ಕನ್ನಡಪ್ರಭ ವಾರ್ತೆ ಹಲಗೂರು
ಭೀಕರ ಬರಗಾಲದಿಂದ ವರುಣನ ಅವಕೃಪೆಯಿಂದ ಜನ-ಜಾನುವಾರುಗಳಿಗಲ್ಲದೇ ಹಕ್ಕಿ ಪಕ್ಷಿಗಳಿಗೂ ಕುಡಿಯುವ ನೀರಿಗೂ ತೊಂದರೆಯಾಗಿತ್ತು. ಶುಕ್ರವಾರ ಸಂಜೆ ಹಲವೆಡೆ ಸಾಧಾರಣ ಮಳೆ ಬಿದ್ದ ಹಿನ್ನೆಲೆಯಲ್ಲಿ ಕೃಷಿಕನ ಮೊಗದಲ್ಲಿ ಸಂತಸದ ನಗೆ ಕಂಡು ಬಂತು.
ಮಳೆ ಜೊತೆ ಬಿದ್ದ ಆಲಿಕಲ್ಲು ಹಾಗೂ ಬಿರುಗಾಳಿಗೆ ಹಲವು ರೈತರ ಬೆಳೆಗಳು ನಾಶವಾಗಿವೆ. ತೀವ್ರ ಪ್ರಮಾಣದ ಗುಡುಗು ಹಾಗೂ ಸಿಡಿಲಿಗೆ ಮಾವಿನ ಫಸಲು ಹಾನಿಗೀಡಾದರೇ, ತೆಂಗು ಹಾಗೂ ಬಾಳೆ ಗಿಡಗಳು ನೆಲ್ಲಕ್ಕುರುಳಿದ ಪರಿಣಾಮ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ.ಲಿಂಗಪಟ್ಟಣ ಗ್ರಾಮದ ವಾಸಿ ಪುಟ್ಟೇಗೌಡರಿಗೆ ಸೇರಿದ ಒಂದು ಎಕ್ಕರೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದು ಫಸಲು ಕಡಿದು ಮಾರಾಟ ಮಾಡುವ ಸಂದರ್ಭದಲ್ಲಿ ಬಿರುಗಾಳಿಗೆ ಅರ್ಧ ಎಕ್ಕೇರಲ್ಲಿದ್ದ ಬಾಳೆ ಗಿಡಗಳು ಗಾಳಿ ರಭಸಕ್ಕೆ ಮುರಿದು ಬಿದ್ದು ಸುಮಾರು 2 ಲಕ್ಷ ರು.ನಷ್ಟ ಸಂಭವಿಸಿದೆ ಸಂಬಂಧಪಟ್ಟ ಇಲಾಖೆಯವರು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಬಾಳೆಹೊನ್ನಿಗ ಗ್ರಾಮದ ನೂರಾರು ರೈತರಿಗೆ ಆಸರೆಯಾಗಿದ್ದ ವೀಳ್ಯೆದೆಲೆ ತೋಟ ನಾಶವಾಗಿ ಕೋಟ್ಯಾಂತರ ರು. ನಷ್ಟ ಸಂಭವಿಸಿದೆ. ಬಿರುಗಾಳಿಗೆ ನಲುಗಿದ ವೀಳ್ಯೆದೆಲೆ ತೋಟಕ್ಕೆ ಆಸರೆಯಾಗಿದ್ದ ವಿವಿಧ ಜಾತಿಯ ಮರಗಳು ಮುರಿದು ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಪ್ರಾಂತ್ಯ ರೈತ ಸಂಘದ ಹೋಬಳಿ ಅಧ್ಯಕ್ಷ ಬಿ.ಎಸ್ .ಮಹೇಶ್ ಕುಮಾರ್ ಮಾತನಾಡಿ, ಬಾಳೆಹೊನ್ನಿಗ ಗ್ರಾಮದಲ್ಲಿ ವಿಳ್ಯದೆಲೆ ಬೆಳೆಗಾರರು ಹೆಚ್ಚು ಸುಮಾರು ನೂರಾರು ಕುಟುಂಬಗಳು ಬೆಳೆಯ ಆಸರೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಆದರೆ, ಶುಕ್ರವಾರ ಸಂಜೆ ಸುರಿದ ಮಳೆ ಹಾಗೂ ಬಿರುಗಾಳಿಗೆ ಸುಮಾರು ಲಕ್ಷಾಂತರ ರು ನಷ್ಟ ಸಂಭವಿಸಿದೆ. ಲೂಕು ಮತ್ತು ಜಿಲ್ಲಾಡಳಿತ ಹಾಗೂ ಸರ್ಕಾರ ಇದರ ಬಗ್ಗೆ ಗಮನಹರಿಸಿ ಸಂಕಷ್ಟಕ್ಕೆ ಸಿಲುಕಿರುವ ವೀಳ್ಯದೆಲೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಬೆಳೆಗಾರರ ಪರ ನಿಲ್ಲಬೇಕಿದೆ ಎಂದು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಎಸ್.ಶಾಂತರಾಜು ಮತ್ತು ಅಧಿಕಾರಿ ಚೇತನ್ ಬಾಳೆಹೊನ್ನಿಗ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಳಗಾದ ವೀಳ್ಯದೆಲೆ ಬೆಳೆಗಾರರ ಬಳಿ ಮಾಹಿತಿ ಪಡೆದರು. ಮತ್ತು ಇಲಾಖೆ ವತಿಯಿಂದ ಪರಿಹಾರ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.