ತಪ್ಪುಗಳನ್ನು ತಿದ್ದಿ ನಡೆದರೆ ವಾಲ್ಮೀಕಿಯಂತೆ ಶ್ರೇಷ್ಠರಾಗಬಹುದು: ತಹಸೀಲ್ದಾರ್ ಜಿ.ಆದರ್ಶ್

KannadaprabhaNewsNetwork | Published : Oct 18, 2024 12:15 AM

ಸಾರಾಂಶ

ದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ. ಜಗತ್ತನ್ನೇ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಿದವರು ಮಹರ್ಷಿ ವಾಲ್ಮೀಕಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮನುಷ್ಯರು ಸಣ್ಣಪುಟ್ಟ ತಪ್ಪು ಮಾಡುವುದು ಸಹಜ. ತಾವು ಮಾಡಿದ ತಪ್ಪುಗಳನ್ನು ತಿದ್ದಿ ನಡೆದರೆ ಮಹರ್ಷಿ ವಾಲ್ಮೀಕಿ ಅವರಂತೆ ಶ್ರೇಷ್ಠರಾಗಿ ಬದುಕು ಸಾಗಿಸಬಹುದು ಎಂದು ತಹಸೀಲ್ದಾರ್ ಜಿ.ಆದರ್ಶ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಆಡಳಿತಸೌಧದ ಒಳಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯ್ತಿಯ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ. ಜಗತ್ತನ್ನೇ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಿದವರು ಮಹರ್ಷಿ ವಾಲ್ಮೀಕಿ ಎಂದರು.

ಸಂಸ್ಕೃತದಲ್ಲಿ ಮೊಟ್ಟಮೊದಲು ರಚಿಸಿರುವ ರಾಮಾಯಣವೆಂಬ ಮಹಾಗ್ರಂಥದ ಚರಿತ್ರೆಯನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಪರಿವರ್ತನಾ ಜೀವನ ನಡೆಸುವ ಮೂಲಕ ಗುರಿಸಾಧನೆಗೆ ಮುಂದಾಗಬೇಕು. ಅವರು ರಚಿಸಿರುವ ಗ್ರಂಥಗಳು ದೇಶ, ವಿದೇಶಗಳಲ್ಲಿ ಖ್ಯಾತಿ ಪಡೆದು ಮಹರ್ಷಿ ವಾಲ್ಮೀಕಿ ಮಹಾಪುರಷ ಎನಿಸಿಕೊಂಡಿದ್ದಾರೆ. ಅವರ ತತ್ವ, ಆದರ್ಶ ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು.

ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲಭಾಷಾ ಶಿಕ್ಷಕ ಎಚ್.ಎಸ್.ಚಂದನ್, ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಸಂಸ್ಕೃತದಲ್ಲಿ ಅತ್ಯಂತ ಶ್ರೇಷ್ಠವಾದ ಗ್ರಂಥವನ್ನು ಕೊಟ್ಟಂತಹ ಮಹರ್ಷಿ ವಾಲ್ಮೀಕಿ ಒಬ್ಬ ದಾರ್ಶನಿಕ ವ್ಯಕ್ತಿ ಎಂದರು.

ತಾಪಂ ಇಒ ಬಿ.ಎಸ್.ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್, ಸಿಡಿಪಿಒ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್.ರಾಜೇಶ್, ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಮುತ್ತಣ್ಣ, ವಕೀಲ ಚಂದ್ರಶೇಖರ್, ದಸಂಸ ಮುಖಂಡರಾದ ಎಂ.ನಾಗರಾಜಯ್ಯ, ಕಂಚಿನಕೋಟೆ ಮೂರ್ತಿ, ಮುಳಕಟ್ಟೆ ಶಿವರಾಮಯ್ಯ ಸೇರಿದಂತೆ ಹಲವರು ಇದ್ದರು.

Share this article