ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಶಿವಣ್ಣ ತಮ್ಮ ತೋಟದಲ್ಲಿ ಕಾಫಿ ಕೊಯ್ಲು ಮಾಡಿಸಿ, ಸಂಜೆ ಸಮಯದಲ್ಲಿ ಯಡೂರು ಮಾರ್ಗವಾಗಿ ಬರುವಾಗ ಗ್ರಾಮದ ದೇವರಕೆರೆಗೆ ಓಮ್ನಿ ಮಗುಚಿದೆ. ಶಿವಣ್ಣ ಅವರ ಪತ್ನಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಲೀಲಾವತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಾರಾಗಿದ್ದಾರೆ.
ವ್ಯಾನ್ ಕೆರೆಗೆ ಉರುಳಿದ ಸಂದರ್ಭ ಮಾವಿನಕರೆಯ ಬಳಿಯಿರುವ ಗ್ರಾಮಸ್ಥರು ತಕ್ಷಣ ಸಹಾಯಕ್ಕೆ ಧಾವಿಸಿದರು. ಮುಳುಗಡೆ ಹಂತದಲ್ಲಿದ್ದ ವಾಹನದ ಹಿಂಭಾಗದ ಗಾಜು ಒಡೆದು ಎಲ್ಲರನ್ನೂ ರಕ್ಷಿಸಿದ್ದಾರೆ. ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಕೂಡಲೇ ಗಾಯಗೊಂಡವರನ್ನು ಸೋಮವಾರಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣ ಸ್ಥಳೀಯರು ನೆರವಾಗದಿದ್ದಾರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ಗ್ರಾಮಸ್ಥರು ಮತ್ತು ನಾಗರಿಕರ ಸಹಾಯದಿಂದ ಕ್ರೇನ್‌ನ ಮೂಲಕ ವ್ಯಾನ್ ಹೊರತೆಗೆಯಲಾಯಿತು.ಅಪಾಯಕಾರಿ ಕೆರೆಗೆ ರಕ್ಷಣಾ ಬೇಲಿ ಇಲ್ಲ: ನೀರಾವರಿ ಕೆರೆಯಾಗಿರುವ ಕಾರಣ ಹೂಳೆತ್ತಿರುವುದರಿಂದ ತುಂಬ ಆಳವಾಗಿದೆ. ರಾಜ್ಯಹೆದ್ದಾರಿಯಲ್ಲಿ ಕೆರೆ ಇದ್ದರೂ ಕೆರೆಯ ತಟದಲ್ಲಿ ರೇಲಿಂಗ್ಸ್ ಅಳವಡಿಸದ ಹಿನ್ನೆಲೆಯಲ್ಲಿ ಅನಾಹುತಕ್ಕೆ ದಾರಿಯಾಗಿದೆ. ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಗೆ ತೆರಳಲು ಪ್ರವಾಸಿಗರು ಇದೇ ರಸ್ತೆ ಅವಲಂಬಿಸಬೇಕಾಗಿದೆ. ಇನ್ನಾದರೂ ಲೋಕೋಪಯೋಗಿ ಇಲಾಖೆ ಕೆರೆಯ ಸುತ್ತ ಭದ್ರತಾ ಬೇಲಿ ಅಳವಡಿಸಬೇಕೆಂದು ಯಡೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.