ಕೊಪ್ಪಳ: ಗುಡಿಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಕುರಿತು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸುತ್ತಿದ್ದಂತೆ ಶನಿವಾರ ರಜೆಯ ದಿನವಾಗಿದ್ದರೂ ಅಧಿಕಾರಿಗಳು ದೌಡಾಯಿಸಿದ್ದಾರೆ. ಅಷ್ಟೇ ಅಲ್ಲ,ಗ್ರಾಮಸ್ಥರೊಂದಿಗೆ ಸಮಸ್ಯೆ ಅರಿತು ಕೂಡಲೇ ಟ್ಯಾಂಕರ್ ನೀರು ಪೂರೈಕೆ ಮಾಡಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದು ನಿಜ.ಗ್ರಾಮದವರು ಸಮಸ್ಯೆ ಎದುರಿಸುತ್ತಿರುವುದರಿಂದ ತುರ್ತಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ ಎಂದರು.
ಗುಡಿಗೇರಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ನಿಗಿಸಲು ಶತಾಯಗತಾಯ ಶ್ರಮಿಸಲಾಗುತ್ತಿದೆ.ಗ್ರಾಮದಲ್ಲಿಯೇ ಸಂಪ್ ನಿರ್ಮಾಣ ಮಾಡಿ ಅದಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತದೆ. ಸ್ಥಳೀಯವಾಗಿಯೂ ತುರ್ತು ಸಂದರ್ಭದಲ್ಲಿ ಬೇಕಾಗುತ್ತದೆ ಎಂದು ಬೋರವೆಲ್ ಹಾಕಲಾಗಿದೆ.ಆದರೆ, ಬೋರವೆಲ್ ನಲ್ಲಿ ನೀರು ಬರುತ್ತಿಲ್ಲ. ವಾರದ ಹಿಂದೆಯೇ ಮತ್ತೊಂದು ಬೋರವೆಲ್ ಕೊರೆಯಿಸಲಾಗಿದೆ. ಈಗ ಪುನಃ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲಿಯಾದರೂ ನೀರು ಇದೆಯೂ ಎಂದು ಚೆಕ್ ಮಾಡಿಕೊಂಡು ಬೋರವೆಲ್ ಕೊರೆಸಲಾಗುವುದು. ಹಾಗೆಯೇ ತುಂಗಭದ್ರಾ ನದಿಯಿಂದ ಬಹುಗ್ರಾಮಗಳ ಯೋಜನೆಯ ಮೂಲಕ ನೀರು ಪೂರೈಕೆ ತೊಂದರೆಯಾಗದಂತೆ ಕ್ರವಹಿಸಲು ಸೂಚಿಸಲಾಗಿದೆ. ಹಾಗೊಂದು ವೇಳೆ ಸಮಸ್ಯೆಯಾದ ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.ಗ್ರಾಪಂ ಅಧಿಕಾರಿಗಳು ಸೇರಿದಂತೆ ಅನೇಕರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಇತ್ಯರ್ಥ ಮಾಡಲಾಗಿದೆ. ಇದರಿಂದ ಗುಡಿಗೇರಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.