ಕನ್ನಡಪ್ರಭ ವಾರ್ತೆ, ತುಮಕೂರುಒಕ್ಕೂಟ ಉಳಿಸಿ ಆಂದೋಲನದ ವತಿಯಿಂದ ರಾಜ್ಯಗಳ ಅಸ್ಮಿತೆ, ಹಕ್ಕು ಮತ್ತು ಪಾಲಿನ ರಕ್ಷಣೆ ಗಾಗಿ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದ್ದು, ಸೆ. 14 ರಂದು ರಾಜಧಾನಿ ಬೆಂಗಳೂರಿನಲ್ಲಿ ಚಾಲನೆ ಕೊಡಲಾಗುವುದು ಎಂದು ಆಂದೋಲನದ ಪ್ರಮುಖರಾದ ಸಾಹಿತಿ ಹೋರಾಟಗಾರರಾದ ಜಾಣಗೆರೆ ವೆಂಕಟರಾಮಯ್ಯ ಹಾಗೂ ಪ್ರೊ. ಎಸ್. ಜಿ. ಸಿದ್ದರಾಮಯ್ಯ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಣಗೆರೆ ವೆಂಕಟರಾಮಯ್ಯ ಅವರು ಈ ದೇಶದಲ್ಲಿ ವಿರೋಧ ಪಕ್ಷಗಳೇ ಇರಬಾರದು. ಪ್ರತಿಪಕ್ಷಗಳಾಗಲಿ, ಸಾಹಿತಿ ಪ್ರಗತಿಪರರಾಗಲಿ ಒಕ್ಕೂಟ ಸರ್ಕಾರದ ವಿರುದ್ಧ ಧ್ವನಿ ಎತ್ತಬಾರದು ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಭಾರತದ ಪ್ರಜಾತಂತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರದ ಮಧ್ಯೆ ಕೆಲವು ತಿಕ್ಕಾಟಗಳು ಇದ್ದೇ ಇವೆ. ಆದರೆ ಕಳೆದ 10 ವರ್ಷ ಗಳಲ್ಲಿ ನಡೆಯುತ್ತಿರುವ ದಾಳಿ ಅತ್ಯಂತ ಅಪಾಯಕಾರಿಯಾದುದು. ಸಾಂವಿಧಾನಿಕವಾಗಿ, ಶಾಸನಾತ್ಮಕವಾಗಿ, ವಿತ್ತೀಯವಾಗಿ, ಸಾಂಸ್ಕೃತಿಕವಾಗಿ ಕೇಂದ್ರದ ದಾಳಿಯು ಒಕ್ಕೂಟ ವ್ಯವಸ್ಥೆಯನ್ನು ಮುಗಿಸುವ ದಿಕ್ಕಿನಲ್ಲಿ ಸಾಗಿದೆ. ದೇಶದ ವಿವಿಧ ರಾಜ್ಯ ಗಳ ಪ್ರಾದೇಶಿಕ ನಾಯಕಪ ವಿರುದ್ಧ ವಿವಿಧ ಆರೋಪಗಳನ್ನು ಹೊರಿಸಿ ಅವರನ್ನು ಗುರಿಮಾಡಿ ದಮನ ಮಾಡುವ ಪ್ರಯತ್ನ ನಡೆದಿದೆ. ಸ್ವತಂತ್ರ್ಯ ವೆಂದು ಭಾವಿಸಲಾದ ಎಲ್ಲಾ ತನಿಖಾ ಸಂಸ್ಥೆಗಳು ರಾಜಕೀಯ ವಿರೇಧಿಗಳ ಮೇಲೆ ಹೂಡಲಾದ ಬಾಣಗಳಂತೆ ಕೆಲಸ ಮಾಡುತ್ತಿವೆ. ಸದ್ಯ ರಾಜ್ಯದಲ್ಲೂ ರಾಜ್ಯ ಪಾಲರ ಕಚೇರಿಯ ದುರ್ಬಳಕೆ ಮಾಡಿ ಬಹುಮತದ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರ ಮೇಲೆ ಅವರ ಪಾತ್ರವಿಲ್ಲದ ಪ್ರಕರಣವನ್ನು ಮುಂದುಮಾಡಿ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.