ವಿಶೇಷ ವರದಿ ಹುಬ್ಬಳ್ಳಿ
ಫ್ಲೈಓವರ್ ಕಾಮಗಾರಿ ಹಿನ್ನೆಲೆ ಚೆನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣ ಹಾಗೂ ಬಸವವನ ಮಾರ್ಗ ನಾಲ್ಕು ತಿಂಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು, ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಭಾನುವಾರ ಇನ್ನಿಲ್ಲದ ಸಮಸ್ಯೆ ಅನುಭವಿಸಿದರು.ಮೊದಲಿದ್ದ ಹಳೇ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಸುಮಾರು ₹50 ಕೋಟಿ ವೆಚ್ಚದಲ್ಲಿ ಮರುನಿರ್ಮಾಣ ಮಾಡಿ ಕಳೆದ ನಾಲ್ಕು ತಿಂಗಳ ಹಿಂದೆ (ಜ. 12)ರಂದು ಹೊಸರೂಪ ಪಡೆದು ಉದ್ಘಾಟನೆಗೊಂಡಿತ್ತು. ಆದರೆ, ಈಗ ಫ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಮತ್ತೆ ನಾಲ್ಕು ತಿಂಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಕಳೆದ ಏ. 9ರಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ನಗರದಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿ ಪ್ರಗತಿ ಪರಿಶೀಲಿಸಿದ ಬಳಿಕ ತೀವ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅನಿವಾರ್ಯವಾಗಿ ಬಸ್ ನಿಲ್ದಾಣವನ್ನು ನಾಲ್ಕು ತಿಂಗಳುಗಳ ಕಾಲ ಬಂದ್ ಮಾಡುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಕಳೆದ 10 ದಿನಗಳಿಂದ ಸಂಚಾರಿ ಪೊಲೀಸರು ಮಾರ್ಗ ಬದಲಾವಣೆಗೆ ಬೇಕಾದ ಅಗತ್ಯ ಕ್ರಮ ಕೈಗೊಂಡು ಭಾನುವಾರ ಬೆಳಗಿನಿಂದಲೇ ಬಂದ್ ಮಾಡಿ ಬೇರೆ ಮಾರ್ಗಗಳ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಜನರ ಪರದಾಟ: ಹುಬ್ಬಳ್ಳಿಯ ಹೃದಯ ಭಾಗ, ಹೆಚ್ಚಿನ ಜನನಿಬಿಡ ಪ್ರದೇಶವೆಂದರೆ ಅದು ಚೆನ್ನಮ್ಮ ವೃತ್ತ. ಈಗ ಈ ವೃತ್ತಕ್ಕೆ ಬರುವ ಎಲ್ಲ ವಾಹನಗಳ ಮಾರ್ಗ ಬಂದ್ ಮಾಡಿರುವುದರಿಂದ ಸವಾರರು, ಪ್ರಯಾಣಿಕರು ಇನ್ನಿಲ್ಲದ ಸಮಸ್ಯೆ ಅನುಭವಿಸಿದರು. ಬಂದ್ ಮಾಡಿರುವ ವಿಷಯ ತಿಳಿಯದ ಹಲವರು ಚೆನ್ನಮ್ಮ ವೃತ್ತದಲ್ಲಿ ಇಳಿದು ಬೇರೆಡೆ ಹೋಗಲು ಬಸ್‌ಗಳು ಸಿಗದೇ ಪರದಾಡುವಂತಾಯಿತು. ಕೆಲವು ದ್ವಿಚಕ್ರ ವಾಹನಗಳ ಸವಾರರು ಮಾರ್ಗ ಬದಲಾವಣೆಯಿಂದಾಗಿ ಕಂಗಾಲಾಗಿ ಬಂದ ಮಾರ್ಗದಲ್ಲಿ ಮರಳಿ ಹೋಗಲು ಯತ್ನಿಸುತ್ತಿದ್ದರು. ಈ ವೇಳೆ ಸಂಚಾರಿ ಪೊಲೀಸರು ಅಂತಹ ವಾಹನಗಳನ್ನು ತಡೆದು ಮುಂದೆ ಕಳಿಸುತ್ತಿದ್ದರು. ಈ ವೇಳೆ ಹಲವು ಸವಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.
