ಚಾಮರಾಜನಗರದ ಪತ್ರಿಕಾಗೋಷ್ಠಿಯಲ್ಲಿ ನಾಟಕ ಅಕಾಡೆಮಿ ಮಾಜಿ ಸದಸ್ಯ ಮತ್ತು ಯಾನದ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಾವ್ಯ ಸಾಂಸ್ಕೃತಿಕ ಯಾನ ಜನರೆಡೆಗೆ ಕಾವ್ಯ ಪ್ರಥಮ ಕವಿಗೋಷ್ಠಿಯನ್ನು ನಗರದ ಡಾ.ರಾಜಕುಮಾರ್ ರಂಗಮಂದಿರದಲ್ಲಿ ಜು.೨೧ರ ಭಾನುವಾರ ಆಯೋಜಿಸಲಾಗಿದೆ ಎಂದು ನಾಟಕ ಅಕಾಡೆಮಿ ಮಾಜಿ ಸದಸ್ಯ ಮತ್ತು ಯಾನದ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಮಾದರಿ ಪಲ್ಲಟಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಮ್ಮ ಆಲೋಚನಾ ಕ್ರಮ ಮತ್ತು ಚಿಂತನೆಗಳು ವಿಭಿನ್ನ ಮಾರ್ಗ ಹಿಡಿದಿವೆ. ಜ್ಞಾನ ಮಾರ್ಗ ಡಿಜಿಟಲ್ ಮಾಧ್ಯಮಗಳಲ್ಲಿ ರೂಪಾಂತರಗೊಂಡು ಹರಿದುಬರುತ್ತಿರುವ ಈ ಕಾಲಘಟ್ಟದಲ್ಲಿ ಜನರೆಡೆಗೆ ಕಾವ್ಯವನ್ನು ಕೊಂಡೊಯ್ಯುವ ಪರಿಕಲ್ಪನೆಯೇ ಕಾವ್ಯ ಸಂಸ್ಕೃತಿ ಯಾನ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಚಾಮರಾಜನಗರದ ಡಾ.ರಾಜಕುಮಾರ್ ರಂಗಮಂದಿರದಲ್ಲಿ ಜು.೨೧ರ ಭಾನುವಾರ ರಂಗಮಂಡಲ ಹಾಗೂ ರಂಗವಾಹಿನಿ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜು ಉದ್ಘಾಟಿಸಲಿದ್ದು, ಶಾಸಕ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ವೆಂಕಟರಾಜು, ರಾಜು ಮಳವಳ್ಳಿ, ವೆಂಕಟರಮಣಸ್ವಾಮಿ, (ಪಾಪು) ಉಪಸ್ಥಿತರಿರುವರು. ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಸರ್ವಾಧ್ಯಕ್ಷತೆಯಲ್ಲಿ ಇಡೀ ದಿನ ನಡೆಯಲಿರುವ ಜನರೆಡೆಗೆ ಕಾವ್ಯ ಕವಿಗೋಷ್ಠಿಯಲ್ಲಿ ಜಿಲ್ಲೆಯ ಹಲವಾರು ಕವಿಗಳು ಭಾಗವಹಿಸಲಿದ್ದಾರೆ ಎಂದರು.ದೀನಬಂಧು ಸಂಸ್ಥೆಯ ಸಂಸ್ಥಾಪಕ ಪ್ರೊ.ಜಿ.ಎಸ್. ಜಯದೇವ ಹಿರಿಯ ಸಾಹಿತಿಗಳನ್ನು ಅಭಿನಂದಿಸಲಿದ್ದು, ಪತ್ರಕರ್ತ ರವೀಂದ್ರ ಭಟ್ಟ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಸಾಹಿತಿಗಳಾದ ಸುಬ್ಬು ಹೊಲೆಯಾರ್, ಜಿಲ್ಲಾ ಕಸಾಪ ಅಧ್ಯಕ್ಷ ಶೈಲಕುಮಾರ್, ಗುರುರಾಜ ಯರಗನಹಳ್ಳಿ, ಪ್ರಕಾಶ್‌ರಾಜ್ ಮೇಹು, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಡಾ. ಬಸವರಾಜೇಂದ್ರ, ಸುರೇಶ್‌ಗೌಡ, ಡಾ. ಪರಮೇಶ್ವರಪ್ಪ, ಮತ್ತಿತರರು ಉಪಸ್ಥಿತರಿರುವರು ಎಂದರು.
ಕಾವ್ಯ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವುದು, ಕಾವ್ಯಾಸಕ್ತರನ್ನು ಸುಲಭವಾಗಿ ತಲುಪಿ, ಸಹೃದಯ ಓದುಗರನ್ನು ಕಾವ್ಯದೆಡೆಗೆ ಸೆಳೆಯುವುದು ಯಾನದ ಉದ್ದೇಶ. ಪೂರ್ವ ಮತ್ತು ಸಮಕಾಲೀನ ಕವಿಗಳ ಕಾವ್ಯಾನುಸಂಧಾನದ ಜತೆಗೆ ಆಯಾ ಪ್ರದೇಶದ ಸಂಸ್ಕೃತಿ ಸೊಗಡನ್ನು ಪ್ರತಿಬಿಂಬಿಸುವ ಜಿಲ್ಲೆಯ ಕವಿಗಳು ಮತ್ತು ಸಾಹಿತ್ಯಾಸ್ತಕರನ್ನು ಒಂದಡೆ ಸೇರಿಸುವ ನಿಟ್ಟಿನಲ್ಲಿ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಚಾಮರಾಜನಗರದಿಂದ ಆರಂಭವಾಗಲಿರುವ "ಕಾವ್ಯ ಸಂಸ್ಕೃತಿ ಯಾನ " ಜಿಲ್ಲೆ ಜಿಲ್ಲೆಗಳನ್ನು ದಾಟಿ ಕರ್ನಾಟಕದ ತುದಿಯಲ್ಲಿರುವ ಬೀದರ್ ತಲುಪಲಿದೆ. ಆನಂತರ ರಾಜ್ಯದ ಗಡಿ ದಾಟಿ ಕನ್ನಡಿಗರು ನೆಲೆಸಿರುವ ಹೊರನಾಡಿನಲ್ಲಿ ಯಾನ ಮಂದುವರಿಯಲಿದೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಸಂಚಾಲಕ ಸಿ.ಎಂ.ನರಸಿಂಹಮೂರ್ತಿ, ಸಾಹಿತಿ ಸ್ವಾಮಿ ಪೊನ್ನಾಚಿ, ಮಹೇಶ್ ಚಿಕ್ಕಲ್ಲೂರು, ಮಾದಾಪುರ ರವಿಕುಮಾರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.