ಕ್ರಿಶ್ಚಿಯನ್ ಯಂಗ್ ಮೆನ್ಸ್ ಅಸೋಷಿಯೇಷನ್ ಆಶ್ರಯದಲ್ಲಿ ಓಣಂ ಹಬ್ಬ ಹಾಗೂ ಕ್ರೀಡಾ ಕೂಟಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಓಣಂ ಮಾನವೀಯತೆ ಮತ್ತು ಸಮಾನತೆ ಸಾರುವ ಹಬ್ಬವಾಗಿದೆ ಎಂದು ರೋಮನ್ ಕ್ಯಾಥೋಲಿಕ್ ಚರ್ಚ್ ವಿಗಾರ್ ಜನರಲ್ ಫಾದರ್ ಟಿನೋ ಹೇಳಿದರು.ಭಾನುವಾರ ಇಲ್ಲಿನ ಯಂಗ್ ಮೆನ್ಸ್ ಕ್ರಿಶ್ಚಿಯನ್ಸ್ ಅಸೋಷಿಯೇಷನ್ (ವೈಎಂಸಿಎ) ಆಶ್ರಯದಲ್ಲಿ ಲಿಟಲ್ ಫ್ಲವರ್ ಸಮುದಾಯ ಭವನದಲ್ಲಿ 15 ಚರ್ಚ ನವರು ಒಟ್ಟಾಗಿ ಆಚರಿಸಿದ ಓಣಂ ಹಬ್ಬ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದಲ್ಲಿ ನಾಡಹಬ್ಬ ದಸರಾ ಆಚರಿಸುವ ರೀತಿಯಲ್ಲಿ ಕೇರಳದಲ್ಲಿ ಓಣಂ ನಾಡ ಹಬ್ಬವಾಗಿದೆ. ಓಣಂ ಪ್ರಯುಕ್ತ ಬಿಡಿಸುವ ಪೂಕಳಂ (ಹೂಗಳ ರಂಗೂಲಿ) ಪ್ರಕೃತಿ ಆರಾಧನೆ ಮತ್ತು ಎಲ್ಲರನ್ನೂ ಒಂದು ಗೂಡಿಸುವ ಸಂಕೇತವಾಗಿದೆ. ಶಾಂತಿ, ಸದ್ಬಾವನೆ ಹಾಗೂ ಐಕ್ಯತೆ ಪ್ರತೀಕವಾಗಿದೆ. ಎಲ್ಲರೂ ಎಲ್ಲಾ ಧರ್ಮವನ್ನು ಪ್ರೀತಿಸಬೇಕು. ಮಹಾ ಬಲಿಯ ರಾಜನ ರೀತಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಎಲ್ಲಾ ಕ್ರಿಶ್ಚಿಯನ್ ಪಂಗಡದವರನ್ನು ಒಗ್ಗೂಡಿಸಿ ಓಣಂ ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.
ಓಣಂ ಹಬ್ಬ ಆಚರಣಾ ಸಮಿತಿ ಖಜಾಂಚಿ ಪಿ.ಜೆ.ಅಂಟೋನಿ ಮಾತನಾಡಿ, ಕೇರಳದಲ್ಲಿ ನಾಡ ಹಬ್ಬವಾಗಿರುವ ಓಣಂನ್ನು ಯಾವುದೇ ಜಾತಿ, ಧರ್ಮ, ಮೇಲು, ಕೀಳು, ಬಡವ, ಬಲ್ಲಿದ ಎಂಬ ಬೇಧಭಾವ ಮಾಡದೆ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಇದು ವಿಶಿಷ್ಟ ಆಹಾರ ಪದ್ಧತಿ ಹಾಗೂ ಸಂಸ್ಕೃತಿ ಬಿಂಬಿಸುವ, ಶಾಂತಿ, ಸಮಧಾನ, ಸಂತೋಷ, ಸಮೃದ್ಧಿಯ ಹಬ್ಬವಾಗಿದೆ. ಪ್ರಪಂಚದಾದ್ಯಂತ ಕ್ರಿಶ್ಚಿಯನ್ ಸಮುದಾಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಬೇರೆ, ಬೇರೆ ಪಂಗಡಗಳಿವೆ. ತಾಲೂಕಿನ ವ್ಯಾಪ್ತಿಯ 15 ಪಂಗಡಗಳನ್ನು ಒಗ್ಗೂಡಿಸುವುದು ಕಷ್ಟವಾಗಿದೆ. ಹಿಂದೂ ಐತಿಹ್ಯ ಹೊಂದಿರುವ ಓಣಂನ್ನು ಕ್ರಿಶ್ಚಿಯನ್ ಸಮುದಾಯದವರು ಆಚರಿಸುವುದು ವಿಶೇಷ. ಕೇರಳಿಗರಿಗೆ ಮಲಯಾಳಂ ಮಾತೃ ಭಾಷೆ ಯಾಗಿದ್ದರೆ ಕನ್ನಡ ಅನ್ನದ ಭಾಷೆಯಾಗಿದೆ. ಓಣಂ ಎಲ್ಲಾ ಧರ್ಮಿಯರು ಸೇರಿ ಆಚರಿಸುವ ಹಬ್ಬವಾಗಿದೆ. ಓಣಂ ಹಬ್ಬದ ಸಂದರ್ಭದಲ್ಲಿ ಆಟೋಟ ಸ್ಪರ್ಧೆ ಆಯೋಜಿಸಿರುವುದು ಸೌಹಾರ್ದತೆ ಸಂಕೇತವಾಗಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ವೈಎಂಸಿಎ ಅಧ್ಯಕ್ಷ ಎಂ.ಪಿ.ಸನ್ನಿ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಸೇಂಟ್ ಮೇರಿಸ್ ಚರ್ಚ್ ನ ಫಾದರ್ ಬೆನ್ನಿ ಮ್ಯಾಥ್ಯೂ, ಮುತ್ತಿನಕೊಪ್ಪ ಚರ್ಚ್ ನ ಪಾಧರ್ ಎಲ್ದೋಸ್, ವರ್ಕಾಟೆ ಚರ್ಚ್ ನ ಫಾದರ್ ಸಿನೋಜ್, ಸೇಂಟ್ ಜಾನ್ ಚರ್ಚ್ ನ ಫಾದರ್ ಜೋನ್ಸನ್, ಸೇಂಟ್ ಜಾರ್ಜ್ ಚರ್ಚ್ ನ ಶೇವೆಲಿಯಾರ್ ಟಿ.ವಿ.ವಿಜಯನ್, ವೈಎಂಸಿಎ ನಿರ್ದೇಶಕ ಈ.ಸಿ.ಜೋಯಿ, ಕಾರ್ಯದರ್ಶಿ ಸಿಜು ಭಾಗವಹಿಸಿದ್ದರು.
ಓಣಂ ಪ್ರಯುಕ್ತ ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂತರ ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಆಕರ್ಷಕ ಹೂವಿನ ರಂಗೋಲಿ, ಓಣಂ ಸಾಂಪ್ರದಾಯಕ ನೃತ್ಯ ನಡೆಯಿತು.