ಇದನ್ನು ವಿರೋಧಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರು ಮಾತನಾಡಿ, ಸೆ.೧೪ರಂದು ನಡೆಯಲಿರುವ ಅಭಿಯಾನದ ಉದ್ಘಾಟನೆಯ ಅಧ್ಯಕ್ಷತೆಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಗೋಪಾಲಗೌಡ ಅವರು ವಹಿಸಲಿದ್ದು, ಜನಪರ ಚಿಂತನೆಯ ಸಾಹಿತಿ ದೇವನೂರು ಮಹದೇವ, ರಾಮಕೃಷ್ಣ ಸೇರಿ ಅನೇಕ ಸಾಹಿತಿಗಳು, ಸಾಮಾಜಿಕ ಚಿಂತಕರು, ಹೋರಾಟಗಾರರು ಪಾಲ್ಗೊಳ್ಳುತ್ತಿದ್ದು, ಈ ಆಂದೋಲನಕಕೆ ಒಂದು ದಿನಕ್ಕೆ ಸೀಮಿತವಲ್ಲ. ರಾಜ್ಯವ್ಯಾಪಿ ವಿಸ್ತಾರಗೊಳ್ಳಲಿದೆ. ಭಾರತ ಒಕ್ಕೂಟ ವ್ಯವಸ್ಥೆಯಾದರೂ ಒಕ್ಕೂಟ ಎನ್ನುವುದನ್ನೇ ಮರೆತಂತೆ ಕೇಂದ್ರೀಕೃತ ಆಡಳಿತ, ರಾಜ್ಯಗಳ ಮೇಲೆ ಗದಾಪ್ರಹಾರ ಮಾಡುತ್ತಿದೆ. ಕೇಂದ್ರ ಸರ್ಕಾರವೆಂಬ ಪರಿಭಾಷೆಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ನಟರಾಜ್ ಬೂದಾಳ್ , ಡಿ.ಟಿ.ವೆಂಕಟೇಶ್, ಸಾಹಿತಿ ಎನ್.ನಾಗಪ್ಪ, ರಂಗಕರ್ಮಿ ನಟರಾಜ್ ಹೊನ್ನವಳ್ಳಿ, ಹಿರಿಯ ಹೋರಾಟಗಾರ ಗಂಗಾಧರ್, ಸಿ.ಕೆ.ಉಮಾಪತಿ, ನರಸೀಯಪ್ಪ, ಸಿ.ಕೆ.ಉಮಾಪತಿ ಮತ್ತಿತರರಿದ್ದರು.ಶ್ರದ್ಧಾಂಜಲಿ ಸಭೆ, ಸಂತಾಪ ಸೂಚನೆ: ಸುದ್ದಿಗೋಷ್ಠಿ ಬಳಿಕ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಅವರನ್ನು ಒಳಗೊಂಡಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಅಗಲಿದ ಹಿರಿಯ ಪತ್ರಕರ್ತರಾದ ವಸಂತ್ ನಾಡಿಗೇರ್ ಅವರಿಗೆ ಶ್ರದ್ಧಾಂ ಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು. ಹಿರಿಯ ಪತ್ರಕರ್ತರಾದ ಎಸ್.ನಾಗಣ್ಣ, ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಅವರುಗಳು ನುಡಿನಮನ ಸಲ್ಲಿಸಿದರು. ಹಿರಿಯ ಪತ್ರಕರ್ತರಾದ ಉಗಮ ಶ್ರೀನಿವಾಸ್ ಸೇರಿ ಸಂಘದ ನಿರ್ದೇಶಕರು, ಪತ್ರಕರ್ತರು ಪಾಲ್ಗೊಂಡರು.