ಕುರುಗೋಡು:
ದೇಶವ್ಯಾಪಿ ನರೇಂದ್ರ ಮೋದಿ ಅವರ ಅಲೆಯ ಅಬ್ಬರದ ಮುಂದೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಹಿಂದೆ ಸರಿಯುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಅವರಿಗೆ ಅಭ್ಯರ್ಥಿಗಳು ದೊರೆಯುತ್ತಿಲ್ಲ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.ಪಟ್ಟಣದಲ್ಲಿ ಗುರುವಾರ ಜರುಗಿದ ಬಿಜೆಪಿ ಬೂತ್ ವಿಜಯ ಅಭಿಯಾನದಲ್ಲಿ ಮಾತನಾಡಿದರು. ಜನ್ಮ ನೀಡಿದ ತಾಯಿಗಿಂತ ದೇಶ ಮುಖ್ಯ ಎನ್ನುವ ಧೇಯೋಧ್ಯೇಶ ಜೀವನದಲ್ಲಿ ಅಳವಡಿಸಿಕೊಂಡಿರುವ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಅವರು, ಕಾಂಗ್ರೆಸ್‌ನವರ ಪೊಳ್ಳು ಗ್ಯಾರಂಟಿಗಳಿಗೆ ಮಾರುಹೋಗದೆ ದೇಶದ ಅಭಿವೃದ್ಧಿಪರ ಚಿಂತನೆ ಹೊಂದಿರುವ ಮೋದಿ ಕೈಬಲಪಡಿಸಲು ಬಿಜೆಪಿ ಮತಹಾಕಿ ಎಂದು ಮನವಿ ಮಾಡಿದರು.ಮಾಜಿ ಶಾಸಕ ಟಿ.ಎಚ್. ಸುರೇಶ ಬಾಬು ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಕಳೆದ ಹತ್ತ ವರ್ಷಗಳಿಂದ ಮಟ್ಕಾ ಹಾಗೂ ಇಸ್ಪೀಟ್ ಜೂಜಾಟಗಳು ಹೆಚ್ಚಾಗಿವೆ. ಹೊಸ ಕಾಮಗಾರಿಗಳು ನಡೆಯುತ್ತಿಲ್ಲ. ಈ ಮೊದಲು ಪೂಜೆ ನೆರವೇರಿಸಿದ ಕಾಮಗಾರಿಗಳಿಗೆ ಹತ್ತತ್ತು ಬಾರಿ ಭೂಮಿ ಪೂಜೆ ಮಾಡುತ್ತಿದ್ದಾರೆಂದು ಹಾಲಿ ಶಾಸಕರ ವಿರುದ್ಧ ಹರಿಹಾಯ್ದರು.ಹಾಲಿ ಶಾಸಕರು ಸರ್ಕಾರಿ ಕಟ್ಟಡಗಳ ಕಾಮಗಾರಿ ಆಗುವ ಸ್ಥಳದ ಆಸು ಪಾಸಿನಲ್ಲಿ ಭೂಮಿ ಖರೀದಿಸಿ ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದ್ದಾರೆಂದು ಆರೋಪಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆಗೊಂಡ ಕಾಮಗಾರಿಗಳು ನಾನು ತಂದದ್ದು ಎಂದು ಜನರಿಗೆ ಸುಳ್ಳ ಹೇಳುತ್ತಿದ್ದಾರೆ. ಚುನಾವಣೆಯ ಸೋಲಿನ ನೋವು ಮರೆಯಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಶ್ರೀರಾಮುಲು ಅವರನ್ನುಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಎಂಎಲ್ಸಿ ಎನ್. ರವಿಕುಮಾರ್ ಮಾತನಾಡಿ, ಈ ಬಾರಿ ಮೋದಿ 400 ಹೆಚ್ಚು ಸ್ಥಾನಗಳು ದೊರೆತು ಹ್ಯಾಟ್ರಿಕ್ ಪ್ರಧಾನಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು. ಶ್ರೀರಾಮುಲು ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸೋಣ ಎಂದು ಹೇಳಿದರು.ಕೆ.ಎ. ರಾಮಲಿಂಗಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುನೀಲ್ ನಾಯ್ಡು ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ, ಮುಖಂಡರಾದ ಮದಿರೆ ಕುಮಾರ ಸ್ವಾಮಿ, ಎ. ತಿಮ್ಮಾರೆಡ್ಡಿ, ಓಬಳೇಶ, ಜೆ. ಸೋಮಶೇಖರ ಗೌಡ, ಎನ್. ಕೊಮಾರೆಪ್ಪ, ವಿ.ಕೆ. ಬಸಪ್ಪ, ಸಿ.ಆರ್. ಹನುಮಂತ, ಮಹೇಶ ಗೌಡ, ರುಬಿಯಾ ಇದ್ದರು.