ಕನ್ನಡಪ್ರಭ ವಾರ್ತೆ ಹನೂರು
ಕುಲಾಂತರಿ ತಳಿ ಆಹಾರಗಳನ್ನು ತಿರಸ್ಕರಿಸಿ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸೆ.17ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು. ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಸಂಘಟನೆ ವತಿಯಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಎಂದೆಂದೂ ಕಂಡರಿಯದಂತಹ ವಿಷಮ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ನಮ್ಮ ಮಾರುಕಟ್ಟೆಗಳನ್ನು ಆಕ್ರಮಿಸಿರುವ ಕುಲಾಂತರಿ ತಳಿಯ (ಜಿಎಂ) ಆಹಾರ ಪದಾರ್ಥಗಳನ್ನು ತಿರಸ್ಕರಿಸಿರುವುದಷ್ಟೇ ಅಲ್ಲ, ನಮ್ಮ ಉಳಿವಿಗಾಗಿ ಹೋರಾಟ ಮಾಡುವುದು ಮತ್ತು ಸುಸ್ಥಿರ ಸಮರ್ಥವಾದ ಹಾಗೂ ಹವಾಮಾನ ವೈಪರಿತ್ಯಗಳಿಂದ ಹೊಂದಿಕೊಳ್ಳುವ ಗುಣಾತ್ಮಕ ಉಳ್ಳ ಸಹಜ ಬೇಸಾಯ ಅಥವಾ ಸಾವಯವ ಕೃಷಿ ಪದ್ಧತಿಗಳ ಮೂಲಕ ನಮ್ಮ ಭವಿಷ್ಯವನ್ನು ಮರು ಪಡೆಯುವುದಕ್ಕಾಗಿ ಕಾಳಜಿಯುಳ್ಳ ಪ್ರತಿಯೊಬ್ಬ ಭಾರತೀಯ ನಾಗರಿಕರು, ಹನೂರು ತಾಲೂಕಿನ ಸಮಸ್ತ ರೈತ ಬಂಧುಗಳು, ಧಾರ್ಮಿಕ ಮುಖಂಡರು, ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಬುದ್ಧಿಜೀವಿಗಳು, ಸ್ಥಳೀಯ ಸ್ವಸಹಾಯ ಮಹಿಳಾ ಸಂಘಸಂಸ್ಥೆ, ಕಾರ್ಮಿಕರು, ಒಕ್ಕೂಟದ ನಾಯಕರು, ಗ್ರಾಹಕರು ಸಾವಯವ ಕೃಷಿಯ ಪ್ರತಿಪಾದಕರು ವಿದ್ಯಾರ್ಥಿಗಳು ವಿಷಮ ಸ್ಥಿತಿಯನ್ನು ಮತ್ತು ಅದರಿಂದಾಗುವ ಅನಾಹುತಗಳನ್ನು ಎದುರಿಸಲು ತುರ್ತಾಗಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಹೋರಾಟದ ಮೂಲಕ ಒಂದಾಗಬೇಕು.
ಹೀಗಾಗಿ ಸೆ.17ರಂದು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಈ ಕುಲಾಂತರಿ ಆಹಾರ ಪದಾರ್ಥ ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸೆ.29ರಂದು ತುಮಕೂರಿನಲ್ಲಿ ಕುಲಾಂತರಿ ಆಹಾರ ಪದಾರ್ಥಗಳನ್ನು ವಿರೋಧಿಸಿ ದೊಡ್ಡ ರ್‍ಯಾಲಿ ನಡೆಯಲಿದೆ. ಇದಕ್ಕೆ ಪ್ರತಿಯೊಬ್ಬ ನಾಗರಿಕರು ಹೋರಾಟ ಮಾಡಲು ಆರ್ಥಿಕವಾಗಿ ಸಹಕಾರ ನೀಡುವಂತೆ ಮನವಿ ಮಾಡಿದರು.ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಪ್ರತಿಭಟನೆ:
ಹನೂರು ತಾಲೂಕಿನಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಜೊತೆಗೆ ಪಟ್ಟಣದ ದಂಡಾಧಿಕಾರಿಗಳ ಕಚೇರಿ ಮುಂಭಾಗ ಇರುವ ಅಭಿಲೇಖಾನಾಲಯದ ರೆಕಾರ್ಡ್ ರೂಂನಲ್ಲಿ ಕಳ್ಳತನವಾಗಿ ವರ್ಷಾನುಗಟ್ಟಲೆ ಕಳೆದಿದೆ. ಅಧಿಕಾರಿಗಳು ಕ್ರಮವಹಿಸಿಲ್ಲ. ಜೊತೆಗೆ ಇಲ್ಲಿನ ದಾಖಲಾತಿ ಪಡೆಯಲು ಇಲ್ಲಿನ ಅಧಿಕಾರಿಯ ಸಿಬ್ಬಂದಿ ರೈತರಿಂದ ಸುಲಿಗೆ ಮಾಡುತ್ತಿದ್ದಾರೆ. ಹೆಚ್ಚು ಹಣ ನೀಡಿದರೆ ನಿಗದಿತ ಸಮಯಕ್ಕೆ ಮೊದಲೇ ನೀಡುತ್ತಾರೆ, ಇಲ್ಲದಿದ್ದರೆ ಸತಾಯಿಸುತ್ತಾರೆ. ದಾಖಲಾತಿ ನೀಡುವುದಿಲ್ಲ ಎಂದು ವ್ಯಾಪಕ ದೂರುಗಳು ಬಂದಿದೆ. ಸಿಬ್ಬಂದಿ ಮೇಲೆ ಕ್ರಮ ವಹಿಸಲು ಮತ್ತು ಬದಲಾವಣೆ ಮಾಡಲು ಜಿಲ್ಲಾಧಿಕಾರಿ ಗಮನ ಸೆಳೆಯಲಾಗುವುದು.ವಿದ್ಯುತ್ ಸಮಸ್ಯೆ ಕಾಡುಪ್ರಾಣಿಗಳ ಹಾವಳಿ:ತಾಲೂಕಿನಲ್ಲಿ ದಟ್ಟ ಅರಣ್ಯ ಪ್ರದೇಶದಿಂದ ಕೂಡಿರುವ ಗ್ರಾಮಗಳ ರೈತರ ಜಮೀನುಗಳಲ್ಲಿ ಫಸಲು ಬೆಳೆಯಲು ವಿದ್ಯುತ್ ಸಹ ನೀಡುತ್ತಿಲ್ಲ. ಸರಿಯಾಗಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ರೈತರಿಗೆ ತೊಂದರೆ ಆಗಿದೆ. ಇದರಿಂದ ಕಾಡು ಪ್ರಾಣಿಗಳ ಹಾವಳಿಯ ಸಮಸ್ಯೆ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮವಹಿಸಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ತೊಂದರೆ: ರೈತರ ಜಮೀನುಗಳಿಗೆ ತೆರಳಲು ರಸ್ತೆಗಳನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಲು ವಿಫಲರಾಗಿದ್ದಾರೆ. ಹೀಗಾಗಿ ತಾಲೂಕಿನಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವಿಫಲರಾಗಿರುವುದರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ಶಾಂತಕುಮಾರ್, ಪ್ರಸನ್ನ, ಮಾದಪ್ಪ, ಶ್ರೀಧರ್, ಮಹಾದೇವ ಇನ್ನಿತರ ರೈತ ಮುಖಂಡರು ವಿವಿಧಡೆಯಿಂದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.