ಅಧಿಕಾರಿಗಳು ಬೇಜವಾಬ್ದಾರಿ, ನಿರ್ಲಕ್ಷ್ಯತನ ಗಿಟ್ಟು ಕೆಲಸ ಮಾಡಿ

KannadaprabhaNewsNetwork |  
Published : Jul 11, 2025, 11:48 PM IST
ಅಧಿಕಾರಿಗಳು ಬೇಜವಾಬ್ದಾರಿ, ನಿರ್ಲಕ್ಷ್ಯತನ ಬದಿಗಿಟ್ಟು ಕೆಲಸ ಮಾಡಬೇಕು | Kannada Prabha

ಸಾರಾಂಶ

ಸರ್ಕಾರಿ ಅಧಿಕಾರಿಗಳು ಬೇಜವಾಬ್ದಾರಿ, ನಿರ್ಲಕ್ಷ್ಯತನವನ್ನು ಬದಿಗಿಟ್ಟು ಸಾರ್ವಜನಿಕರು, ರೈತರೊಂದಿಗೆ ಬೆರೆತು ಸೌಜನ್ಯದಿಂದ ವರ್ತಿಸಿ ಸ್ಪಂದಿಸಬೇಕು. ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿಸುವ ಕೆಲಸ ನಿಮ್ಮದಾಗಿದ್ದು ಕಾಟಾಚಾರಕ್ಕೆ ಕೆಲಸ ಮಾಡದೆ ಜವಾಬ್ದಾರಿಂದ ಕೆಲಸ ನಿರ್ವಹಿಸಿ ಗೌರವ ಉಳಿಸಿಕೊಳ್ಳಿ ಎಂದು ಶಾಸಕ ಕೆ. ಷಡಕ್ಷರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಸರ್ಕಾರಿ ಅಧಿಕಾರಿಗಳು ಬೇಜವಾಬ್ದಾರಿ, ನಿರ್ಲಕ್ಷ್ಯತನವನ್ನು ಬದಿಗಿಟ್ಟು ಸಾರ್ವಜನಿಕರು, ರೈತರೊಂದಿಗೆ ಬೆರೆತು ಸೌಜನ್ಯದಿಂದ ವರ್ತಿಸಿ ಸ್ಪಂದಿಸಬೇಕು. ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿಸುವ ಕೆಲಸ ನಿಮ್ಮದಾಗಿದ್ದು ಕಾಟಾಚಾರಕ್ಕೆ ಕೆಲಸ ಮಾಡದೆ ಜವಾಬ್ದಾರಿಂದ ಕೆಲಸ ನಿರ್ವಹಿಸಿ ಗೌರವ ಉಳಿಸಿಕೊಳ್ಳಿ ಎಂದು ಶಾಸಕ ಕೆ. ಷಡಕ್ಷರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆಲ ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ ಎಂಬ ಮಾಹಿತಿ ಬರುತ್ತಿದ್ದು ನಿಮಗೆ ಸರ್ಕಾರ ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ನೀಡುತ್ತಿದ್ದೇವೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದನ್ನು ಕಲಿಯಿರಿ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದೇ ಸೂರಿನಡಿ ಜನರಿಗೆ ಸಿಗಬೇಕೆಂಬ ನಿಟ್ಟಿನಲ್ಲಿ ಆಡಳಿತ ಸೌಧವನ್ನು ಲಕ್ಷಾಂತ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಕೆಲ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರಿಗೆ ಅನೇಕ ಬಾರಿ ಹೇಳಿದ್ದರೂ ಕೇಳುತ್ತಿಲ್ಲ. ನಾನು ಹೇಳಿದಂತೆ ನೀವು ಕೇಳಬೇಕು. ಒಂದು ವಾರ ನಿಮಗೆ ಸಮಯಕೊಡುತ್ತೇನೆ ಅಷ್ಟರೊಳಗೆ ನನಗೆ ಸರ್ಕಾರಿ ಕಟ್ಟಡದ ಜಾಗದಲ್ಲಿ ನೀವು ಕೆಲಸ ನಿರ್ವಹಿಸುತ್ತಿರಬೇಕೆಂದು ಎಚ್ಚರಿಕೆ ನೀಡಿದರು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ಮಾಹಿತಿ ನೀಡುತ್ತಾ, ತಾಲೂಕಿನಲ್ಲಿ ಸರ್ಕಾರಿ, ಅನುದಾನ ಸೇರಿದಂತೆ 339 ಶಾಲೆಗಳಿದ್ದು, 15 ಇಂಗ್ಲಿಷ್ ಮಾಧ್ಯಮ ಶಾಲೆಗಳಿವೆ. 640 ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಶಿಕ್ಷಕರಿಲ್ಲದ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಪಠ್ಯಪುಸ್ತಕ ವಿತರಣೆ ಮಾಡಲಾಗಿದ್ದು ಪ್ರಸ್ತುತ ವರ್ಷ 23ಸಾವಿರಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ ಎಂದರು.

