ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಿ

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ರೈತರ ಅಭಿವದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತೋಟಗಾರಿಕೆ ಇಲಾಖೆಯಲ್ಲಿರುವ ಯೋಜನೆ ಕುರಿತು ಹೋಬಳಿ ಮಟ್ಟದ ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಿ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಮಾಡುವ ಮೂಲಕ ರೈತರ ಅಭಿವದ್ಧಿಗೆ ಶ್ರಮಿಸಬೇಕು.

ಬೀದರ್‌: ರೈತರ ಅಭಿವದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತೋಟಗಾರಿಕೆ ಇಲಾಖೆಯಲ್ಲಿರುವ ಯೋಜನೆ ಕುರಿತು ಹೋಬಳಿ ಮಟ್ಟದ ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಿ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಮಾಡುವ ಮೂಲಕ ರೈತರ ಅಭಿವದ್ಧಿಗೆ ಶ್ರಮಿಸಬೇಕೆಂದು ಅಧಿಕಾರಿಗಳಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದರು.

ಬೀದರ್ ದಕ್ಷಿಣ ಕ್ಷೇತ್ರದ ಮನ್ನಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಅಪ್ಸರಾ ಬೇಗಂ ಅವರ ಜಮೀನಿನಲ್ಲಿ ನಡೆದ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನಾ ಸೂಕ್ಷ್ಮ ನೀರಾವರಿ ಯೋಜನೆಯನ್ನು ರೈತರು ಸಮರ್ಪಕವಾಗಿ ಸದುಪಯೋಗ ಪಡೆದುಕೊಂಡು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಧನ ಸಹಾಯ ಸೌಲಭ್ಯ ಪಡೆದು ಉತ್ತಮ ಗುಣಮಟ್ಟದ ಬೆಳೆ ಬೆಳೆದು ಸರಕುಗಳನ್ನು ಬ್ರ್ಯಾಂಡ್ ಮಾಡಲು ಪ್ರಾರಂಭಿಸಿದರೆ ಆದಾಯ ಹೆಚ್ಚಿಸಬಹುದು ಎಂದರು.

ರೈತರಿಗೆ ಕೃಷಿಯಲ್ಲಿನ ತಂತ್ರಜ್ಞಾನಗಳನ್ನು ಪರಿಚಯಿಸಲು ಕ್ಷೇತ್ರೋತ್ಸವ ಕಾರ್ಯಕ್ರಮ ಸಹಕಾರಿಯಾಗಲಿದೆ ಹೀಗಾಗಿ ಅಧಿಕಾರಿಗಳು ಇಂತಹ ಕಾರ್ಯಕ್ರಮಗಳು ಹೆಚ್ಚು ಆಯೋಜಿಸಬೇಕು. ಆಧುನಿಕ ತಂತ್ರಜ್ಞಾನಗಳು ರೈತರಿಗೆ ಖರ್ಚನ್ನು ಕಡಿಮೆಗೊಳಿಸಿ ಆದಾಯ ತಂದುಕೊಡುವಲ್ಲಿ ಯಶಸ್ವಿ ಯಾಗುತ್ತವೆ ಆದರೆ, ಅವುಗಳ ಪರಿಚಯವಿರದಿದ್ದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ ಎಂದರು.

ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯಾಗಿದ್ದು, ಅದನ್ನು ಸಕಾರಗೊಳಿಸಲು ಇಲಾಖೆಗಳು ಮುಂದಾಗಬೇಕು ಎಂದರು.

ತೋಟಗಾರಿಕಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮಾಹಿತಿ ಸಂಗ್ರಹಿಸಬೇಕು. ನಷ್ಟವಾಗಿರುವ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಸೂಚಿಸಿದರು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಕಾಶಿಬಾಯಿ ಬಕ್ಕಪ್ಪಾ, ಉಪಾಧ್ಯಕ್ಷರಾದ ಅಬ್ದುಲ್ ಸಮದ್, ತೋಟಗಾರಿಕೆ ಉಪ ನಿರ್ದೇಶಕರಾದ ವಿಶ್ವನಾಥ ಜಿಳ್ಳೆ, ಹಿರಿಯ ಸಹಾಯಕ ತೋಟಕಾರಿಕೆ ನಿರ್ದೇಶಕ ಸಚೀನ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಮಲ್ಲಿಕಾರ್ಜುನ ನಿಂಗದಳ್ಳಿ, ತೋಟಗಾರಿಕೆ ಪ್ರಾಧ್ಯಾಪಕರಾದ ಪ್ರವೀಣ ಜೋಳಗಿಕರ, ಎಪಿಎಂಸಿ ಮಾಜಿ ಅಧ್ಯಕ್ಷ ಅನೀಲ ಪನ್ನಾಳೆ, ತಾಪಂ ಮಾಜಿ ಸದಸ್ಯ ಚಂದ್ರಶೇಖರ್ ಮಡಕಿ, ಸುಂದರ ಸಿಂಗ್, ಮಹ್ಮದ ಹಮೀದ, ಗೋಪಾಲ ರೆಡ್ಡಿ, ಶಿವರಾಜ ಮೂಲಗೆ, ಬಸವರಾಜ ಪನ್ನಾಳೆ ಮತ್ತಿತರರು ಉಪಸ್ಥಿತರಿದ್ದರು.

Share this article