ಮೋದಿ ಗ್ಯಾರಂಟಿ ಮೇಲಾ, ಕಾಂಗ್ರೆಸ್ ಗ್ಯಾರಂಟಿ ಹೆಚ್ಚಾ?

KannadaprabhaNewsNetwork |  
Published : Jun 03, 2024, 12:31 AM ISTUpdated : Jun 03, 2024, 01:29 PM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ನಾಳೆ ಮತ ಎಣಿಕೆ. ಎಲ್ಲ ಎಕ್ಸಿಟ್ ಪೋಲ್‌ಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದೇ ಹೇಳಿವೆ. ಆದರೆ ಕಾಂಗ್ರೆಸ್ ಎಕ್ಸಿಟ್‌ ಪೋಲ್‌ಗಳನ್ನು ನಂಬುವುದಿಲ್ಲ ಎಂದು ಹೇಳಿದೆ.

ವಸಂತಕುಮಾರ್ ಕತಗಾಲ 

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಅಧಿಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಾ ಅಥವಾ ಅಂಜಲಿ ನಿಂಬಾಳ್ಕರ್ ಅವರಾ? ಮೋದಿ ಅಲೆ ಬಿಜೆಪಿಯನ್ನು ಗೆಲ್ಲಿಸಲಿದೆಯಾ ಅಥವಾ ಕಾಂಗ್ರೆಸ್ ಗ್ಯಾರಂಟಿ ಗೆಲ್ಲಲಿದೆಯಾ? ಇಷ್ಟು ದಿನಗಳ ಪ್ರಶ್ನೆ, ತರ್ಕ, ಲೆಕ್ಕಾಚಾರಗಳಿಗೆ ನಾಳೆ ಉತ್ತರ ದೊರೆಯಲಿದೆ.

ನಾಳೆ ಮತ ಎಣಿಕೆ 

ಎಲ್ಲ ಎಕ್ಸಿಟ್ ಪೋಲ್‌ಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದೇ ಹೇಳಿವೆ. ಆದರೆ ಕಾಂಗ್ರೆಸ್ ಎಕ್ಸಿಟ್‌ ಪೋಲ್‌ಗಳನ್ನು ನಂಬುವುದಿಲ್ಲ ಎಂದು ಹೇಳಿದೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಚುನಾವಣೆ ಮುಗಿದ ತರುವಾಯ ವಿರಮಿಸದೆ ಇಡೀ ಕ್ಷೇತ್ರದ ಪ್ರತಿ ತಾಲೂಕಿನಲ್ಲೂ ಅವಲೋಕನ ಸಭೆ ನಡೆಸಿದ್ದಾರೆ. ಗೆಲ್ಲುವ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ವತಃ ಶಿರಸಿಗೆ ಆಗಮಿಸಿ ಪ್ರಚಾರ ಸಭೆ ನಡೆಸಿರುವುದು ಹಾಗೂ ಮೋದಿ ಜನಪ್ರಿಯತೆಯೇ ತಮ್ಮ ಗೆಲುವಿಗೆ ಕಾರಣವಾಗಲಿದೆ ಎಂದು ನಂಬಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಮತದಾನ ಮುಗಿದ ತರುವಾಯ ಜಿಲ್ಲೆಗೆ ಆಗಮಿಸದೆ ಇದ್ದರೂ ಚುನಾವಣೆ ಗೆಲ್ಲುವ ಬಗ್ಗೆ ಭರವಸೆ ಹೊಂದಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ತಮ್ಮ ಕೈಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂಡಗೋಡ ಹಾಗೂ ಕುಮಟಾಕ್ಕೆ ಆಗಮಿಸಿ ಪ್ರಚಾರ ನಡೆಸಿರುವುದು ಪ್ಲಸ್ ಪಾಯಿಂಟ್ ಆಗಲಿದೆ.ಮೇ 7ರಂದು ಚುನಾವಣೆ ಮುಗಿದ ತರುವಾಯ ಫಲಿತಾಂಶಕ್ಕಾಗಿ ಇಂದಿನ ತನಕ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ತುದಿಗಾಲಿನ ಮೇಲೆ ನಿಂತಿದ್ದಾರೆ. ಮತದಾರರೂ ತೀವ್ರ ಕುತೂಹಲದಿಂದ ಎದುರುನೋಡುತ್ತಿದ್ದರು. ಅಂತೂ ಎಲ್ಲರ ಕುತೂಹಲಕ್ಕೆ ಉತ್ತರ ದೊರೆಯುವ ಮತ ಎಣಿಕೆ ಜೂ. 4ರಂದು ಕುಮಟಾದ ಡಾ. ಎ.ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಹೀಗಾಗಿ ಎಲ್ಲರ ಗಮನ ಈಗ ಕುಮಟಾದತ್ತ ಹೊರಳಿದೆ. 

ಗೆಲುವಿನ ನಿರೀಕ್ಷೆ: ಬಿಜೆಪಿಯ ಸಂಘಟನೆಯಶಕ್ತಿ, ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷದ ಸಾಧನೆ, ಜೆಡಿಎಸ್ ಜತೆಗಿನ ಮೈತ್ರಿ ಇವುಗಳಿಂದಾಗಿ ಈ ಬಾರಿ ನಮಗೆ ದಾಖಲೆ ಮತಗಳ ಅಂತರದಿಂದ ಗೆಲುವು ಲಭಿಸಲಿದೆ ಎಂಬ ಭರವಸೆ ಇದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಅನುಕೂಲಕರ ವಾತಾವರಣ: ನಮ್ಮ ಕ್ಯಾಂಪೇನ್ ತುಂಬಾ ಚೆನ್ನಾಗಿತ್ತು. ಜನರ ಸ್ಪಂದನೆ ಕೂಡ ಉತ್ತಮವಾಗಿತ್ತು. ಬಿಜೆಪಿಯವರು ಇಷ್ಟು ವರ್ಷ ಕೆಲಸ ಮಾಡಿಲ್ಲ ಎಂದು ಜನತೆ ದೂರುತ್ತಿದ್ದರು. ಕಾಂಗ್ರೆಸ್ ಗ್ಯಾರಂಟಿ ಕೂಡ ನಮಗೆ ಅನುಕೂಲಕರವಾಗಿದೆ. ಗೆಲ್ಲುವ ವಿಶ್ವಾಸ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ತಿಳಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