ಸೇವೆಯ ಮೂಲಕ ಶಾಶ್ವತವಾಗಿ ಸಮಾಜದಲ್ಲಿ ಸ್ಮರಣೀಯರಾಗಲು ಸಾಧ್ಯ: ಮೇಜರ್ ರಾಘವ

KannadaprabhaNewsNetwork | Published : Dec 12, 2023 12:45 AM

ಸಾರಾಂಶ

ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ರೋಟರಿ ಮಿಸ್ಟಿಹಿಲ್ಸ್‌ನಿಂದ ಆಯೋಜಿತ ವಲಯ 6ರ ಸಾಂಸ್ಕೃತಿಕ ಸ್ಪರ್ಧೆ ಕಲಾಪರ್ವ

ಕನ್ನಡಪ್ರಭ ವಾರ್ತೆ ಮಡಿಕೇರಿಸಮಾಜಸೇವೆ ಮೂಲಕ ಸಮಾಜದಲ್ಲಿ ನಾವು ಶಾಶ್ವತವಾಗಿ ಸ್ಮರಣೀಯರಾಗಲು ಸಾಧ್ಯ ಇದೆ ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾಯ೯ಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ರಾಘವ ಅಭಿಪ್ರಾಯಪಟ್ಟಿದ್ದಾರೆ.ನಗರದ ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ರೋಟರಿ ಮಿಸ್ಟಿಹಿಲ್ಸ್‌ನಿಂದ ಆಯೋಜಿತ ವಲಯ 6ರ ಸಾಂಸ್ಕೃತಿಕ ಸ್ಪರ್ಧೆ ಕಲಾಪರ್ವವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಬದಲಾವಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮ ಗಾಂಧೀಜಿ, ರಾಜಾರಾಮ್ ಮೋಹನ್ ರಾಯ್, ಲಾಲಾ ಲಜಪತ್ ರಾವ್, ಬಾಬಾ ಆಮ್ಟೆ, ಮಥರ್ ಥೆರೆಸಾ, ಸ್ವಾಮಿ ವಿವೇಕಾನಂದ ಅವರಂಥ ಅನೇಕ ಮಹಾನೀಯರು ಪ್ರತೀಯೋರ್ವರ ಜೀವನದ ಆದರ್ಶವಾಗಬೇಕು ಎಂದು ಕರೆ ನೀಡಿದರು.ಸಾಮಾಜಿಕ ಚಳವಳಿಗಳ ಮೂಲಕ ದೇಶವನ್ನು ಸುಭದ್ರಗೊಳಿಸುವಲ್ಲಿ ಸಾಕಷ್ಟು ಮಹನೀಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂಥ ಮಹನೀಯರ ಜೀವನಾದರ್ಶಗಳನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಹೇಳಿಕೊಡಬೇಕು. ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪರಿಸರ ಮತ್ತಿತರ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಯೋಜನೆ ರೂಪಿಸಿದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಶ್ವತವಾಗಿ ನಮ್ಮನ್ನು ಸಮಾಜದ ಜನತೆ ಸ್ಮರಣೆ ಮಾಡಿಕೊಳ್ಳುವಂತಾಗಬೇಕಾದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜಕ್ಕೆ ಕೊಡುಗೆ ನೀಡುವಂಥ ಕಾರ್ಯ ಮಾಡಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, 12 ವರ್ಷಗಳ ಬಳಿಕ ರೋಟರಿ ಮಿಸ್ಟಿಹಿಲ್ಸ್ ವಲಯ 6 ರ 14 ರೋಟರಿ ಸಂಸ್ಥೆಗಳ ಸದಸ್ಯರು, ಕುಟುಂಬದವರಿಗಾಗಿ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸುತ್ತಿದೆ. 200ಕ್ಕೂ ಅಧಿಕ ಸದಸ್ಯರು ಈ ಬಾರಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ರೋಟರಿ ಪರಿವಾರದ ಕಲಾಪ್ರತಿಭೆ ಗುರುತಿಸಲು ಸಾಂಸ್ಕೃತಿಕ ಸ್ಪರ್ಧೆಗಳು ಸಹಕಾರಿಯಾಗಿದೆ ಎಂದರು.ವೇದಿಕೆಯಲ್ಲಿ ರೋಟರಿ ವಲಯ 6ರ ಸಹಾಯಕ ಗವರ್ನರ್‌ಗಳಾದ ದೇವಣಿರ ತಿಲಕ್, ಸತ್ಯನಾರಾಯಣ, ಲಿಖಿತ್, ವಲಯ ಸೇನಾನಿಗಳಾದ ಎಸ್.ಎಸ್.ಸಂಪತ್ ಕುಮಾರ್, ಮಾಚಯ್ಯ, ವಲಯ 6ರ ಸಾಂಸ್ಕೃತಿಕ ಸಮಿತಿ ಸಹಸಂಚಾಲಕ ಆದಿತ್ಯ, ಜಿಲ್ಲಾ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಜೆ.ಕೆ.ಸುಬಾಷಿಣಿ, ರೋಟರಿ ಮಿಸ್ಟಿಹಿಲ್ಸ್‌ನ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಶಂಕರ್ ಪೂಜಾರಿ ಉಪಸ್ಥಿತರಿದ್ದರು. ರೋಟರಿ ಮಿಸ್ಟಿಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ. ನಿರೂಪಿಸಿದರು. ಕಾರ್ಯದರ್ಶಿ ರತ್ನಾಕರ್ ರೈ ವಂದಿಸಿದರು.

