ಒಂದು ಕಡೆ ಚಿರತೆ ದಾಳಿಗೆ ಕುರಿಗಳು ಬಲಿ, ಮತ್ತೊಂದು ಕಡೆ ಬೋನಿಗೆ ಬಿದ್ದ ಹೆಣ್ಣು ಚಿರತೆ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ದೊಡ್ಡೇಗೌಡನದೊಡ್ಡಿ ಗ್ರಾಮದ ಜಮೀನಿನೊಂದರ ಬಳಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ 2 ವರ್ಷದ ಹೆಣ್ಣು ಚಿರತೆ ಸೆರೆಯಾದರೆ, ನಾಗಮಂಗಲ ತಾಲೂಕಿನ ಹರಳಕೆರೆ ಗ್ರಾಮದ ಹೊರವಲಯದಲ್ಲಿ ಚಿರತೆ ದಾಳಿಯಿಂದ 30 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ನಾಲ್ಕು ಕುರಿಗಳು ಸಾವನ್ನಪ್ಪಿದ್ದು, ಮೂರು ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಹಲಗೂರುದೊಡ್ಡೇಗೌಡನದೊಡ್ಡಿ ಗ್ರಾಮದ ಜಮೀನಿನೊಂದರ ಬಳಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಗ್ರಾಮದ ಪ್ರಕಾಶ್ ಎಂಬುವವರ ಜಮೀನಿನಲ್ಲಿ ಚಿರತೆ ಸೆರೆಗಾಗಿ ಬೋನ್ ಇಡಲಾಗಿತ್ತು. ಮೂರು ದಿನಗಳು ಸತಾಯಿಸಿ ಕೊನೆಗೂ ಸೋಮವಾರ ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ.

ಪ್ರಕಾಶ್ ತಮ್ಮ ಜಮೀನಿನಲ್ಲಿ ವ್ಯವಸಾಯದ ಜೊತೆಗೆ ಹಸು, ಕರು, ಕುರಿ, ಮೇಕೆಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದರು. ಒಂದು ವಾರದ ಹಿಂದೆ ಅಂಡನಹಳ್ಳಿ ಗುಡ್ಡ ಪ್ರದೇಶದಿಂದ ಬಂದ ಚಿರತೆ ಕೊಟ್ಟಿಗೆಯಲ್ಲಿದ್ದ ಕುರಿ ಮತ್ತು ಸಾಕಿದ್ದ ನಾಯಿಯನ್ನು ಕೊಂದು ಪರಾರಿಯಾಗಿತ್ತು.

ಇದರಿಂದ ಭಯಭೀತರಾದ ಪ್ರಕಾಶ್‌ ಜಮೀನಿಗೆ ಆಗಿಂದಾಗ್ಗೆ ಚಿರತೆಗಳು ಬರುತ್ತಿವೆ. ಸಾಕು ಪ್ರಾಣಿಗಳನ್ನು ಉಳಿಸುವುದಕ್ಕಾಗಿ ಅರಣ್ಯ ಇಲಾಖೆಯವರಿಗೆ ಚಿರತೆ ಹಿಡಿಯುವುದಕ್ಕೆ ಜಮೀನಿನಲ್ಲಿ ಬೋನ್ ಇಡುವಂತೆ ಮನವಿ ಮಾಡಿದ್ದರು.

ರೈತನ ಮನವಿಯಂತೆ ಮೂರು ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಬೋನ್ ಇಟ್ಟಿದ್ದರು. ಚಿರತೆ ಸೆರೆಯಾಗಿರುವುದರಿಂದ ರೈತ ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಬೋನುಗಳ ಅವಶ್ಯಕತೆ ಇದೆ:

ಅರಣ್ಯ ಅಧಿಕಾರಿ ಆರ್‌ಎಫ್ ಮಹಾದೇವು ಮಾತನಾಡಿ, ತಾಲೂಕಿನಲ್ಲಿ ಹೆಚ್ಚು ಚಿರತೆ ಹಾವಳಿ ಇರುವುದರಿಂದ ಚಿರತೆ ಹಿಡಿಯಲು ಬೋನುಗಳ ಅವಶ್ಯಕತೆ ಇದೆ. ಅದಕ್ಕಾಗಿ ಮನವಿ ಮಾಡಿದ್ದೇವೆ. ಅತಿ ಶೀಘ್ರದಲ್ಲೇ ಕೊಡುವುದಾಗಿ ಮೇಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಚಿರತೆ ಹೆಚ್ಚು ಓಡಾಡುವುದು ಕಂಡುಬಂದರೆ ಅಥವಾ ರೈತರಿಂದ ದೂರು ಬಂದರೆ ಅಂತಹ ಸ್ಥಳಗಳಲ್ಲಿ ಚಿರತೆ ಸೆರೆ ಹಿಡಿದು ಅಭಯ ಅರಣ್ಯಕ್ಕೆ ಬಿಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಸುಮಾರು 2 ವರ್ಷದ ಹೆಣ್ಣು ಚಿರತೆಯಾಗಿದ್ದು ಮೇಲಿನ ಅಧಿಕಾರಿಗಳ ಆದೇಶದಂತೆ ಬಂಡೀಪುರ ಅಥವಾ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ತಿಳಿಸಿದ್ದಾರೆ. ಈ ವೇಳೆ ಅರಣ್ಯ ಅಧಿಕಾರಿಗಳಾದ ಮಹದೇವು, ಶಿವರಾಜು, ಉಮೇಶ್ ಸೇರಿದಂತೆ ಇತರ ಸಿಬ್ಬಂದಿ ಇದ್ದರು.

