ಎಲ್ಲೆಂದರಲ್ಲಿ ಬಿಸಾಡಿದ ಹಳೆಯ ಪೈಪ್‌-ತಪ್ಪದ ಕಿರಿಕಿರಿ

KannadaprabhaNewsNetwork |  
Published : Feb 24, 2025, 12:30 AM IST
ಹಳೆ ಪೈಪ್‌ | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ನಿರಂತರ ನೀರು ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು, ಕೆಲ ಕಡೆಗಳಲ್ಲಿ ಹಳೆಯ ಪೈಪ್‌ ತೆರವುಗೊಳಿಸಿ ಅಲ್ಲಲ್ಲೇ ಬಿಸಾಡಿದ್ದು ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಕಟ್ಟಡ ನಿರ್ಮಾಣದ ತ್ಯಾಜ್ಯವೇನಾದರೂ ರಸ್ತೆ ಮೇಲೆ ಬಿದ್ದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ದಂಡ ವಿಧಿಸುತ್ತದೆ. ಆದರೆ ನಿರಂತರ ನೀರು ಯೋಜನೆಯ ಕಾಮಗಾರಿಯ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದರೂ, ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಕಂಪನಿಗೆ ಮಾತ್ರ ದಂಡ ವಿಧಿಸುತ್ತಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶವನ್ನುಂಟು ಮಾಡಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ನಿರಂತರ ನೀರು ಯೋಜನೆಯ ಕಾಮಗಾರಿ ಭರದಿಂದ ಸಾಗಿದೆ. 2026ರಲ್ಲಿ ಪೂರ್ಣಗೊಳ್ಳಲಿದೆ. ಕೆಲ ಕಡೆಗಳಲ್ಲಿ ಹಳೆಯ ಪೈಪ್‌ ತೆರವುಗೊಳಿಸಿ ಹೊಸ ಪೈಪ್ ಅಳವಡಿಸಲಾಗುತ್ತಿದೆ. ಆದರೆ ಇದು ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುತ್ತಿದೆ. ನಿರಂತರ ನೀರು ಯೋಜನೆ ಜವಾಬ್ದಾರಿ ಎಲ್‌ಆ್ಯಂಡ್‌ಟಿ ಕಂಪನಿ ಹೊತ್ತಿದೆ. ₹1200 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿರುವ ಈ ಕಾಮಗಾರಿ ಬಗ್ಗೆ ಜನಪ್ರತಿನಿಧಿಗಳು ಕೂಡ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದ್ದುಂಟು. ಇದೀಗ ಹಳೆ ಪೈಪ್‌ ತೆಗೆದು ಎಲ್ಲೆಂದರಲ್ಲಿ ಬಿಸಾಡುತ್ತಿರುವುದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ.

ಏನಿದು ಯೋಜನೆ?

ಹಾಗೆ ನೋಡಿದರೆ 2020ಕ್ಕೆ ಎಲ್‌ಆ್ಯಂಡ್‌ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಆಗಿನಿಂದ ಪ್ರಾರಂಭಿಸಿರುವ ಈ ಕೆಲಸ 2025ರ ಜೂನ್‌ಗೆ ಮುಕ್ತಾಯವಾಗಬೇಕಿತ್ತು. ಆದರೆ ಮುಗಿಯದ ಕಾರಣ 2026ರ ಜೂನ್‌ವರೆಗೂ ವಿಸ್ತರಿಸಲಾಗಿದೆ. ರಾ ವಾಟರ್‌ ಮೇನ್‌ ಲೈನ್‌ 29.5 ಕಿಮೀ ಕೆಲಸ ಈಗಾಗಲೇ ಪೂರ್ಣವಾಗಿದೆ. ವಾಟರ್‌ ಟ್ರಿಟ್‌ಮೆಂಟ್‌ ಪ್ಲಾಂಟ್‌ ಸೇರಿ ಮತ್ತಿತರರ ಕೆಲಸ ಮೇನಲ್ಲಿ ಪೂರ್ಣವಾಗಲಿದೆಯಂತೆ. 23 ನೀರು ಸಂಗ್ರಹಾಗಾರಗಳಲ್ಲಿ 16 ಪೂರ್ಣಗೊಂಡಿದ್ದು, ಇನ್ನು ಏಳು ಟ್ಯಾಂಕ್‌ ನಿರ್ಮಿಸಬೇಕಿದೆ. ಇವು ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 1600 ಕಿಮೀ ವಿತರಣಾ ಲೈನ್‌ ಮಾಡಬೇಕಿದೆ. ಅದರಲ್ಲಿ ಈ ವರೆಗೆ ಆಗಿರುವುದು ಬರೀ 550 ಕಿಮೀ ಅಂದರೆ ಶೇ. 33ರಷ್ಟು ಮಾತ್ರ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸುತ್ತವೆ.