ಕಲಾಪರ್ವ ಬಹುಮಾನ ವಿಜೇತರ ವಿವರ

ಸಮೂಹ ನೃತ್ಯ ಸ್ಪರ್ಧೆ- ವಿರಾಜಪೇಟೆ ರೋಟರಿ (ಪ್ರಥಮ), ಗೋಣಿಕೊಪ್ಪ ರೋಟರಿ (ದ್ವಿತೀಯ) ಸಮೂಹ ಗಾಯನ ಸ್ಪರ್ಧೆ- ವಿರಾಜಪೇಟೆ ರೋಟರಿ (ಪ್ರಥಮ), ಮಡಿಕೇರಿ ರೋಟರಿ ವುಡ್ಸ್ (ದ್ವಿತೀಯ), ಗೋಣಿಕೊಪ್ಪ ರೋಟರಿ (ತೃತೀಯ)14 ವರ್ಷದೊಳಗಿನ ನೃತ್ಯ ಸ್ಪರ್ಧೆ- ಅನೂಹ್ಯ ರವಿಶಂಖರ್ (ಪ್ರಥಮ), ದೃತಿ ಪೂಜಾರಿ (ದ್ವಿತೀಯ), ನವನಿಕ (ತೃತೀಯ)ಕಿರುನಾಟಕ ಸ್ಪರ್ಧೆ- ಹುಣಸೂರು ರೋಟರಿ (ಪ್ರಥಮ), ಗೋಣಿಕೊಪ್ಪ ರೋಟರಿ (ದ್ವಿತೀಯ), ವಿರಾಜಪೇಟೆ ರೋಟರಿ (ತೃತೀಯ)ಸ್ಟಾಂಡ್ ಅಪ್ ಕಾಮಿಡಿ - ಬಸವರಾಜ್ ಹುಣಸೂರು (ಪ್ರಥಮ), ಬಿ.ಜಿ. ಅನಂತಶಯನ (ದ್ವಿತೀಯ), ಆದಿತ್ಯ ವಿರಾಜಪೇಟೆ (ತೃತೀಯ).14ರಿಂದ 18 ವರ್ಷದೊಳಗಿನ ವಿಭಾಗದ ನೃತ್ಯ ಸ್ಪಧೆ೯- ಪ್ರಗತಿ (ಪ್ರಥಮ), ಮುಕ್ತರಂಜಿತ್ (ದ್ವಿತೀಯ), ರಕ್ಷಾ (ತೃತೀಯ).14 ವರ್ಷದೊಳಗಿನ ವಿಭಾಗದ ಗಾಯನ ಸ್ಪರ್ಧೆ- ಇಶಾನಿ ಭರತ್ ರೈ (ಪ್ರಥಮ), ಶಾರ್ವರಿ ಕಿರಣ್ ರೈ (ದ್ವಿತೀಯ), ಸಮೇದಾ ರಾವ್ (ತೃತೀಯ).ಮಹಿಳೆಯರಿಗಾಗಿನ ಗಾಯನ ಸ್ಪರ್ಧೆ- ಪ್ರಮೀಳಾ ಶೆಟ್ಟಿ (ಪ್ರಥಮ), ಸುಮಿ ಸುಬ್ಬಯ್ಯ (ದ್ವಿತೀಯ), ಕಾವ್ಯಶ್ರೀ ಕಪಿಲ್ (ತೃತೀಯ).14ರಿಂದ 18 ವರ್ಷದೊಳಗಿನ ವಿಭಾಗದ ಗಾಯನ ಸ್ಪರ್ಧೆ- ಪ್ರಗತಿ (ಪ್ರಥಮ), ಭಾಂದವ್ಯ (ದ್ವಿತೀಯ), ಪ್ರಚೋದಯ ( ತೃತೀಯ).ಪುರುಷರ ಗಾಯನ ಸ್ಪರ್ಧೆ- ಶ್ರೀಹರಿ ರಾವ್ (ಪ್ರಥಮ), ರಾಜೀವ್ (ದ್ವಿತೀಯ), ಸಿ.