ಕುಡಿಯುವ ನೀರಿನ ಕೊಳವೆ ಬಾವಿಯಲ್ಲಿ ಆಯಿಲ್ ಪತ್ತೆ!

KannadaprabhaNewsNetwork |  
Published : Nov 07, 2026, 02:15 AM IST
ಬಾವಿಯಲ್ಲಿನ ನೀರಿನಲ್ಲಿರುವ ಆಯಿಲ್. | Kannada Prabha

ಸಾರಾಂಶ

ಬಾವಿ ನೀರಿನ ಮೇಲ್ಭಾಗದಲ್ಲಿ ಎಣ್ಣೆಯ ದಪ್ಪ ಪದರ ತೇಲುತ್ತಿರುವುದರಿಂದ ನೀರು ದುರ್ವಾಸನೆಯಿಂದ ಕೂಡಿದ್ದು, ಕುಡಿಯಲು ಹಾಗೂ ಗೃಹ ಬಳಕೆಗೂ ಸಂಪೂರ್ಣ ಅಯೋಗ್ಯವಾಗಿದೆ.

ಶಿರಸಿ: ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಂಡಕ್ನಳ್ಳಿ ಗ್ರಾಮದ ಓಂಕಾರ ಕಾಲನಿಯ ಒಂದನೇ ಕ್ರಾಸ್‌ನ ನಿವಾಸಿಗಳು ಕಳೆದೊಂದು ವಾರದಿಂದ ತೀವ್ರ ಕುಡಿಯುವ ನೀರಿನ ಅಭಾವ ಹಾಗೂ ಆತಂಕವನ್ನು ಎದುರಿಸುತ್ತಿದ್ದಾರೆ. ಇಲ್ಲಿನ 6ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಮುಖ್ಯ ಮೂಲವಾಗಿರುವ ಕೊಳವೆ ಬಾವಿಗಳಲ್ಲಿ ಎಣ್ಣೆ(ಆಯಿಲ್) ಮಿಶ್ರಿತ ನೀರು ಕಾಣಿಸಿಕೊಂಡಿದ್ದು, ಸ್ಥಳೀಯ ಸಾರ್ವಜನಿಕರ ದಿನನಿತ್ಯದ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಬಾವಿ ನೀರಿನ ಮೇಲ್ಭಾಗದಲ್ಲಿ ಎಣ್ಣೆಯ ದಪ್ಪ ಪದರ ತೇಲುತ್ತಿರುವುದರಿಂದ ನೀರು ದುರ್ವಾಸನೆಯಿಂದ ಕೂಡಿದ್ದು, ಕುಡಿಯಲು ಹಾಗೂ ಗೃಹ ಬಳಕೆಗೂ ಸಂಪೂರ್ಣ ಅಯೋಗ್ಯವಾಗಿದೆ. ಕಳೆದ ಒಂದು ವಾರದಿಂದ ಬಾವಿಯಲ್ಲಿ ಎಣ್ಣೆ ಅಂಶ ಕಾಣಿಸಿಕೊಳ್ಳುತ್ತಿದ್ದು, ಕುಡಿಯಲು ಹನಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಬಾವಿಯಿಂದ ನೀರು ಹೊರ ತೆಗೆದು ಬಟ್ಟಲಲ್ಲಿ ಹಾಕಿ ದೀಪ ಹಚ್ಚಿದಾಗ ಎಣ್ಣೆಯ ದೀಪ ಹೇಗೆ ಉರಿಯುತ್ತದೆಯೋ ಅದೇ ರೀತಿ ಈ ನೀರಿನಿಂದ ದೀಪವು ಉರಿಯುತ್ತದೆ. ಮತ್ತು ವಾಟರ್ ಬಾಟಲಿಯಲ್ಲಿ ಸಂಗ್ರಹಿಸಿದಾಗ ಅರ್ಧ ನೀರು ಅರ್ಧ ಆಯಿಲ್ ಕಂಡ ರೀತಿ ಕಾಣುತ್ತದೆ. ಇದರಿಂದ ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ಈ ಬಾವಿ ನೀರು ಕಲುಷಿತಗೊಳ್ಳಲು ಹತ್ತಿರದ ಇರುವ ಎಸಳೆ ಗ್ರಿಡ್‌ನಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳಿಗೆ ಬಳಸುವ ಆಯಿಲ್ ಸೋರಿಕೆಯಾಗಿ ಬಾವಿಗಳಿಗೆ ಸೇರ್ಪಡೆಯಾಗಿರಬಹುದು ಎಂಬ ಅನುಮಾನ ಸ್ಥಳೀಯರಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ದೊಡ್ನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿ ಶೆಟ್ಟಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ಎಇಇ) ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಹೆಸ್ಕಾಂ ಎಇಇ ರಾಜುಕೃಷ್ಣ ಬಿಳಗಿ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಗ್ರಿಡ್‌ನಿಂದ ಯಾವುದೇ ರೀತಿಯ ಆಯಿಲ್ ಚೆಲ್ಲುತ್ತಿಲ್ಲ ಅಥವಾ ಸೋರಿಕೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯಿಂದ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಾಥಮಿಕ ಪರೀಕ್ಷೆಗೆ ಕಳುಹಿಸಿದ್ದು, ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಹಾಗಾದರೆ ಬಾವಿ ನೀರಿಗೆ ಎಣ್ಣೆಯ ಅಂಶ ಎಲ್ಲಿಂದ ಸೇರ್ಪಡೆಯಾಗುತ್ತಿದೆ ಎಂಬುದನ್ನು ಕಂಡುಹಿಡಿಯಲು ಉನ್ನತ ಮಟ್ಟದ ಪ್ರಯೋಗಾಲಯ ಪರೀಕ್ಷೆಗೆ ನೀರಿನ ಮಾದರಿಯನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗಿದೆ.

ಸಾರ್ವಜನಿಕರಿಗೆ ದಿನನಿತ್ಯ ಬಳಕೆಗೆ ಅವಶ್ಯಕವಾದ ನೀರನ್ನು ದೂರದ ಪ್ರದೇಶಗಳಿಂದ ತರಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ನೀರಿಗಾಗಿ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಎಂದು ಸ್ಥಳೀಯ ನಿವಾಸಿ ಗೋಪಾಲಕೃಷ್ಣ ಭಟ್ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ ಬಳಿಕ ನಿಖರ ಕಾರಣ: ಪ್ರಯೋಗಾಲಯದ ಪರೀಕ್ಷಾ ವರದಿ ಬಂದ ನಂತರವಷ್ಟೇ ನೀರು ಕಲುಷಿತಗೊಳ್ಳಲು ನಿಖರ ಕಾರಣವೇನು ಎಂಬುದು ತಿಳಿದುಬರಬೇಕಿದೆ ಎಂದು ದೊಡ್ಡನಳ್ಳಿ ಪಿಡಿಒ ಪ್ರೀತಿ ಶೆಟ್ಟಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