ಸರ್ಕಾರದಲ್ಲಿ ಅಗತ್ಯಕ್ಕಿಂತ ಸಾಕಷ್ಟು ಅನುದಾನ ಲಭ್ಯವಿದೆ: ಶಾಸಕ ನಾಗೇಂದ್ರ

KannadaprabhaNewsNetwork |  
Published : Jul 22, 2025, 12:15 AM IST
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2022-23 ನೇ ಸಾಲಿನ ಸಚಿವರ ವಿಶೇಷ ಅನುದಾನದಡಿ ಆಯ್ಕೆಯಾದ 150 ಫಲಾನುಭವಿಗಳಿಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ದ್ವಿಚಕ್ರ ವಾಹನಗಳನ್ನು ಸೋಮವಾರ ವಿತರಿಸಿದರು. | Kannada Prabha

ಸಾರಾಂಶ

ವಿವಿಧ ಇಲಾಖೆಗಳ ಅಧಿಕಾರಿಗಳು ಜನರಿಗೆ ಯಾವ ಯಾವ ಸೌಲಭ್ಯ ನೀಡಬೇಕು ಎಂಬುದನ್ನು ಮೊದಲೇ ಗಮನಿಸಬೇಕು.

ಬಳ್ಳಾರಿ ತಾಪಂ ಪ್ರಗತಿ ಪರಿಶೀಲನಾ ಸಭೆ

ಸರ್ಕಾರದಲ್ಲಿ ಸಾಕಷ್ಟು ಅನುದಾನ ಲಭ್ಯವಿದೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ವಿವಿಧ ಇಲಾಖೆಗಳ ಅಧಿಕಾರಿಗಳು ಜನರಿಗೆ ಯಾವ ಯಾವ ಸೌಲಭ್ಯ ನೀಡಬೇಕು ಎಂಬುದನ್ನು ಮೊದಲೇ ಗಮನಿಸಬೇಕು. ಸರ್ಕಾರದಲ್ಲಿ ಅಗತ್ಯಕ್ಕಿಂತ ಸಾಕಷ್ಟು ಅನುದಾನ ಲಭ್ಯವಿದ್ದು ಸರ್ಕಾರ ಅನುದಾನ ಬಿಡುಗಡೆವರೆಗೆ ಅಧಿಕಾರಿಗಳು ಕಾಯುವುದು ಬೇಡ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಕೋಟೆ ಪ್ರದೇಶದ ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಬಳ್ಳಾರಿ ತಾಲೂಕಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಲಾಖೆಗಳ ವಿವಿಧ ಯೋಜನೆಗಳಡಿ ಸೌಲಭ್ಯಗಳು, ಕೃಷಿ ಹಾಗೂ ಇತರೆ ಇಲಾಖೆಗಳ ಸಾಮಗ್ರಿ-ಸಲಕರಣೆಗಳು ಜನರಿಗೆ ವಿತರಿಸಲು ಸರ್ಕಾರ ಗುರಿ ನಿಗದಿಪಡಿಸುವುದಕ್ಕಿಂತ ಮುಂಚೆಯೇ ಜನರಿಗೆ ಯಾವ ಸೌಲಭ್ಯ ನೀಡಬೇಕು ಎಂಬುದರ ಕುರಿತು ಆಯಾ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು. ಬೇಡಿಕೆಯನ್ವಯ ಅನುದಾನ ಬಿಡುಗಡೆಯಾಗಲಿದ್ದು, ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿಕೊಡಲು ಸಾಧ್ಯವಾಗಲಿದೆ ಎಂದು ಸೂಚಿಸಿದರು.

ಪ್ರಸ್ತಕ ಸಾಲಿನಲ್ಲಿ ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 515 ಮಿಮೀ ಮಳೆ ಬೇಡಿಕೆ ಇದ್ದು, ಈವರೆಗೆ ಒಟ್ಟು 165 ಮಿಮೀ ಮಳೆಯಾಗಿದೆ. 138.4 ಮಿಮೀ (ಶೇ.16 ರಷ್ಟು) ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ ತಾಲೂಕಿನಲ್ಲಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದೆ ಎಂದು ಕೃಷಿ ಸಹಾಯಕ ನಿರ್ದೇಶಕರು ಸಭೆಗೆ ತಿಳಿಸಿದರು.