ನಿರ್ವಹಣೆಯೇ ದೊಡ್ಡ ಸವಾಲು: ನೂತನವಾಗಿ ನಿರ್ಮಿಸಿರುವ ಹಳೇ ನಿಲ್ದಾಣ ಹಲವು ವಿಶಿಷ್ಟ್ಯತೆಗಳಿಂದ ಕೂಡಿದೆ. ಇಲ್ಲಿಗೆ ನಿತ್ಯ ಉಪನಗರ ಸಾರಿಗೆ ಹಾಗೂ ಗ್ರಾಮಾಂತರ ಸಾರಿಗೆ ನಿಲ್ದಾಣಕ್ಕೆ ನಿತ್ಯ ನಾಲ್ಕು ಸಾವಿರಕ್ಕೂ ಅಧಿಕ ಟ್ರಿಪ್ ಬಸ್ ಓಡಿಸಲಾಗುತ್ತಿದೆ. ಜತೆಗೆ ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿದ್ದರಿಂದ ಸಾಕಷ್ಟು ಬೆಲೆ ಬಾಳುವ ಪರಿಕರಗಳು ಹಾಗೂ ಬಿಆರ್‌ಟಿಎಸ್ ಬಸ್ ನಿಲ್ದಾಣದ ಕೊಠಡಿಗಳು ಸೇರಿದಂತೆ ಹಲವು ಉಪಕರಣಗಳು ಹೊರಗಡೆ ಇವೆ. ಅವುಗಳ ರಕ್ಷಣೆ ಈಗ ಸಾರಿಗೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಅದಲ್ಲದೇ ಕಳ್ಳರ ಕಾಟ, ಕಿಡಿಗೇಡಿಗಳು ಹಾನಿಯನ್ನುಂಟು ಮಾಡುವ ಆತಂಕವೂ ಇದೆ. ಹೀಗಾಗಿ, ಭದ್ರತೆ ಹೆಚ್ಚಿಸುವ ಅವಶ್ಯಕತೆಯಿದ್ದು, 2-3 ದಿನಗಳಲ್ಲಿ ಬಸ್ ನಿಲ್ದಾಣಕ್ಕೆ ಬೇಕಾದ ಅಗತ್ಯ ಭದ್ರತೆಗೆ ಸಾರಿಗೆ ಅಧಿಕಾರಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.ನಮಗೆ ಹಳೇ ಬಸ್ ನಿಲ್ದಾಣ ಬಂದ್ ಮಾಡಿರುವ ಮಾಹಿತಿಯೇ ಇಲ್ಲ. ಎಂದಿನಂತೆ ಹುಬ್ಬಳ್ಳಿಗೆ ಬಂದು ಚೆನ್ನಮ್ಮ ವೃತ್ತಕ್ಕೆ ಇಳಿದು ಕೆಲಸ ಮುಗಿಸಿ ಮರಳಿ ಊರಿಗೆ ಹೋಗುತ್ತಿರುವಾಗಲೇ ಗೊತ್ತಾಗಿದ್ದು. ನಮ್ಮೂರಿಗೆ ತೆರಳುವ ಬಸ್ ಹಿಡಿಯುವಷ್ಟರಲ್ಲಿ ಸಾಕಾಗಿ ಹೋಯ್ತು ಎಂದು ಗದಗನ ನಿವಾಸಿ ಮನೋಹರ ಬೆಟಗೇರಿ ಹೇಳಿದರು. ಪದೇ ಪದೇ ಬಸ್ ಸ್ಟ್ಯಾಂಡ್ ಬಂದ್ ಮಾಡಿದ್ರ ಹ್ಯಾಂಗ್ರಿ. ಊರಾಗಿಂದ ತರಕಾರಿ ತಂದು ಎಪಿಎಂಸಿಗೆ ಹೋಗಿ ಮಾರಾಟ ಮಾಡಿ ಜೀವನ ನಡಿಸ್ತೀನಿ. ಬಸ್ ನಿಲ್ದಾಣ ಬಂದ್ ಆಗಿರುವುದರಿಂದ ತರಕಾರಿ ತಗೊಂಡು ಎಪಿಎಂಸಿಗೆ ಹೋಗಾಕ ಒದ್ದಾಡಿದ್ವಿ ಎಂದು ಕುಸುಗಲ್ಲ ಗ್ರಾಮದ ವೃದ್ಧೆ ಕಮಲಮ್ಮ ಅಳಲು ತೋಡಿಕೊಂಡರು.