ಅದಕ್ಕೆ ಶಾಸಕರು ಈ ಬಾರಿ ದಾಖಲಾತಿ ಪ್ರಮಾಣ ಕಡಿಮೆಯಾಗಿದ್ದು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸೇರಿದಂತೆ ಅಗತ್ಯ ಸೌಲಭ್ಯವಿದ್ದರೂ ಏಕೆ ದಾಖಲಾತಿ ಕಡಿಮೆಯಾಗುತ್ತಿದೆ ನೀವು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶವೂ ಕಡಿಮೆಯಾಗಿದ್ದು ಸುಮ್ಮನೆ ಕಚೇರಿಯಲ್ಲಿ ಕುಳಿತು ಮನೆಗೆ ಹೋಗುವುದಲ್ಲ ಗ್ರಾಮೀಣ ಭಾಗದ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಬೇಕು. ಕೆಲ ಶಾಲೆಗಳ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ ನಿಮ್ಮ ಸಿಆರ್‌ಪಿ, ಬಿಆರ್‌ಪಿಗಳು ಏನು ಮಾಡುತ್ತಿದ್ದಾರೆ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಶಿಕ್ಷಣ ಇಲಾಖೆಯೇ ಸಮರ್ಪಕವಾಗಿ ಕೆಲಸ ನಿರ್ವಹಿಸದಿದ್ದರೆ ಮಕ್ಕಳ ಶೈಕ್ಷಣಿಕ ಭವಿಷ್ಯ ಗತಿಏನು ಎಂದು ಪ್ರಶ್ನಿಸಿದರು. ಕೃಷಿ ಇಲಾಖೆಯ ಡಾ. ಪವನ್ ಮಾತನಾಡಿ, ಪ್ರಸ್ತುತ ವರ್ಷ 299 ಮಿ.ಮಿ ಮಳೆಯಾಗಿದ್ದು ಭರಣಿ, ರೋಹಿಣಿ, ಕೃತಿಕಾ ಮಳೆಗಳು ಆಶಾದಾಯಕವಾಗಲಿಲ್ಲ. ಇದರಿಂದ ಪೂರ್ವ ಮುಂಗಾರು ಬೆಳೆಗಳ ಬಿತ್ತನೆ ಕಡಿಮೆಯಾಗಿದೆ. ಮುಂದಿನ ಹತ್ತು ವರ್ಷದಲ್ಲಿ ಆಹಾರದ ಕೊರತೆ ಬರಲಿದ್ದು ಆಹಾರ ಉತ್ಪಾದನೆ ಮಟ್ಟವನ್ನು ಹೆಚ್ಚಿಸುವತ್ತ ರೈತರಿಗೆ ಉತ್ತೇಜನ ನೀಡುವಂತೆ ತಿಳಿಸಿದರು. ಸಭೆಯಲ್ಲಿ ಶಾಸಕರು ಕಂದಾಯ, ಆರೋಗ್ಯ, ಪಶು ಸಂಗೋಪನಾ ಇಲಾಖೆ, ಅಬಕಾರಿ, ಸಾರಿಗೆ, ಅರಣ್ಯ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬೆಸ್ಕಾಂ, ತೋಟಗಾರಿಕೆ, ವಾಣಿಜ್ಯ ತೆರಿಗೆ, ಟಿಎಪಿಎಂಎಸ್ ಸೇರಿದಂತೆ ಎಲ್ಲಾ ಇಲಾಖೆಗಳ ಬಗ್ಗೆ ಮಾಹಿತಿ ಪಡೆಯುತ್ತ ಸಾರ್ವಜನಿಕರಿಂದ ದೂರುಗಳು ಬಾರದಂತೆ ಕೆಲಸ ಮಾಡಬೇಕೆಂದು ಸೂಚಿಸಿದರು. ಜನಸ್ನೇಹಿಯಾಗಿ ಕೆಲಸ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ಜಿ.ವಿ. ಮೋಹನ್‌ಕುಮಾರ್, ತಾಲೂಕು ಪಂಚಾಯತಿ ಆಡಳಿತಾಧಿಕಾರಿ ಎಚ್.ಹುಲಿರಾಜು, ತಾ.ಪಂ ಇಓ ಸುದರ್ಶನ್, ನಗರಸಭೆ ಅಧ್ಯಕ್ಷೆ ಯಮುನಾ, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎನ್. ಕಾಂತರಾಜು, ಕೃಷಿಕ ಸಮಾಜದ ಅಧ್ಯಕ್ಷ ಯೋಗೇಶ್ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

PREV