ಕನ್ನಡಪ್ರಭ ವಾರ್ತೆ ಹುಣಸೂರು
ತಂಬಾಕು ಮಂಡಳಿ ಅಧಿಕಾರಿಗಳು ರೈತಪರ ನಿಲುವಿನೊಂದಿಗೆ ಕರ್ತವ್ಯ ನಿರ್ವಹಿಸಬೇಕೆಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೂಚಿಸಿದರು.ತಂಬಾಕಿನ ದರ ದಿಢೀರ್ ಕುಸಿತ ಕಂಡ ಹಿನ್ನೆಲೆ ತಾಲೂಕಿನ ಕಟ್ಟೆಮಳಲವಾಡಿಯ ಡಿ. ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿ ರೈತರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅವರು ಮಾತನಾಡಿದರು.
ತಂಬಾಕಿನ ಸರಾಸರಿ ದರ ಮತ್ತು ತರಗು ತಂಬಾಕು ಖರೀದಿ ಕುರಿತಂತೆ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರೈತರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ಸತ್ಯವಾಗಿದೆ. ಇಂತಹ ಸಂದರ್ಭದಲ್ಲಿ ಮಂಡಳಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ರೈತರನ್ನು ಕಡೆಗಣಿಸುವ ಕಾರ್ಯ ಮಾಡಬಾರದು. ನೀವೆಂದೂ ರೈತಪರವಾಗಿಯೆ ಇರಬೇಕು ಎಂದು ತಾಕೀತು ಮಾಡಿದರು.ಶೀಘ್ರದಲ್ಲಿ ಸಭೆ ನಡೆಸಲಿದ್ದೇನೆ:
ಸಭೆಯಲ್ಲಿ ರೈತ ಮುಖಂಡರು ಮಾತನಾಡಿ, ಕಳೆದ ಸಾಲಿಗಿಂತ ಈ ಬಾರಿ ಉತ್ತಮ ತಂಬಾಕು ಸೇರಿದಂತೆ ಸರಾಸರಿ ದರದಲ್ಲಿ ಈಗಾಗಲೇ 20 ರಿಂದ 30 ರು.ಗಳ ಕುಸಿತ ಕಂಡಿದೆ. ಮಾರುಕಟ್ಟೆ ಆರಂಭದ ದಿನ ಕೆಜಿಗೆ 250 ರು. ಗಳಿಗಿಂತ ಕಡಿಮೆ ದರ ಆಗದಂತೆ ಕ್ರಮವಹಿಸುವುದಾಗಿ ಮಂಡಳಿ ಅಧಿಕಾರಿಗಳು ಮತ್ತು ಖರೀದಿ ಕಂಪನಿಗಳು ಭರವಸೆ ನೀಡಿದ್ದವು. ಆದರೆ ಇದೀಗ ಕೆಜಿಗೆ 230 ರು. ಗಳಿಗೆ ಇಳಿದಿದೆ. ಇದನ್ನು ವಿರೋಧಿಸಿ ಎರಡು ದಿನಗಳ ಹಿಂದೆ ಮಾರುಕಟ್ಟೆಯನ್ನು ಕೆಲಕಾಲ ಬಂದ್ ಮಾಡಿ ನಮ್ಮ ಆಕ್ರೋಶ ವ್ಯಕ್ತಪಡಿಸಿದ್ದೇವೆ ಎಂದರು.ಈ ನಡುವೆ ತರಗು ತಂಬಾಕನ್ನು ಖರೀದಿ ಕಂಪನಿಗಳು ಖರೀದಿಸುತ್ತಿಲ್ಲ ಏಕೆ? ಕಳೆದ ಸಾಲಿನಲ್ಲಿ ತರಗು ತಂಬಾಕಿಗೂ ಉತ್ತಮ ದರ ದೊರಕಿತ್ತು. ಹೀಗೆ ಮುಂದುವರೆದರೆ ಈ ಬಾರಿ ರೈತರು ಸಂಕಷ್ಟದಲ್ಲಿ ಸಿಲುಕಲಿದ್ದು, ಖರೀದಿದಾರರು ಮತ್ತು ಮಂಡಳಿ ಅಧಿಕಾರಿಗಳ ಸಭೆ ಆಯೋಜಿಸಿ ಸೂಕ್ತ ಭರವಸೆ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಸಂಸದ ಒಡೆಯರ್ ಮಾತನಾಡಿ, ಮಾರುಕಟ್ಟೆ ಆರಂಭಕ್ಕೆ ಮುಂಚೆಯೇ ಖರೀದಿ ಕಂಪನಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ. ಹಾಗಾಗಿ ಈ ತಿಂಗಳಾಂತ್ಯದೊಳಗೆ ಸಭೆ ಆಯೋಜಿಸಿ ಕಂಪನಿಗಳಿಗೆ ಉತ್ತಮ ದರ ನೀಡುವಂತೆ ತಾಕೀತು ಮಾಡಲಿದ್ದೇನೆ. ಅಂದಿನ ಸಭೆಯಲ್ಲಿ ನೀವೆಲ್ಲರೂ ಪಾಲ್ಗೊಂಡು ನಿಮ್ಮ ದೂರುಗಳ ಕುರಿತು ಚರ್ಚಿಸಿ ಉತ್ತಮ ತೀರ್ಮಾನ ತೆಗೆದುಕೊಳ್ಳೋಣ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲವೆಂದು ತಿಳಿಸಿದರು.ಸಭೆಯಲ್ಲಿ ತಂಬಾಕು ಮಂಡಳಿ ಉಪಾಧ್ಯಕ್ಷ ಬಸವರಾಜಪ್ಪ, ಸದಸ್ಯ ದಿನೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಕಾಂತರಾಜು, ಗಣೇಶ್ ಕುಮಾರಸ್ವಾಮಿ,ಹನಗೋಡು ಮಂಜುನಾಥ್, ರೈತಮುಖಂಡರಾದ ಉಂಡುವಾಡಿ ಚಂದ್ರೇಗೌಡ,, ತಟ್ಟೆಕೆರೆ ಶ್ರೀನಿವಾಸ್, ಮೋದೂರು ಶಿವಣ್ಣ, ಬಿ.ಎನ್.ನಾಗರಾಜಪ್ಪ, ಮೋದೂರು ಮಹೇಶ್, ಸತೀಶ್, ಅಗ್ರಹಾರ ರಾಮೇಗೌಡ, ನಿಲುವಾಗಿಲು ಪ್ರಭಾಕರ್, ಆರ್.ಎಂ.ಒ.ಲಕ್ಷ್ಮಣ್ ರಾವ್, ಹರಾಜು ಅಧೀಕ್ಷಕರು ಮತ್ತು ಸಿಬ್ಬಂದಿ ಇದ್ದರು.