ಕನ್ನಡಪ್ರಭ ವಾರ್ತೆ ಪುತ್ತೂರು
ತಾಯಿ-ಮಗಳ ಭಾಂದವ್ಯ ಹಾಗೂ ಮಧ್ಯಮ ವರ್ಗದ ಯುವಕನೊಬ್ಬನ ತ್ರಿಕೋನ ಪ್ರೇಮಕತೆಯನ್ನು ಹೊಂದಿರುವ ಕರಾವಳಿಯ ಯುವಕನ ನಿರ್ದೇಶನದಲ್ಲಿ ಮೂಡಿಬಂದಿರುವ ‘ಒಲವಿನ ಪಯಣ’ ಕನ್ನಡ ಚಲನಚಿತ್ರ ಫೆ.೨೧ರಂದು ನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಚಲನಚಿತ್ರವು ನಾವು ಬದುಕುವುದು ನಮಗಾಗಿ ಅಲ್ಲ, ನಮ್ಮವರಿಗಾಗಿ ಎಂಬ ಸಂದೇಶ ನೀಡುವ ಕುಟುಂಬ ಸಮೇತ ನೋಡುವ ಚಿತ್ರವಾಗಿದೆ ಎಂದು ಚಿತ್ರದ ನಿರ್ದೇಶಕ ಪುತ್ತೂರಿನ ಕಿಶನ್ ಬಲ್ನಾಡ್ ತಿಳಿಸಿದರು.ಸೋಮವಾರ ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಚಿತ್ರ ನನ್ನ ಸಿನಿಮಾ ಬದುಕನ್ನು ನಿರ್ಧರಿಸಲಿದೆ. ಹುಟ್ಟೂರಿನಲ್ಲಿಯೇ ಮೊದಲ ಬಾರಿಗೆ ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಕಳೆದ ೧೭ ವರ್ಷಗಳಿಂದ ಸಿನಿಮಾ ಹಾಗೂ ಸೀರಿಯಲ್ ನಂಟು ಹೊಂದಿರುವ ನಾನು ನಿರ್ಮಾಪಕರು ಹೇಳಿದ್ದಕ್ಕಿಂತ ಕಡಿಮೆ ಅವಧಿಯಲ್ಲಿ ಸಿನಿಮಾ ಪೂರ್ತಿ ಮಾಡಿದ್ದೇನೆ. ಮಡಿಕೇರಿ ಹಾಗೂ ಬೆಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಮಧ್ಯಮ ವರ್ಗದ ಯುವಕ ಸವಾಲ್ ಹಾಕಿ ಪ್ರೀತಿಸಿ ಮದುವೆಯಾಗುತ್ತಾನೆ. ಬಳಿಕ ಅವನ ಜೀವನದಲ್ಲಿ ಬರುವ ವಿಧಿಯಾಟವೇ ಚಿತ್ರದ ಕಥೆ. ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ತಿಳಿಸಿದರು.ಚಿತ್ರದ ನಾಯಕ ನಟ ಸುನೀಲ್ ಮಾತನಾಡಿ, ಈಗಾಗಲೇ ೪ ಸಿನಿಮಾಗಳಲ್ಲಿ ನಟಿಸಿದ ಅನುಭವ ಇದೆ. ಧಾರಾವಾಹಿಗಳಲ್ಲಿಯೂ ಪಾತ್ರ ಮಾಡಿದ್ದೇನೆ. ಈ ಸಿನಿಮಾದ ಕಥೆ ಚೆನ್ನಾಗಿದೆ. ಇದರಲ್ಲಿ ಕಥೆಯೇ ಹೀರೋ. ಹಾಗಾಗಿ ಜನರಿಗೆ ಇಷ್ಟ ಆಗಬಹುದು ಎಂಬ ನಂಬಿಕೆ ಇದೆ. ಅನಗತ್ಯವಾದ ಕಾಮಿಡಿ ಇಲ್ಲ. ಚಿತ್ರದ ಕಥೆಗೆ ಪೂರಕವಾದ ಹಾಸ್ಯ ಇದೆ. ಒಟ್ಟಿನಲ್ಲಿ ಜನರ ಬದುಕಿನ ಕಥೆಯಾಗಿದೆ. ಇದಕ್ಕೆ ಜನರ ಬೆಂಬಲ ಬೇಕಾಗಿದೆ ಎಂದರು.ಚಿತ್ರದ ಕಥೆ-ನಿರ್ಮಾಪಕ ನಾಗರಾಜ್ ಎಸ್. ಮುಳಗುಂದ, ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರಾದ ಕುಶಿ, ಹಿರಿಯ ನಟ ನಾಗೇಶ್ ಮಯ್ಯ ಚಿತ್ರದ ಕುರಿತು ಮಾತನಾಡಿದರು.ಮುಳಗುಂದ ಕ್ರಿಯೇಷನ್ಸ್ ಸಂಸ್ಥೆ ಅಡಿಯಲ್ಲಿ ನಿರ್ಮಾಣವಾದ ಚಿತ್ರದಲ್ಲಿ ಜೀವನ್ ಗೌಡ ಅವರ ಛಾಯಾಗ್ರಹಣ, ಕೀರ್ತಿರಾಜ್ ಸಂಕಲನ, ಗುರುಪ್ರಸಾದ್ ಬೆಳ್ತಂಗಡಿ ಅವರ ಕಲರಿಸ್ಟ್, ಸಾಯಿ ಸರ್ವೇಶ್ ಅವರ ಸಂಗೀತ ಇದೆ. ಚಿತ್ರಕಥೆ ಹಾಗೂ ಸಂಭಾಷಣೆ ಸುನಿಲ್ ಅವರದ್ದಾಗಿದೆ. ನಾಯಕಿ ನಟಿ ಪ್ರೀಯಾ ಹೆಗ್ಡೆ, ಪದ್ಮಜಾ ರಾವ್, ಬಲ ರಾಜ್ಯಾಡಿ, ಪೃಥ್ವಿರಾಜ್, ಸುಧಾಕರ ಬನ್ನಂಜೆ, ಸೂರ್ಯಕಿರಣ್, ಧನಂಜಯ್, ಸಮೀಕ್ಷಾ, ಬೇಬಿ ನಿಧಿ ಅವರ ತಾರಾಗಣವಿದೆ.ಸುದ್ದಿಗೋಷ್ಟಿಯಲ್ಲಿ ನಾಯಕ ನಟ ಸುನಿಲ್, ನಾಯಕಿ ನಟಿ ಕುಶಿ, ನಾಗೇಶ್ ಮಯ್ಯ, ನಿರ್ಮಾಪಕ ನಾಗರಾಜ್ ಎಸ್ ಮುಳಗುಂದ ಉಪಸ್ಥಿತರಿದ್ದರು.