ಫ್ಲೈ ಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಏ. 20ರಿಂದ ಹಳೇ ಬಸ್ ನಿಲ್ದಾಣವನ್ನು 4 ತಿಂಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಇಲ್ಲಿಗೆ ಆಗಮಿಸುವ ಬಸ್‌ಗಳಿಗೆ ಬೇರೆಡೆ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಹಳೇ ಬಸ್ ನಿಲ್ದಾಣದ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್. ಸಿದ್ದಲಿಂಗೇಶ ಹೇಳಿದರು.ಮಾರ್ಗ ಬದಲಾವಣೆ:
ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಭಾನುವಾರದಿಂದ ನಗರದಲ್ಲಿ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಹೊಸೂರ ವೃತ್ತದಿಂದ ಕಾಟನ್ ಮಾರ್ಕೆಟ್, ಶಾರದಾ ಹೋಟೆಲ್, ದೇಸಾಯಿ ವೃತ್ತದ ಮೂಲಕ ಪಿಂಟೋ ವೃತ್ತ ಅಥವಾ ಕೋರ್ಟ್ ವೃತ್ತದ ಮೂಲಕ ಗದಗ ಹಾಗೂ ವಿಜಯಪುರಕ್ಕೆ ಸಂಚರಿಸಬಹುದಾಗಿದೆ ಅಥವಾ ಹೊಸೂರ ವೃತ್ತದಿಂದ ಕಾಟನ್ ಮಾರ್ಕೆಟ್, ನೀಲಿಜಿನ ರಸ್ತೆ, ಚೆನ್ನಮ್ಮ ವೃತ್ತ, ಸರ್ ಸಿದ್ದಪ್ಪ ಕಂಬಳಿ ರಸ್ತೆ ಮೂಲಕವಾಗಿಯೂ ಸಹ ಗದಗ ಹಾಗೂ ಸಿಬಿಟಿಗೆ ಮಾರ್ಗ ಕಲ್ಪಿಸವಾಗಿದೆ.ವಿಜಯಪುರದಿಂದ ಧಾರವಾಡ: ಸರ್ವೋದಯ ವೃತ್ತದಿಂದ ಡಿ.ಆರ್.ಎಂ ಆಫೀಸ್, ಸ್ಟೇಶನ್ ರಸ್ತೆ, ಚೆನ್ನಮ್ಮ ವೃತ್ತ, ಕಾರವಾರ ರಸ್ತೆ, ಭಾರತ ಮಿಲ್ ವೃತ್ತ ಮತ್ತು ವಾಣಿ ವಿಲಾಸ ವೃತ್ತದ ಮೂಲಕ ಧಾರವಾಡಕ್ಕೆ ಸಂಚರಿಸಬಹುದು.ಗದಗದಿಂದ ಧಾರವಾಡ: ಸ್ಟೇಶನ್ ರಸ್ತೆ, ಚೆನ್ನಮ್ಮ ವೃತ್ತ, ಕಾರವಾರ ರಸ್ತೆ, ಭಾರತ ಮಿಲ್ ವೃತ್ತ ಮತ್ತು ವಾಣಿ ವಿಲಾಸ ವೃತ್ತದ ಮೂಲಕ ಧಾರವಾಡಕ್ಕೆ ಮಾರ್ಗ ಕಲ್ಪಿಸವಾಗಿದೆ.ಬಸ್ ಸಂಚಾರಕ್ಕೆ ಮಾತ್ರ ಅವಕಾಶ: ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಇಲ್ಲಿನ ನೀಲಿಜಿನ್ ರಸ್ತೆಯನ್ನು ಕೇವಲ ವಾಯವ್ಯ ಸಾರಿಗೆ ಸಂಚಾರಕ್ಕೆ ತೆರೆಯಲಾಗಿದೆ. ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.ಉಪನಗರ ಸಾರಿಗೆ: ಹೊಸೂರ ಸರ್ಕಲ್, ಕಾಟನ್ ಮಾರ್ಕೇಟ್ ರಸ್ತೆ, ಸಾಂಸ್ಕೃತಿಕ ಭವನದ ಮುಂಚಿನ ಬಲ ತಿರುವು, ಉತ್ತರ ಸಂಚಾರ ಪೋಲೀಸ್ ಠಾಣೆ ಪಕ್ಕದ ಬಲ ತಿರುವು, ಅಟೋ ಹೌಸ್ (ಸ್ವಿಮ್ಮಿಂಗ್ ಪೂಲ್) ಬಳಿ ಬಲ ತಿರುವು ಪಡೆದು, ಗ್ಲಾಸ್ ಹೌಸ್ ಕಂಪೌಂಡ್ ಪಕ್ಕದಲ್ಲಿರುವ ಬಸ್ ನಿಲುಗಡೆ ಮುಖಾಂತರ ಮರಳಿ ಹೊಸೂರು ವೃತ್ತಕ್ಕೆ ತೆರಳುವುದು. ಈ ರಸ್ತೆಯಲ್ಲಿ ಉಪನಗರ ಸಾರಿಗೆ ನಿಲುಗಡೆ ಅವಕಾಶ ಕಲ್ಪಿಸಲಾಗಿದೆ. ಕಮರಿಪೇಟೆ ಪೋಲಿಸ್ ಠಾಣೆಯಿಂದ ಚೆನ್ನಮ್ಮ ಸರ್ಕಲ್‌ಗೆ ಬರುವ ವಾಹನಗಳನ್ನು ನಿರ್ಬಂಧಿಸಲಾಗಿದೆ.