ಮೇನಲ್ಲಿ ವಾಟರ್‌ ಟ್ರಿಟ್‌ಮೆಂಟ್‌ ಪ್ಲ್ಯಾಂಟ್‌ ಪೂರ್ಣಗೊಂಡ ಬಳಿಕ 44 ವಾರ್ಡ್‌ಗಳಿಗೆ 2 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಬಹುದಾಗಿದೆ. ಸದ್ಯ ಏಳು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರು ತಿಳಿಸುತ್ತಾರೆ.

ಈಗೇನು ಸಮಸ್ಯೆ?

ಎಲ್‌ಆ್ಯಂಡ್‌ಟಿ ಸರಿ ಇರುವ ಹಳೆಯ ಪೈಪ್‌ಗಳನ್ನು ಸಹ ಕಿತ್ತೆಸೆದು ಹೊಸದಾಗಿ ಪೈಪ್‌ ಅಳವಡಿಸುತ್ತಿದೆ. ಇದರಿಂದ ಹಳೆ ಪೈಪ್‌ ಅಳವಡಿಸಿದ್ದ ಲಕ್ಷಾನುಗಟ್ಟಲೇ ದುಡ್ಡು ವ್ಯರ್ಥವಾಗುತ್ತಿದೆ. ಜತೆಗೆ ಕಿತ್ತಿರುವ ಹಳೆಯ ಪೈಪ್‌ಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ಎಷ್ಟೊ ಜನ ಬಿದ್ದು ಕಾಲು, ಕೈ ನೋವು ಮಾಡಿಕೊಂಡಿರುವುದುಂಟು. ಈ ಬಗ್ಗೆ ಎಲ್‌ಆ್ಯಂಡ್‌ ಟಿ ಕಂಪನಿ ಸಿಬ್ಬಂದಿಗೆ ಹೇಳಿದರೆ ಇದು ನಮ್ಮ ಜವಾಬ್ದಾರಿಯಲ್ಲ. ಇರುವುದನ್ನು ಕಿತ್ತು ಹೊಸ ಪೈಪ್‌ ಅಳವಡಿಸುವುದೊಂದೇ ನಮ್ಮ ಕರ್ತವ್ಯ ಎಂದು ನುಣುಚಿಕೊಳ್ಳುತ್ತಾರೆ.

ಪಾಲಿಕೆ ಅಧಿಕಾರಿಗಳಿಗೆ ಕೇಳಿದರೆ ಸಾಮರ್ಥ್ಯ ಇಲ್ಲದ ಪೈಪ್‌ಗಳನ್ನು ತೆಗೆದುಹಾಕಲಾಗುತ್ತಿದೆ. ಹಳೆ ಪೈಪ್‌ಗಳ ವಿಲೇವಾರಿ ಖಂಡಿತವಾಗಿ ಸಮರ್ಪಕವಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಿರಂತರ ನೀರು ಯೋಜನೆಯಡಿ ನೀರು ಬರುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿರುವುದಂತೂ ಸತ್ಯ.ಹೊಸ ಪೈಪ್ ಅಳವಡಿಕೆ

2025ರ ಜೂನ್‌ ತಿಂಗಳಲ್ಲಿ ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ ಒಂದು ವರ್ಷ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಮೇನಿಂದ 44 ವಾರ್ಡ್‌ಗಳಿಗೆ 2 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಸಾಮರ್ಥ್ಯ ಇಲ್ಲದ ಹಳೆ ಪೈಪ್‌ಗಳನ್ನು ತೆಗೆದು ಹೊಸ ಪೈಪ್‌ ಅಳವಡಿಸಲಾಗುತ್ತಿದೆ. ತೆಗೆದಿರುವ ಆ ಪೈಪ್‌ಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.

- ರುದ್ರೇಶ ಘಾಳಿ, ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!