ಎನ್. ವಿಜಯ್ (ತೖತೀಯ).ಡ್ಯುಯೆಟ್ ಗಾಯನ ಸ್ಪರ್ಧೆ- ರವಿಕುಮಾರ್ - ಪ್ರಮಿಳಾ ಶೆಟ್ಟಿ (ಪ್ರಥಮ), ರತ್ನಾಕರ್ ರೈ - ನಮಿತಾ ರೈ (ದ್ವಿತೀಯ), ಆದಿತ್ಯ - ಭಾಂದವ್ಯ (ತೃತೀಯ).ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಬಿ.ಜಿ.ಅನಂತಶಯನ, ಮೋಹನ್ ಪ್ರಭು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅನಿಲ್ ಎಚ್.ಟಿ. ಮತ್ತು ರಶ್ಮಿದೀಪಾ ನಿರೂಪಿಸಿದರು. ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರತ್ನಾಕರ್ ರೈ ವಂದಿಸಿದರು. ರೋಟರಿ ಮಿಸ್ಟಿ ಹಿಲ್ಸ್ ತಂಡದ ಪ್ರದರ್ಶನ ನೃತ್ಯ, ಹಾಡು ಗಮನ ಸೆಳೆಯಿತು.ತೀರ್ಪುಗಾರರಾಗಿ ಮಾದಾಪುರ ಡಿ.ಚೆನ್ನಮ್ಮ ಪ.ಪೂ.ಕಾಲೇಜಿನ ಉಪನ್ಯಾಸಕಿ ಸೀಮಾ ಮಂದಪ್ಪ, ಕುಶಾಲನಗರ ಜ್ಞಾನಗಂಗ ವಸತಿ ಶಾಲೆಯ ಉಪನ್ಯಾಸಕಿ ರಶ್ಮಿ ಉತ್ತಪ್ಪ, ವಿರಾಜಪೇಟೆ ಸಂತ ಅನ್ನಮ್ಮ ಪ.ಪೂ. ಕಾಲೇಜಿನ ಉಪನ್ಯಾಸಕಿ ಪ್ರತಿಮಾ ರೈ ಇದ್ದರು. ವಲಯ 6ರ 14 ರೋಟರಿ ಕ್ಲಬ್‌ಗಳ 210 ಸದಸ್ಯರು, ಕುಟುಂಬಸ್ಥರು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಪ್ರಥಮ, ದ್ವಿತೀಯ ಸ್ಥಾನ ಗಳಿಸಿದವರು ಜ.6ರಂದು ಮೈಸೂರಿನಲ್ಲಿ ಆಯೋಜಿತ ಜಿಲ್ಲಾ ರೋಟರಿಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ತಿಳಿಸಿದ್ದಾರೆ.

Share this article