ಕನ್ನಡಪ್ರಭ ವಾರ್ತೆ ಹೊಸಪೇಟೆ
ಸರ್ಕಾರದ ಪ್ರತಿಯೊಂದು ಯೋಜನೆಗಳ ಅನುಷ್ಠಾನದ ಮಹತ್ವದ ಹೊಣೆಗಾರಿಕೆಯನ್ನು ಹೊಂದಿರುವ ಅಧಿಕಾರಿಗಳು ಮೈಚಳಿ ಬಿಟ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿ ಹತ್ತಾರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳು ಸಭೆಯಲ್ಲಿ ತಿಳಿಸಿದಂತೆ ಕಾರ್ಯಪ್ರವೃತ್ತರಾಗಲು ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ಸಹಕಾರ, ಸಮನ್ವಯ ಅತಿಅವಶ್ಯಕವಾಗಿದೆ ಎಂದು ತಿಳಿಸಿದರು.ಅಧಿಕಾರಿಗಳು ಸಹ ಜನಪ್ರತಿನಿಧಿಗಳ ಹಾಗೆ ಜನ ಸೇವಕರು ಎಂಬುದಾಗಿ ತಿಳಿಯಬೇಕು. ಕಾರ್ಯಾಂಗ ಮತ್ತು ಶಾಸಕಾಂಗ ಈಗ ಮತ್ತಷ್ಟು ಗುಣಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ಮಾಹಿತಿಯು ಅಧಿಕಾರಿಗಳ ಅಂಗೈಯಲ್ಲಿರುವಂತೆ ಕೆಲಸ ಮಾಡಬೇಕು ಎಂಬುದಾಗಿ ಸಭೆಯಲ್ಲಿ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತಿಳಿಸಿದ್ದಾರೆ. ಅದರಂತೆ ಎಲ್ಲ ಅಧಿಕಾರಿಗಳು ಸಹ ಗುಣಾತ್ಮಕವಾಗಿ ಕಾರ್ಯನಿರ್ವಹಿಸಿ ಜಿಲ್ಲಾಡಳಿತಕ್ಕೆ ಮತ್ತಷ್ಟು ಬಲ ತುಂಬಬೇಕಿದೆ ಎಂದರು.
ಉತ್ತಮವಾಗಿ ಕಾರ್ಯ ಮಾಡುವುದರ ಮೂಲಕ ಸಾರ್ವಜನಿಕರು ತಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು. ಬಡವರು ಕೃಷಿ ಕಾರ್ಮಿಕರು ನೊಂದವರ ಬಗ್ಗೆ ಅನುಕಂಪ, ಅಂತಃಕರಣವಿಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಅರ್ಜಿದಾರರು ಅನವಶ್ಯಕವಾಗಿ ಕಚೇರಿಗೆ ಅಲೆಯುವಂತೆ ಮಾಡಬಾರದು. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದು, ನಿಯಮಾನುಸಾರ ಕಾಲಮಿತಿಯೊಳಗೆ ಕಡತ ವಿಲೇವಾರಿಯಂತಹ ಕಾರ್ಯಗಳ ಮೂಲಕ ಅಧಿಕಾರಿಗಳು ತಮ್ಮ ಕಚೇರಿಯಲ್ಲಿನ ಸಿಬ್ಬಂದಿಗೆ ಮಾದರಿಯಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ಜಿಲ್ಲೆಯ ರೈತರ ಸಭೆ ಕರೆದು ಅವರಿಗೆ ನಾನಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸಕಾಲಕ್ಕೆ ಬೀಜ, ಗೊಬ್ಬರ ವಿತರಣೆಗೆ ಕ್ರಮ ವಹಿಸಬೇಕು. ರೈತರ ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ವಿಳಂಬ ಮಾಡದೇ ಪಾರದರ್ಶಕತೆ ಕಾಯ್ದುಕೊಂಡು ಬೇಗನೆ ಪರಿಹಾರ ದೊರಕುವಂತೆ ಮಾಡಿ ಸಂತ್ರಸ್ಥರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕು. ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡುಗಳು ಸಿಗುವ ಹಾಗೆ ಆಹಾರ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡೆಂಘೀಯನ್ನು ಕೂಡಲೇ ನಿಯಂತ್ರಣಕ್ಕೆ ತರಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವೈದ್ಯಾಧಿಕಾರಿಗಳು ತಾಲೂಕು ಮಟ್ಟದ ವೈದ್ಯಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸಬೇಕು. ಮಳೆಗಾಲ ಹಿನ್ನೆಲೆಯಲ್ಲಿ ಡೆಂಘೀ ಜೊತೆಗೆ ಬೇರೆ ಬೇರೆ ಕಾಯಿಲೆಗಳು ಉಲ್ಬಣಿಸುತ್ತಿದ್ದು ಬೇರೆ ಬೇರೆ ಕಾಯಿಲೆಯಿಂದ ಬಳಲಿ ಸಾರ್ವಜನಿಕರು ಆಸ್ಪತ್ರೆಗೆ ಬಂದಲ್ಲಿ ಬೆಡ್ ಭರ್ತಿ ನೆಪದಲ್ಲಿ ಯಾರನ್ನು ವಾಪಾಸ್ ಕಳಿಸಬಾರದು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಶಾ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಸಹಾಯಕ ಆಯುಕ್ತರಾದ ಚಿದಾನಂದ ಗುರುಸ್ವಾಮಿ, ನಗರಸಭೆ ಪೌರಾಯುಕ್ತರಾದ ಮನೋಹರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಇದ್ದರು.