ಇಂದಿನ ಶಿಕ್ಷಣ ವ್ಯವಸ್ಥೆಯಿಂದ ವೃದ್ಧಾಶ್ರಮಗಳು ಹೆಚ್ಚುತ್ತಿವೆ: ಬಿರ್ತಿ ರಾಜೇಶ್ ಶೆಟ್ಟಿ

KannadaprabhaNewsNetwork | Published : Feb 14, 2025 12:30 AM

ಸಾರಾಂಶ

ಸಾಸ್ತಾನ ಸಮೀಪದ ಚೆಲ್ಲೆಮಕ್ಕಿ ನಾಗದೇಗುಲದ ವರ್ಧಂತಿ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಬ್ರಹ್ಮಾವರ ವ್ಯವಸಾಯಕ ಸೇವಾ ಸಹಕಾರಿ ಸಂಘ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಕೋಟ

ಸಂಸ್ಕಾರ ಭರಿತ ಶಿಕ್ಷಣ ಇಂದು ಮರೆಯಾಗುತ್ತಿದ್ದು, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕೇವಲ ರ್‍ಯಾಂಕ್‌ ಗಳಿಕೆಗೆ ಸೀಮಿತವಾಗುತ್ತಿದೆ. ಇದರಿಂದ ಯುವ ಸಮುದಾಯ ನೈತಿಕತೆ, ಧಾರ್ಮಿಕತೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಬ್ರಹ್ಮಾವರ ವ್ಯವಸಾಯಕ ಸೇವಾ ಸಹಕಾರಿ ಸಂಘ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.ಅವರು ಇಲ್ಲಿನ ಸಾಸ್ತಾನ ಸಮೀಪದ ಚೆಲ್ಲೆಮಕ್ಕಿ ನಾಗದೇಗುಲದ ವರ್ಧಂತಿ ಉತ್ಸವದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಹಿರಿಯರು ನೀಡಿದ ಪರಂಪರೆಯ ಸಂಸ್ಕಾರಯುತ ಶಿಕ್ಷಣ ಇಲ್ಲದೇ ಆಧುನಿಕ ಶಿಕ್ಷಣದ ಪರಿಣಾಮ ವೃದ್ಧಾಶ್ರಮ ಸಂಸ್ಕೃತಿ ಹೆಚ್ಚುತ್ತಿದೆ. ದೈವದೇವರುಗಳ ಮೇಲಿನ ಭಕ್ತಿ ಕಡಿಮೆಯಾಗುತ್ತಿದೆ. ಹಿರಿಯ ಕಿರಿಯ ಎಂಬ ಭಾವನೆ ಇಲ್ಲವಾಗುತ್ತಿದೆ. ಹೀಗಾದರೆ ಮುಂದೇನು ಎಂದು ಪೋಷಕರು ತಮ್ಮನ್ನು ತಾವೇ ಪ್ರಶ್ನಿಸಿ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಹಿರಿಯ ಶತಾಯುಷಿ ಗಿರಿಜಾ ನಾರಾಯಣ ಗಾಣಿಗ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ತಾರಾನಾಥ ಹೊಳ್ಳ, ಶಿಕ್ಷಣ ತಜ್ಞ ಕೆ.ಜಗದೀಶ ನಾವಡ, ಸಹಕಾರಿ ಧುರೀಣ ಬಿರ್ತಿ ರಾಜೇಶ್ ಶೆಟ್ಟಿ, ಸಿಎ ನರಸಿಂಹಬಾಬು ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ವೈಶಾಲಿ ಪೈ, ಅನ್ವಿತಾ ಯಕ್ಷಿಮಠ, ನಿಶಾ, ಅನನ್ಯಾ ಸುರೇಶ್, ಪ್ರಜ್ವಲ್ ಕೆ. ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಅಧ್ಯಕ್ಷತೆಯನ್ನು ವರ್ಧಂತ್ಯುತ್ಸವ ಸಮಿತಿ ಅಧ್ಯಕ್ಷ ಜಿ.ಆರ್. ಸುಧಾಕರ್ ವಹಿಸಿದ್ದರು. ಬ್ರಹ್ಮಾವರ ಪ್ರಣವ್ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರವೀಣ್, ಸಮಿತಿ ಕಾರ್ಯಾಧ್ಯಕ್ಷ ದಿನಕರ್ ವಿ. ರಾವ್, ಸಮಿತಿ ಉಪಾಧ್ಯಾಕ್ಷ ಬಿರ್ತಿ ಬಾಲಕೃಷ್ಣ, ರಾಮಚಂದ್ರ ರಾವ್ ಉಪಸ್ಥಿತರಿದ್ದರು.ದೇಗುಲದ ಕಾರ್ಯದರ್ಶಿ ಗಣೇಶ್ ಜಿ. ಸ್ವಾಗತಿಸಿದರು. ಶಿಕ್ಷಕಿ ಶೈಲಜಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಂದಾರ್ತಿ ಮೇಳದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಜರುಗಿತು.

Share this article