ಕನ್ನಡಪ್ರಭ ವಾರ್ತೆ ಮೈಸೂರು
ಬಿಜೆಪಿ- ಜೆಡಿಎಸ್ ರೂಪಿಸಿರುವ ಆ.3ರ ಬೆಂಗಳೂರು- ಮೈಸೂರು ಪಾದಯಾತ್ರೆ ವಿರೋಧಿಸಿ ಅಂದು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಎಚ್ಚರಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮಣಿಸುವ ಹುನ್ನಾರದಿಂದ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅಹಿಂದ ಸಂಘಟನೆಗಳ ಒಕ್ಕೂಟ, ದಸಂಸ ಮತ್ತು ಪ್ರಗತಿಪರರು ಸೇರಿ ಈ ಮುತ್ತಿಗೆ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋಮುವಾದಿ ರಾಜಕೀಯವನ್ನು ದಿಟ್ಟತನದಿಂದ ಎದುರಿಸುತ್ತಿರುವ ಅಹಿಂದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿರುವುದನ್ನು ಸಹಿಸಲಾಗದೇ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಮುಂದಾಗಿದೆ. ಹೀಗಾಗಿ ಬಹುಜನರ ನಾಯಕ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದರು.ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸುವ ಸಲುವಾಗಿ ಜಾತಿ ಗಣತಿ ವರದಿ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಇದು ಪ್ರಬಲ ಜಾತಿಗಳಿಗೆ ಕಣ್ಣುರಿ ತರಿಸಿದೆ. ಜಾತಿ ಗಣತಿ ವರದಿ ಅನುಷ್ಠಾನಕ್ಕೆ ಬಂದರೆ ಹಿಂದುಳಿದವರು, ಶೋಷಿತ ಜಾತಿಗಳು ರಾಜಕೀಯವಾಗಿ, ಸಾಮಾಜಿಕವಾಗಿ ಮುಂದೆ ಬರುತ್ತಾರೆ ಎಂಬ ಹೊಟ್ಟೆ ಕಿಚ್ಚಿನಿಂದ ಪ್ರಬಲ ಸಮುದಾಯಗಳು ಸಿದ್ದರಾಮಯ್ಯ ವಿರುದ್ಧ ಒಂದಾಗಿವೆ. ಇಂತಹ ಸನ್ನಿವೇಶದಲ್ಲಿ ಅಹಿಂದ ವರ್ಗಗಳು ಒಂದಾಗಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಅವರು ವಿವರಿಸಿದರು.
ಸಿದ್ದರಾಮಯ್ಯ ಅವರು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಜಾರಿಗೆ ತರುತ್ತಿದ್ದಾರೆ. ಕಳೆದ 40 ವರ್ಷಗಳ ರಾಜಕೀಯ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಹೀಗಾಗಿ ಎಂಡಿಎ ಹಾಗೂ ವಾಲ್ಮೀಕಿ ನಿಗಮದ ಹಗರಣವನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟಲಾಗುತ್ತಿದೆ ಎಂದು ಅವರು ಆರೋಪಿಸಿದರು.ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಬಿಜೆಪಿ-ಜೆಡಿಎಸ್ ನಾಯಕರಿಗೆ ಸುಫಾರಿ ಕೊಟ್ಟಿದ್ದಾರೆ. ಅವರ ಆಜ್ಞೆಯಂತೆ ಇವರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಆ.3ರಂದು ಬೆಳಗ್ಗೆ 11 ಗಂಟೆಗೆ ಅಹಿಂದ ಸಮುದಾಯಗಳ 500ಕ್ಕೂ ಹೆಚ್ಚು ಮುಖಂಡರು ನಗರದ ಚಾಮರಾಜಪುರಂನ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಈ ಹೋರಾಟದಲ್ಲಿ ಸಿದ್ದರಾಮಯ್ಯ ಬೆಂಬಲಿಗರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.ದಲಿತ ಸಂಘರ್ಷ ಸಮಿತಿಯ ಭುಗತಗಳ್ಳಿ ಮನಿಯಯ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಹಿಂದ ವರ್ಗದ ನಾಯಕನೆಂದು ಸೀಮಿತಗೊಳಿಸಬೇಡಿ. ಅವರು ಕೊಟ್ಟ ಜನಪರ ಯೋಜನೆಗಳನ್ನು ಎಲ್ಲಾ ಜಾತಿಯ ಜನರು ಪಡೆದುಕೊಂಡಿದ್ದಾರೆ. ಹೀಗಾಗಿ ರಾಜ್ಯದ 6 ಕೋಟಿ ಕನ್ನಡಿಗರೂ ಸಿದ್ದರಾಮಯ್ಯ ಪರ ನಿಲ್ಲಬೇಕು ಎಂದರು.
ಲೇಖಕ ಸಿದ್ದಸ್ವಾಮಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ದೇವಗಳ್ಳಿ ಸೋಮಶೇಖರ್, ಉಪ್ಪಾರ ಸಮುದಾಯದ ಮುಖಂಡ ಯೋಗೇಶ್ ಉಪ್ಪಾರ್ ಸೇರಿದಂತೆ ಹಲವರು ಇದ್ದರು.