ಕಾರವಾರ: ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷರು, ವಿಶ್ರಾಂತ ಉಪನ್ಯಾಸಕರು, ಯಕ್ಷಗಾನ ಕಲಾವಿದರೂ ಆದ ಡಾ. ಜಿ.ಎಲ್. ಹೆಗಡೆ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಅಭಿನಂದನಾ ಗ್ರಂಥ ಗುರು ಗೌರವ ವರ್ಣ ವೈಭವ ಲೋಕಾರ್ಪಣೆ ಡಿ. 22ರಂದು ಕುಮಟಾದ ತಲಗೋಡ ಜನಾರ್ದನ ದೇವಾಲಯದಲ್ಲಿ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಗಾಯಕ ಡಾ. ವಿದ್ಯಾಭೂಷಣ, ಬೆಂಗಳೂರು ಉತ್ತರ ವಿವಿ ಕುಲಪತಿ ಡಾ. ನಿರಂಜನ ವಾನಳ್ಳಿ, ಲೇಖಕ ಲಕ್ಷ್ಮೀಷ ತೋಳ್ಪಾಡಿ, ಪ್ರಸಿದ್ಧ ಯಕ್ಷಗಾನ ಕಲಾವಿದ, ಸಂಶೋಧಕ ಡಾ. ಎಂ. ಪ್ರಭಾಕರ ಜೋಶಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ ಮೃತ್ಯುಂಜಯ ಮಹಾರಥಿ ಶಾಂತಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಗೀತರಾಮಾಯಣ, 2 ಗಂಟೆಗೆ ತಾಳಮದ್ದಳೆ, 4 ಗಂಟೆಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಂಜೆ 7 ಗಂಟೆಯಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಿನವಿಡಿ ಯಕ್ಷಗಾನ, ತಾಳಮದ್ದಲೆ, ಸಮಾರಂಭದ ಸಮಾರಾಧನೆ ನಡೆಯಲಿದೆ.
ಜಿ.ಎಲ್. ಹೆಗಡೆ: ಕುಮಟಾದ ಡಾ. ಎ.ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಡಾ. ಜಿ.ಎಲ್. ಹೆಗಡೆ 2019ರಲ್ಲಿ ಸೇವಾ ನಿವೃತ್ತಿಯಾದರು. 2010ರಲ್ಲಿ ಯಕ್ಷಗಾನ ಸಂಶೋಧನಾ ಕೇಂದ್ರ ಆರಂಭಿಸಿದರು. ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದಾರೆ.ತಾಳಮದ್ದಳೆಯ ಮೇರು ಶಿಖರ ಶೇಣಿ ಗೋಪಾಲಕೃಷ್ಣ ಭಟ್ ಅವರಿಂದ ಪ್ರಭಾವಿತರಾದವರು. ಹಾಗಾಗಿಯೇ ಶೇಣಿ ರಾಮಾಯಣವನ್ನು ಬರೆದರು. ಯಕ್ಷಗಾನ ಅರ್ಥಗಾರಿಕೆಯಲ್ಲೂ ಥೇಟ್ ಶೇಣಿಯವರದ್ದೆ ಶೈಲಿ. ಶೇಣಿ ಅವರೊಂದಿಗೆ ಸಾಕಷ್ಟು ಪ್ರಸಂಗಗಳಲ್ಲಿ ಅರ್ಥ ಹೇಳಿ ಸೈ ಎನ್ನಿಸಿಕೊಂಡಿದ್ದಲ್ಲದೆ, ಶೇಣಿ ಅವರೇ ತನ್ನ ಶಿಷ್ಯ ಎಂದು ಹೆಗಡೆ ಅವರ ಬೆನ್ನು ತಟ್ಟಿದ್ದು, ಅವಿಸ್ಮರಣೀಯ ಸಂಗತಿ. ತಾಳಮದ್ದಳೆ, ಯಕ್ಷಗಾನ ಎಂದರೆ ಅದೇನೋ ಆಕರ್ಷಣೆ. ರಾತ್ರಿಯಿಡಿ ನಿದ್ದೆಗೆಟ್ಟು ಯಕ್ಷಗಾನ ಕುಣಿದೋ, ತಾಳಮದ್ದಲೆಯಲ್ಲಿ ಅರ್ಥ ಹೇಳಿದರೂ ಮರುದಿನ ಕ್ಲಾಸಿನಲ್ಲಿ ಅದೇ ಉತ್ಸಾಹ. ಜಿ.