ಕನ್ನಡಪ್ರಭ ವಾರ್ತೆ ಸಾಗರ
ಸುಮಾರು ₹26 ಕೋಟಿ ವೆಚ್ಚದಲ್ಲಿ ಸಾಗರ- ಜಂಬಗಾರು ರೈಲ್ವೆ ನಿಲ್ದಾಣದ ಉನ್ನತೀಕರಣ ಸೇರಿದಂತೆ ಜಿಲ್ಲೆಯ ನಾಲ್ಕು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳಿಗೆ ಫೆ.26ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಇಲಾಖೆ ಸಹಾಯಕ ವಿಭಾಗೀಯ ಅಭಿಯಂತರ ಹರಿರಾಮ್ ಮೀನಾ ಹೇಳಿದರು. ಮಂಗಳವಾರ ಪಟ್ಟಣದ ರೈಲ್ವೆ ನಿಲ್ದಾಣದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅಮೃತ್ ಭಾರತ್ ಯೋಜನೆಯಡಿ ಫೆ.26ರಂದು ನಡೆಯುವ ಸಮಾರಂಭದಲ್ಲಿ ರಾಜ್ಯದ 55 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದರಲ್ಲಿ ಜಿಲ್ಲೆಯ ಶಿವಮೊಗ್ಗ, ಅರಸಾಳು, ಸಾಗರ-ಜಂಬಗಾರು ಹಾಗೂ ತಾಳಗುಪ್ಪ ನಿಲ್ದಾಣಗಳು ಸೇರಿವೆ. ಮುಂದಿನ ಎರಡು ವರ್ಷದೊಳಗೆ ಈ ಕಾಮಗಾರಿ ಕೆಲಸಗಳು ಮುಗಿಯಲಿವೆ. ನಿಲ್ದಾಣದ ಉನ್ನತೀಕರಣ, ಸಮರ್ಪಕ ಪಾರ್ಕಿಂಗ್, ಸಂಪರ್ಕ ರಸ್ತೆ ಅಭಿವೃದ್ಧಿ, ತಂಗುದಾಣದ ಮೇಲ್ಛಾವಣಿ ಅಳವಡಿಕೆ ಮೊದಲಾದವು ಸೇರಿವೆ ಎಂದು ಮಾಹಿತಿ ನೀಡಿದರು.ಯೋಜನೆಯಡಿ ಮುಂದಿನ ಎರಡು ವರ್ಷದಲ್ಲಿ ಸಾಗರ- ಜಂಬಗಾರು ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲ ಕಡೆಯಲ್ಲೂ ಉನ್ನತೀಕರಣಗೊಳಿಸಲು ತೀರ್ಮಾನಿಸಲಾಗಿದೆ. ಕಾಮಗಾರಿ ನಡೆಯುತ್ತಿರುವಲ್ಲಿಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಅಧಿಕಾರಿಗಳ ತಂಡವು ಮಂಗಳವಾರ ಸಾಗರ, ತಾಳಗುಪ್ಪ, ಅರಸಾಳು ನಿಲ್ದಾಣಗಳಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ, ವರ್ಚುಯಲ್ ಕಾರ್ಯಕ್ರಮಕ್ಕೆ ಅಗತ್ಯವಿರುವ ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿತು.ರೈಲ್ವೆ ಇಲಾಖೆ ಮುಖ್ಯ ಅಭಿಯಂತರ ಸಂತೋಷ್, ಎಲೆಕ್ಟ್ರಿಕ್ ವಿಭಾಗದ ಅಭಿಯಂತರ ಅಭಿಷೇಕ್, ಮುಖ್ಯ ವಾಣಿಜ್ಯ ಅಧೀಕ್ಷಕ ಮಂಜುನಾಥ್, ಇಲಾಖೆಯ ಅಕ್ಷಯಕುಮಾರ್, ಚಂದ್ರಕಾಂತ್, ಸಾಗರ ಬ್ರಾಡ್‌ಗೇಜ್ ಹೋರಾಟ ಸಮಿತಿ ಕಾರ್ಯದರ್ಶಿ ಕುಮಾರಸ್ವಾಮಿ, ಸದಸ್ಯ ಗುರುತೀರ್ಥ ಮೊದಲಾದವರು ಹಾಜರಿದ್ದರು.
- - - -20ಕೆ.ಎಸ್.ಎ.ಜಿ.2:ಸಾಗರ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಅಧಿಕಾರಿಗಳು ಕಾಮಗಾರಿ ಸ್ಥಳಗಳ ಪರಿಶೀಲನೆ ನಡೆಸಿದರು.