ಕಾಂಗ್ರೆಸ್ ಪಕ್ಷದಿಂದ ಸ್ವಾರ್ಥ । ದ್ವೇಷದ ರಾಜಕಾರಣ । ಸಿಎಂ ರಾಜೀನಾಮೆ ನೀಡಬೇಕು: ಒತ್ತಾಯ
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರಿಂದ ಕಾಂಗ್ರೆಸ್ ಸರ್ಕಾರ ತೈಲ ಬೆಲೆ ಏರಿಕೆ ಮಾಡಿದೆ. ಇದು, ಸ್ವಾರ್ಥ ಹಾಗೂ ದ್ವೇಷದ ರಾಜಕಾರಣ, ಎಲ್ಲಾ ವರ್ಗದ ಜನ ಜೀವನದ ಮೇಲೆ ದುಷ್ಪರಿಣಾಮ ಬೀರಲಿರುವ ಬೆಲೆ ಏರಿಕೆ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಒತ್ತಾಯಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿರುವುದು ಪ್ರಥಮ. ಜನರಿಗೆ ಬಿಟ್ಟಿ ಭಾಗ್ಯ ಕೊಟ್ಟು, ಆರ್ಥಿಕ ಸಂಕಷ್ಟ ಎದುರಾಗಿದೆ. ಇದನ್ನು ಸರಿದೂಗಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚ ವಸ್ತುಗಳ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ತೈಲ ಬೆಲೆ ಏರಿಕೆಯನ್ನು 15 ಪೈಸೆ, 50 ಪೈಸೆ ಏರಿಕೆ ಮಾಡಲಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಒಂದೇ ಬಾರಿಗೆ ಪೆಟ್ರೋಲ್‌ಗೆ 3 ರು. ಮತ್ತು ಡಿಸೇಲ್‌ಗೆ 3.50 ರು. ಏರಿಕೆ ಮಾಡಿದೆ. ಇದು. ದಿನ ನಿತ್ಯ ಸಾಗಾಣಿಕೆ ವಸ್ತುಗಳ ಬೆಲೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯ ಸರ್ಕಾರದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ವಿಧಾನಪರಿಷತ್ ಸದಸ್ಯರಿಗೆ ಪ್ರತಿ ವರ್ಷ 2 ಕೋಟಿ ರು. ಅನುದಾನ ನೀಡಬೇಕು. ಆದರೆ, ಈವರೆಗೆ ಕೊಟ್ಟಿರುವುದು ಕೇವಲ 50 ಲಕ್ಷ ರು. ಮಾತ್ರ, ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡುತ್ತಿಲ್ಲ. ಈ ಮಾತನ್ನು ಪ್ರತಿಪಕ್ಷದವರು ಮಾತ್ರವಲ್ಲ, ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಚ್.ಸಿ. ಕಲ್ಮರುಡಪ್ಪ, ಸೋಮಶೇಖರ್, ಹಿರೇಮಗಳೂರು ಪುಟ್ಟಸ್ವಾಮಿ, ಸಚಿನ್ ಇದ್ದರು.
17 ಕೆಸಿಕೆಎಂ 1ಎಂ.ಕೆ. ಪ್ರಾಣೇಶ್