ಚಿರತೆ ದಾಳಿಗೆ ನಾಲ್ಕು ಕುರಿಗಳು ಬಲಿ

ನಾಗಮಂಗಲ: ಚಿರತೆ ದಾಳಿಯಿಂದ 30 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ನಾಲ್ಕು ಕುರಿಗಳು ಸಾವನ್ನಪ್ಪಿ, ಮೂರು ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹರಳಕೆರೆ ಗ್ರಾಮದ ಹೊರವಲಯದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಗ್ರಾಮದ ಸೀತಯ್ಯರ ಪುತ್ರ ಕುಮಾರ್ ಎಂಬ ರೈತನಿಗೆ ಸೇರಿದ ನಾಲ್ಕು ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಮೂರು ಕುರಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.ಸೋಮವಾರ ಮಧ್ಯಾಹ್ನ ಎಂದಿನಂತೆ ಗ್ರಾಮದ ಹೊರವಲಯದ ತೆಂಗಿನ ತೋಟದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ದಿಢೀರ್ ಪ್ರತ್ಯಕ್ಷಗೊಂಡ ಚಿರತೆ ಏಕಾಏಕಿ ಕುರಿಗಳ ಮೇಲೆ ದಾಳಿ ನಡೆಸಿ 2 ಕುರಿಗಳ ಕುತ್ತಿಗೆ ಸೀಳಿ ಸಾಯಿಸಿ ಮತ್ತೆರಡು ಕುರಿಗಳ ಹೊಟ್ಟೆಭಾಗ ಜಿಗಿದು ಕೊಂದಿದೆ. ಚಿರತೆ ದಾಳಿಯಿಂದಾಗಿ ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗಿ ಓಡಿದ ಕುರಿಗಳ ಪೈಕಿ ಮೂರು ಕುರಿಗಳು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿವೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿ ಮಂಜುನಾಥ್ ನೇತೃತ್ವದ ಸಿಬ್ಬಂದಿ ಪರಿಶೀಲನೆ ನಡೆಸಿದ ಬಳಿಕ ಸಾವನ್ನಪ್ಪಿದ್ದ ಕುರಿಗಳ ಪಂಚನಾಮೆ ನಡೆಸಲಾಯಿತು.ಹರಳಕೆರೆ, ಕರಡಹಳ್ಳಿ ಹಾಗೂ ಕಲ್ಲಿನಾಥಪುರ ಗ್ರಾಮದ ಆಸುಪಾಸಿನ ಪ್ರದೇಶದಲ್ಲಿ ಚಿರತೆಗಳು ಆಗಾಗ್ಗೆ ದಾಳಿ ನಡೆಸಿ ಸಾಕು ಪ್ರಾಣಿಗಳನ್ನು ಬಲಿತೆಗೆದುಕೊಳ್ಳುತ್ತಿದ್ದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದರು.ಚಿರತೆ ದಾಳಿಯಿಂದಾಗಿ ಜಾನುವಾರುಗಳನ್ನು ಮೇಯಿಸಲು ಸಾಧ್ಯವಾಗುತ್ತಿಲ್ಲ. ಕುರಿಗಳನ್ನು ಕಳೆದುಕೊಂಡಿರುವ ರೈತ ಕುಮಾರ್‌ಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಿಸುವ ಜೊತೆಗೆ ಕುರಿ, ಮೇಕೆ, ಹಸು ಕರುಗಳನ್ನು ಬಲಿತೆಗೆದುಕೊಳ್ಳುತ್ತಿರುವ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರಲ್ಲಿರುವ ಆತಂಕವನ್ನು ದೂರಮಾಡಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದರು.ರೈತರ ಸಾಕು ಪ್ರಾಣಿಗಳನ್ನು ಬಲಿತೆಗೆದುಕೊಳ್ಳುತ್ತಿರುವ ಚಿರತೆಯನ್ನು ಶೀಘ್ರದಲ್ಲಿಯೇ ಸೆರೆ ಹಿಡಿಯಲು ಅಗತ್ಯ ಕ್ರಮ ವಹಿಸಲಾಗುವುದು. ಕುರಿಗಳನ್ನು ಕಳೆದುಕೊಂಡಿರುವ ರೈತರಿಗೆ ಇಲಾಖೆ ವತಿಯಿಂದ ಸಿಗಬಹುದಾದ ಪರಿಹಾರವನ್ನೂ ಸಹ ಕೊಡಿಸಲಾಗುವುದು. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರ್‌ಎಫ್‌ಓ ಮಂಜುನಾಥ್ ತಿಳಿಸಿದ್ದಾರೆ.

Share this article