ಶಾಸಕ ಬಿ.ನಾಗೇಂದ್ರ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಜೊತೆಗೂಡಿ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ವಿಮೆ ಮಾಡಿಸುವಂತೆ ಜಾಗೃತಿ ಮೂಡಿಸಬೇಕು. ಈವರೆಗೆ ಶೇ.01 ರಷ್ಟು ಸಹ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿಲ್ಲ. ಬೆಳೆ ಹಾನಿಯಾದಾಗ ವಿಮೆಯು ರೈತರನ್ನು ಕೈ ಹಿಡಿಯುತ್ತದೆ. ಅವಧಿ ಮುಗಿದ ಬಳಿಕ ನೋಂದಾಯಿಸಿಕೊಂಡರೆ ಕೈ ಸುಟ್ಟು ಕೊಂಡಂತಾಗುತ್ತದೆ. ಹಾಗಾಗಿ ಆಯಾ ಪಿಡಿಒ ಗಳ ಸಹಕಾರದೊಂದಿಗೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ರೈತರಿಗೆ ತಿಳಿವಳಿಕೆ ಮೂಡಿಸಬೇಕು.

ಜಿಲ್ಲೆಯಲ್ಲಿ ಈ ಬಾರಿ ಮೆಣಸಿನಕಾಯಿ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ವಿವಿಧ ಯೋಜನೆಗಳಡಿ ಪರ್ಯಾಯ ತೋಟಗಾರಿಕೆ ಬೆಳೆ ಬೆಳೆಯಲು ರೈತರಿಗೆ ಮನವರಿಕೆ ಮಾಡುವ ಮೂಲಕ ಅವರಿಗೆ ತೋಟಗಾರಿಕೆ ಇಲಾಖೆಯಿಂದ ಉತ್ತೇಜನ ನೀಡಬೇಕು ಅಧಿಕಾರಿಗಳಿಗೆ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯನ್ನು ಮುಂಚೂಣಿಯಲ್ಲಿರಿಸಲು ಅಧಿಕಾರಿಗಳು ಸಾಕಷ್ಟು ಶ್ರಮವಹಿಸಬೇಕಿದೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಅಗತ್ಯಕ್ಕೆ ತಕ್ಕಂತೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಿ, ನಮ್ಮ ಜಿಲ್ಲೆ ಇತರೆ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದರಲ್ಲದೇ, ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣಕ್ಕೆ ಪ್ರತ್ಯೇಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಹೇಳಿದರು.

ಶಾಲೆಗಳಲ್ಲಿ ಶೌಚಾಲಯಗಳ ಸಮಸ್ಯೆಯಿಂದಾಗಿಯೇ ಸಾಕಷ್ಟು ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ವಿವಿಧ ಅನುದಾನದಡಿ ಜಿಲ್ಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಬಳ್ಳಾರಿ ತಾಲೂಕನ್ನು ಆಯ್ದುಕೊಳ್ಳಲಾಗುವುದು ಎಂದರು.

ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡಿರುವ ವಿವಿಧ ಬ್ಯಾಚ್‌ಗಳ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಕೆರೆಗಳನ್ನು ಸ್ವಚ್ಛಗೊಳಿಸಬೇಕು. ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಕುರಿತು ಚರ್ಚೆ ನಡೆಸಲಾಯಿತು.

ಸಭೆಗೂ ಮುನ್ನ ಗ್ಯಾರಂಟಿ ಯೋಜನೆಯ ಯುವನಿಧಿಯ ಮೂರನೇ ವರ್ಷದ ನೋಂದಣಿ ಪ್ರಕ್ರಿಯೆ ಮಾಹಿತಿ ಕುರಿತ ಭಿತ್ತಿಚಿತ್ರ ಮತ್ತು ಡಿಎಪಿ ರಸಗೊಬ್ಬರ ಬಳಕೆ ಬದಲಾಗಿ ಸಂಯುಕ್ತ ರಸಗೊಬ್ಬರ ಬಳಕೆ ಮಾಡುವ ಕುರಿತ ಮಾಹಿತಿ ಭಿತ್ತಿಚಿತ್ರ ಗಣ್ಯರು ಅನಾವರಣಗೊಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಬಳ್ಳಾರಿ ತಾಲೂಕು ಅಧ್ಯಕ್ಷ ಗೋನಾಳ್ ಎಂ.ನಾಗಭೂಷಣ ಗೌಡ, ಬಳ್ಳಾರಿ ತಾಪಂ ಆಡಳಿತಾಧಿಕಾರಿ ಚಿದಾನಂದ, ಬಳ್ಳಾರಿ ತಾಪಂ ಇಒ ಶ್ರೀಧರ್ ಬಾರಿಕಾರ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು