ಕನ್ನಡ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಲಿ

KannadaprabhaNewsNetwork |  
Published : Jul 12, 2025, 12:32 AM IST
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಜಿಲ್ಲಾ ಕನ್ಡನ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು | Kannada Prabha

ಸಾರಾಂಶ

ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಶೇ.60ರಷ್ಟು ಅಧಿಕಾರಿಗಳು, ಸಿಬ್ಬಂದಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುವುದಿಲ್ಲ. ಪ್ರತಿಯೊಬ್ಬರು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಾರೆ. ಮೊದಲು ಸರ್ಕಾರಿ ಅಧಿಕಾರಿಗಳು, ನೌಕರರು ಇದನ್ನು ಬದಲಾಯಿಸಿಕೊಂಡಲ್ಲಿ, ಇನ್ನಷ್ಟು ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಶೇ.60ರಷ್ಟು ಅಧಿಕಾರಿಗಳು, ಸಿಬ್ಬಂದಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುವುದಿಲ್ಲ. ಪ್ರತಿಯೊಬ್ಬರು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಾರೆ. ಮೊದಲು ಸರ್ಕಾರಿ ಅಧಿಕಾರಿಗಳು, ನೌಕರರು ಇದನ್ನು ಬದಲಾಯಿಸಿಕೊಂಡಲ್ಲಿ, ಇನ್ನಷ್ಟು ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಕುರಿತು ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಗನವಾಡಿ ಶಾಲೆಗಳಲ್ಲಿ ಕನ್ನಡ ಶಿಕ್ಷಣ ಕಡ್ಡಾಯವಾಗಬೇಕು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಮಕ್ಕಳೊಂದಿಗೆ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡಬೇಕು. ಈ ಕುರಿತು ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಸೂಚಿಸಬೇಕು ಎಂದು ನಿರ್ದೇಶಿಸಿದರು.ಜಿಲ್ಲೆಯಲ್ಲಿ ಕನ್ನಡ ಭಾಷೆಯ ಸಮರ್ಪಕ ಅನುಷ್ಠಾನಕ್ಕೆ ಎಲ್ಲ ಇಲಾಖೆ ಅಧಿಕಾರಿಗಳು ಶ್ರಮ ವಹಿಸಬೇಕು. ಪ್ರತಿನಿತ್ಯ ಭಾಷೆ ಬಳಕೆ, ಕನ್ನಡ ನಾಮಫಲಕ ಅಳವಡಿಕೆ, ಕನ್ನಡದಲ್ಲಿ ಪತ್ರ ವ್ಯವಹಾರ ಸೇರಿದಂತೆ ಗಡಿಭಾಗದಲ್ಲಿ ಕನ್ನಡ ಭಾಷೆ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ಖಾನಾಪೂರ ತಾಲೂಕು ಸೇರಿದಂತೆ ಗಡಿ ಭಾಗದ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇದೆ. ಕನ್ನಡದಲ್ಲಿ ಅನುತ್ತೀರ್ಣ ಹೊಂದಿರುವ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಅಂತಹ ಪ್ರದೇಶಗಳಲ್ಲಿ ಕನ್ನಡ ನೆಲೆಯೂರುವ ನಿಟ್ಟಿನಲ್ಲಿ ಕನ್ನಡ ಶಿಕ್ಷಕರನ್ನು ನೇಮಿಸಬೇಕು. ಕನ್ನಡದಲ್ಲಿ ಅನುತ್ತೀರ್ಣ ಹೊಂದಿರುವ ವಿದ್ಯಾರ್ಥಿಗಳ ಕಾರಣ ತಿಳಿದುಕೊಂಡು ಅಂತವರಿಗೆ ಕನ್ನಡ ಕಲಿಕೆಯಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.ಪ್ರತಿಯೊಬ್ಬರು ಭಾಷಾ ಉಳಿವಿಗೆ ಕಾನೂನಾತ್ಮಕವಾಗಿ ಹೋರಾಡಬೇಕಿದೆ. ಭಾಷೆ ಉಳಿವಿಗೆ ನಿರಂತರ ಭಾಷಾ ಬಳಕೆ ಮಾಡುವುದು ಕಡ್ಡಾಯವಾಗಿದೆ ಎಂದ ಅವರು, ಶಿಕ್ಷಣ ಇಲಾಖೆಯಿಂದ ಕನ್ನಡಕ್ಕೆ ಹೆಚ್ಚು ಒತ್ತು ನೀಡಬೇಕು. ಎಲ್ಲರೂ ಇತರೆ ಭಾಷೆಗೆ ಗೌರವಿಸುವುದರ ಜೊತೆಗೆ ಕನ್ನಡ ಭಾಷೆ ಅನುಷ್ಠಾನಕ್ಕೆ ಜೈ ಜೋಡಿಸಬೇಕು. ಪ್ರತಿ ಇಲಾಖೆಯಲ್ಲಿ ಕನ್ನಡ ಬಳಕೆ ಮಾಡಬೇಕು. ಶೇ.25 ರಷ್ಟು ಜನರು ರಾಜ್ಯದಲ್ಲಿ ಕನ್ನಡ ಭಾಷೆ ಬಳಸುವುದಿಲ್ಲ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ವರ್ಷಕ್ಕೆ ಮೂರು ಬಾರಿ ಸಭೆ ನಡೆಸಬೇಕು. ಕನ್ನಡಪರ ಸಂಘಟನೆ-ಸಂಘ ಸಂಸ್ಥೆಗಳ ಜೊತೆಗೆ ಕನ್ನಡ ಭಾಷೆ ಬಳಕೆ, ಭಾಷಾ ಅನುಷ್ಠಾನ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಬೇಕು ಎಂದು ಸಲಹೆ ನೀಡಿದರು.ಕನ್ನಡ ನಾಮಫಲಕ ಕಡ್ಡಾಯ:

ಸಹಕಾರಿ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಲು ಸೂಚಿಸಬೇಕು. ಅಂತಹ ಸಂಘ ಸಂಸ್ಥೆಗಳಿಗೆ ನೋಟಿಸ್ ನೀಡಬೇಕು. ಕೆಡಿಪಿ ಸಭೆಗಳಲ್ಲಿ ಕನ್ನಡ ಅನುಷ್ಠಾನ ವಿಷಯ ಚರ್ಚೆ ಕುರಿತು ಪ್ರಥಮ ಆದ್ಯತೆ ನೀಡಬೇಕು. ಈ ಕುರಿತು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಾಧಿಕಾರದಿಂದ ಸೂಚನೆ ಬರೆಯಲಾಗಿದೆ ಎಂದ ಅವರು, ಆರೋಗ್ಯ ಇಲಾಖೆಯಿಂದ ಮರಣೋತ್ತರ ವರದಿ ಕನ್ನಡದಲ್ಲಿ ನೀಡಬೇಕು. ವೈದ್ಯರು ಸಹ ಕನ್ನಡ ಭಾಷೆಯ ಸಾಫ್ಟ್‌ವೇರ್ ಬಳಕೆ ಮಾಡಬೇಕು. ಸರ್ಕಾರಿ ಆಸ್ಪತ್ರೆ ವೈದ್ಯರು ವೈದ್ಯಕೀಯ ಔಷಧಿ ಚೀಟಿ ಬರೆಯಲು ಕನ್ನಡ ಬಳಸಬೇಕು ಎಂದರು.ಎಲ್ಲ ರಾಷ್ಟ್ರೀಕೃತ ಬ್ಯಾಂಕ್, ಇತರೆ ಬ್ಯಾಂಕ್‌ಗಳಲ್ಲಿ ನೌಕರರು ಕನ್ನಡ ಕಡ್ಡಾಯವಾಗಿ ಬಳಸಬೇಕು. ನಾಮಫಲಕ, ಸೂಚನಾ ಫಲಕ, ಹಣ ಜಮೆ, ವರ್ಗಾವಣೆ ರಸೀದಿ ಕನ್ನಡಲ್ಲೇ ಇರಬೇಕು. ಈ ಕುರಿತು ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕು ಎಂದರು.ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ: ಖಾಸಗಿ ಆಂಗ್ಲಮಾಧ್ಯಮ, ಮರಾಠಿ ಶಾಲೆಗಳಲ್ಲಿ ನಾಡಗೀತೆ ಬಳಕೆ ಮಾಡುತ್ತಿಲ್ಲ ಎಂದು ದೂರುಗಳು ಕೇಳಿಬರುತ್ತಿವೆ. ಅಂತಹ ಶಾಲೆಗಳಿಗೆ ನೋಟಿಸ್ ನೀಡಬೇಕು. ಒಂದುವೇಳೆ ನಾಡಗೀತೆ ಹಾಡದೇ ಇದ್ದಲ್ಲಿ ಅಂತಹ ಶಾಲೆಗಳನ್ನು ರದ್ದುಪಡಿಸಲು ಮುಂದಾಗಬೇಕು ಎಂದ ಅವರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಸ್ಥಳೀಯ ನ್ಯಾಯಾಲಯಗಳಲ್ಲಿ ವಕೀಲರು ಕನ್ನಡದಲ್ಲಿಯೇ ವಾದ, ತೀರ್ಪು ಬರೆಯಬೇಕು ಎಂದು ನಿರ್ದೇಶನ ನೀಡಲು ಈಗಾಗಲೇ ಪತ್ರ ಬರೆಯಲಾಗಿದೆ ಎಂದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಕಾಪಾಡಿಕೊಂಡು, ಕನ್ನಡ ನಾಮಫಲಕಗಳ ಅಳವಡಿಕೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಒಂದುವೇಳೆ ನಿಯಮ ಉಲ್ಲಂಘನೆ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನಾತ್ಮಕವಾಗಿ ಸೂಕ್ತ ಕ್ರಮ ಜರುಗಿಸಲಾಗುವುದು. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸೂಕ್ಷ್ಮತೆಗಳಿವೆ. ಅವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು, ಸರ್ಕಾರಿ ಆದೇಶದಂತೆ ಮಹಾನಗರ ಪಾಲಿಕೆ, ಪುರಸಭೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿದೆ ಎಂದು ತಿಳಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿ, ಎಲ್ಲ ಸರ್ಕಾರಿ ಇಲಾಖೆಗಳು ಕನ್ನಡಪರ ಸಂಘಟನೆ, ಹೋರಾಟಗಾರರ ಸಮಸ್ಯೆಗಳನ್ನು ಆಲಿಸಬೇಕು. ಕನ್ನಡಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಎದುರಾದಲ್ಲಿ ಅಂತವರನ್ನು ಬರಮಾಡಿಕೊಂಡು ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಾಮ ನಿರ್ದೇಶಿತ ಸದಸ್ಯೆ ದಾಕ್ಷಾಯಿಣಿ ಹುಡೇದ, ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಅಶೋಕ ಚಂದರಗಿ, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಮಹಾನಗರ ಪಾಲಿಕೆ ಆಯುಕ್ತೆ ಶುಭ.ಬಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು.

PREV