ಎಲ್ ಹೆಗಡೆ ಏನೇ ಮಾಡುವುದಿದ್ದರೂ ಅದರಲ್ಲಿ ತೊಡಗಿಕೊಳ್ಳುವ ಪರಿಯೇ ಬೆರಗುಗೊಳಿಸುವಂತದ್ದು. ಚಿಟ್ಟಾಣಿ ಅವರ ಸುದೀರ್ಘ ಒಡನಾಡಿಯಾಗಿದ್ದ ಹೆಗಡೆ ಅವರು, ನಮ್ಮ ಚಿಟ್ಟಾಣಿ ಎಂಬ ಅದ್ಭುತ ಹೊತ್ತಿಗೆಯೊಂದನ್ನು ಹೊರತಂದರು. ಹಲವು ಅಮೂಲ್ಯ ಪುಸ್ತಕಗಳು, ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ. ಹೆಗಡೆ ಅವರು ವಿದ್ಯೆಯನ್ನು ಧಾರೆ ಎರೆಯುವುದರಲ್ಲಿ, ವಿದ್ಯಾರ್ಥಿಗಳಲ್ಲೆ ದೇವರನ್ನು ಕಂಡರು. ಯಕ್ಷಗಾನದಲ್ಲಿ ತಪಸ್ಸು ಮಾಡಿದರು. ಈಗ ದೇವಾಲಯವನ್ನೂ ನಿರ್ಮಿಸಿ ಮೇಲ್ಪಂಕ್ತಿ ಹಾಕಿದ್ದಾರೆ. ಜಿ.ಎಲ್. ಹೆಗಡೆ ಅವರು ಉಪನ್ಯಾಸಕರಾಗಿ ಬದುಕಿನ ದಾರಿ ತೋರಿಸಿದ್ದಾರೆ. ಯಕ್ಷಗಾನ ಸಂಶೋಧನಾ ಕೇಂದ್ರದ ಸಂಸ್ಥಾಪಕರು, ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಸಾಕಷ್ಟು ಯುವಕರು, ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದರು. 5 ದಶಕಗಳ ಕಾಲ ಯಕ್ಷಗಾನ, ತಾಳಮದ್ದಳೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಬೀದಿಬದಿ ವ್ಯಾಪಾರಸ್ಥರಿಗೆ ಕೊಡೆ ವಿತರಣೆ
ಭಟ್ಕಳ: ತಾಲೂಕಿನ ಸರ್ಪನಕಟ್ಟೆಯಲ್ಲಿರುವ ಶ್ರೀ ವಾಸುಕಿ ಸೌಹಾರ್ದ ಸಹಕಾರಿ ಸಂಘದ ಮೂರನೇ ವರ್ಷದ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ತಾಲೂಕಿನ ಸರ್ಪನಕಟ್ಟೆ, ಚೌಧನಿ, ಹೂವಿನ ಪೇಟೆ, ಹಳೆ ಬಸ್ ನಿಲ್ದಾಣದಲ್ಲಿರುವ ಬೀದಿ ಬದಿಯ ವ್ಯಾಪಾರಿಗಳಿಗೆ ಅನುಕೂಲವಾಗಲು ಕೊಡೆಗಳನ್ನು(ಗಾರ್ಡನ್ ಅಂಬ್ರೆಲ್ಲಾ) ನೀಡಲಾಯಿತು.ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೌಹಾರ್ದ ಸಹಕಾರಿಯ ನಿರ್ದೇಶಕರು ಬೀದಿ ವ್ಯಾಪಾರಿಗಳಿಗೆ ಕೊಡೆಗಳನ್ನು ಹಸ್ತಾಂತರಿಸಿದರು.ಬೀದಿಬದಿಯ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಘದ ವೃತ್ತಿಪರ ನಿರ್ದೇಶಕ ಸುಭಾಷ ಎಂ. ಶೆಟ್ಟಿ, ಹಣಕಾಸಿನ ಸಂಸ್ಥೆಯಲ್ಲಿ ಕೇವಲ ಲಾಭವೇ ಮುಖ್ಯವಾಗಿರದೆ, ಪ್ರತಿವರ್ಷ ಸಂಸ್ಥಾಪಕರ ದಿನಾಚರಣೆಯಂದು ಸಾರ್ವಜನಿಕರಿಗೆ ಅಥವಾ ಸಂಘ- ಸಂಸ್ಥೆಗಳಿಗೆ ಅನುಕೂಲವಾಗುವ ವಸ್ತುಗಳನ್ನು ನೀಡಲು ತೀರ್ಮಾನಿಸಿದಂತೆ ಈ ಬಾರಿ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಗಾರ್ಡನ್ ಕೊಡೆಯನ್ನು ನೀಡಲಾಗಿದೆ ಎಂದರು.ಸಂಘದ ನಿರ್ದೇಶಕರಾದ ಮಹಾದೇವ ನಾಯ್ಕ, ಗಣಪತಿ ಆಚಾರಿ, ವೃತ್ತಿಪರ ನಿರ್ದೇಶಕ ಸಂತೋಷ ಶೇಟ್, ಮುಖ್ಯ ಕಾರ್ಯ ನಿರ್ವಾಹಕ ಕಿಶನ್ ಶೆಟ್ಟಿ, ಸಂಘದ ಸಿಬ್ಬಂದಿ ಮತ್ತು ಬೀದಿಬದಿ ವ್ಯಾಪಾರಿಗಳು ಇದ್ದರು.