- ರಾಜ್ಯಗಳ ಹಕ್ಕು ರಕ್ಷಣೆ, ಸಂವಿಧಾನ ಉಳಿವಿಗೆ ಸಮಾವೇಶ
- - - ಕನ್ನಡಪ್ರಭ ವಾರ್ತೆ, ದಾವಣಗೆರೆರಾಜ್ಯಗಳ ಅಸ್ಮಿತೆ, ಹಕ್ಕು, ಪಾಲಿನ ರಕ್ಷಣೆ, ಪ್ರಜಾಸತ್ತೆ, ಸಂವಿಧಾನದ ಉಳಿವಿಗಾಗಿ ಬೆಂಗಳೂರಿನ ಕೆ.ಆರ್. ವೃತ್ತದ ಯುವಿಸಿಇ ಅಲ್ಯುಮ್ನಿ ಸಭಾಂಗಣದಲ್ಲಿ ಸೆ.14ರಂದು ಸಂಚಲನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟ ಉಳಿಸಿ ಆಂದೋಲನದ ಪ್ರಮುಖ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಅಧ್ಯಕ್ಷತೆಯಲ್ಲಿ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ ದಾಸ್, ಚಿಂತಕ, ಸಾಹಿತಿ ದೇವನೂರು ಮಹದೇವ, ಪ್ರೊ.ರವಿವರ್ಮ ಕುಮಾರ, ಜಿ.ರಾಮಕೃಷ್ಣ ಇತರರು ಭಾಗವಹಿಸುವರು ಎಂದರು.ಒಕ್ಕೂಟದಿಂದ ರಾಜ್ಯಗಳ ಅಸ್ಮಿತೆ, ಹಕ್ಕು, ಪಾಲಿನ ರಕ್ಷಣೆ, ಪ್ರಜಾಸತ್ತೆ, ಸಂವಿಧಾನ ಉಳಿವಿಗಾಗಿ ರಾಷ್ಟ್ರೀಯ ಅಭಿಯಾನ ನಡೆಸಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ಸಮಾವೇಶ, ಅಭಿಯಾನದ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ. ಬೆಂಗಳೂರಿನ ಸಮಾವೇಶದ ನಂತರ ದೆಹಲಿಯಲ್ಲಿ ಇದೇ ತಿಂಗಳ ಮೂರನೇ ವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಳೆದೊಂದು ದಶಕದಿಂದ ಬಹುತ್ವ ಭಾರತದ ಅಸ್ಮಿತೆಗಳಾದ ಭಾಷೆ, ಸಂಸ್ಕೃತಿ, ಧರ್ಮ ವಿನಾಶ ಮಾಡುವ ಕಾರ್ಯ ನಡೆಯುತ್ತಿವೆ. ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಆತಂಕವೊಡ್ಡುವ ಯತ್ನಗಳು ನಡೆದಿದ್ದರೂ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಬಲವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸಂವಿಧಾನ, ಪ್ರಜಾಪ್ರಭುತ್ವ, ಗಣತಂತ್ರ ವ್ಯವಸ್ಥೆಗೆ ಧಕ್ಕೆ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರಜಾಸತ್ತೆ, ಸಂವಿಧಾನದ ಉಳಿವಿಗಾಗಿ ರಾಷ್ಟ್ರೀಯ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.ಕೇಂದ್ರ ಸರ್ಕಾರವು ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ಎಂಬ ಏಕಾತ್ಮಕತೆಯ ದೃಷ್ಟಿ ಹೊಂದಿರುವ ಭಾರತವನ್ನು ನಾಶ ಮಾಡುವ, ಸಂವಿಧಾನದ ಆಶಯಗಳನ್ನೇ ಹಿಸುಕಿ ಹಾಕುವ ಪ್ರಯತ್ನದಲ್ಲಿದೆ. ರಾಜ್ಯಗಳಲ್ಲಿ ಬೇರೆ ಪಕ್ಷಗಳ ಸರ್ಕಾರವಿದ್ದರೆ ಅಂತಹ ಕಡೆ ರಾಜ್ಯಪಾಲರ ಮೇಲೆ ಒತ್ತಡ ಹೇರಿ, ರಾಜಭವನವನ್ನೇ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಜನಬಲದ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನೇ ಕಿತ್ತುಹಾಕುವ ಕುತಂತ್ರವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಇದಕ್ಕೆ ದೆಹಲಿ ಜೊತೆಗೆ ಈಗಿನ ಕರ್ನಾಟಕ ರಾಜ್ಯಗಳ ವಿದ್ಯಾಮಾನಗಳೇ ಸಾಕ್ಷಿಯಾಗಿವೆ ಎಂದು ವಿವರಿಸಿದರು.
ಆಂದೋಲನದ ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹನಗವಾಡಿ, ಎಂ.ಟಿ.ಸುಭಾಶ್ಚಂದ್ರ, ಬಿ.ವೀರಣ್ಣ, ಪ್ರೊ. ಎ.ಬಿ. ರಾಮಚಂದ್ರಪ್ಪ, ನಿರಂಜನ ಇತರರು ಇದ್ದರು.- - -
ಟಾಪ್ ಕೋಟ್ ಮೈಸೂರಿನ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರಿ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಮಾಡಲಾಗಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ತಪ್ಪಲ್ಲ. ಆದರೆ, ತರಾತುರಿ ಬಗ್ಗೆ ನಮ್ಮ ಆಕ್ಷೇಪವಿದೆ- ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಪ್ರಮುಖ
- - --10ಕೆಡಿವಿಜಿ6, 7:
ದಾವಣಗೆರೆಯಲ್ಲಿ ಮಂಗಳವಾರ ಒಕ್ಕೂಟ ಉಳಿಸಿ ಆಂದೋಲನದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.