂತಿಲ್ಲ. ಜನಸ್ಪಂದನೆ ಸಭೆಯ ದಿನ ಮುಖ್ಯಮಂತ್ರಿಯವರೇ ನಿಮ್ಮನ್ನು ಸಭೆ ಕರೆದರೂ ಹೋಗುವಂತಿಲ್ಲ. ನನ್ನ ತಾಲೂಕಿನ ಕಡೆಗೆ ಗಮನ ಕೊಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಕಳೆದ ತಿಂಗಳ ಅರ್ಜಿಗಳಿಗೆ ನ್ಯಾಯ ದೊರೆತಿದೆಯಾ?
ಜನರು ಆಡಳಿತದ ಮೇಲೆ ಭರವಸೆ ಕಳೆದುಕೊಳ್ಳುತ್ತಿರುವುದು ಈ ಕಾರಣಕ್ಕಾಗಿಯೇ? ನಿಮ್ಮ ಜವಾಬ್ಧಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ ಇಂತಹ ಜನಸ್ಪಂದನ ಕಾರ್ಯಕ್ರಮದ ಅವಶ್ಯಕತೆಯೇ ಇರುತ್ತಿರಲಿಲ್ಲ. ಇನ್ನು ನಾನು ಸುಮ್ಮನೆ ಕೂಡುವ ಮನುಷ್ಯ ಅಲ್ಲ. ಆಯಾಯ ದಿನ ಅರ್ಜಿಗಳು ಅಂದಂದೇ ಪರಿಹಾರ ಕಾಣಬೇಕು. ಇಲ್ಲದೇ ಹೋದರೆ ಖಂಡಿತವಾಗಿಯೂ ನಾನು ನಿಮ್ಮನ್ನು ಮನೆಗೆ ಕಳಿಸುವುದು ನಿಶ್ಚಿತ ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜನರು ಗೊಂದಲಕ್ಕೊಳಗಾಗದೇ ಸಮಸ್ಯೆ ಪರಿಹಾರ ಕಂಡುಕೊಂಡು ಹೋಗುವ ಇಲ್ಲಿನ ಆಡಳಿತ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
-------------
ಕುದೂರು ಗ್ರಾಪಂ ಅವರಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಜನರ ಅಹವಾಲು ಆಲಿಸಿದರು.