ಒಂದು ದೇಶ ಒಂದು ಚುನಾವಣೆಯಿಂದ ದೇಶದಲ್ಲಿ ಅಭದ್ರತೆ ಸೃಷ್ಟಿ: ನ್ಯಾ.ನಾಗಮೋಹನ್‌ ದಾಸ್‌

KannadaprabhaNewsNetwork |  
Published : Oct 10, 2024, 02:18 AM IST
Kondaji 6 | Kannada Prabha

ಸಾರಾಂಶ

‘ಒಂದು ದೇಶ-ಒಂದು ಚುನಾವಣೆ ನಿರಂಕುಶ ಪ್ರಜಾಪ್ರಭುತ್ವದತ್ತ ಭಾರತ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರ ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆ ಜಾರಿಗೆ ತರುವುದರಿಂದ ದೇಶದಲ್ಲಿ ಅಭದ್ರತೆ ಉಂಟಾಗುತ್ತದೆ. ರಾಜ್ಯಗಳು ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತವೆ ಎಂದು ಹೈಕೋರ್ಟ್‌ ವಿಶ್ರಾಂತ ನ್ಯಾ.ಎಚ್‌.ಎನ್. ನಾಗಮೋಹನದಾಸ್‌ ಅಭಿಪ್ರಾಯಪಟ್ಟರು.

ಬುಧವಾರ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ‘ಒಂದು ದೇಶ-ಒಂದು ಚುನಾವಣೆ ನಿರಂಕುಶ ಪ್ರಜಾಪ್ರಭುತ್ವದತ್ತ ಭಾರತ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಒಂದು ರಾಷ್ಟ್ರ- ಒಂದು ಚುನಾವಣೆ ಪ್ರಸ್ತಾವ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಎಂದರು.

ಹೊಸ ಚುನಾವಣಾ ವ್ಯವಸ್ಥೆಯಿಂದ ಪ್ರಜಾಪ್ರತಿನಿಧಿ ಕಾಯ್ದೆ, ಪಕ್ಷಾಂತರ ನಿಷೇಧ ಕಾಯ್ದೆಗಳಿಗೆ ತಿದ್ದುಪಡಿ ತರಬೇಕಾಗುತ್ತದೆ. ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಶಕ್ತಿ-ಸಾಮರ್ಥ್ಯ ಚುನಾವಣಾ ಆಯೋಗಕ್ಕೆ ಇಲ್ಲ. ಇದೊಂದು ಪ್ರಜಾಪ್ರಭುತ್ವ ವಿರೋಧಿ ನೀತಿ ಮತ್ತು ಕೇಂದ್ರ ಸರ್ಕಾರದ ಪೂರ್ವಯೋಜಿತ ನಿರ್ಧಾರವಾಗಿದೆ. ಕೋವಿಂದ್‌ ಸಮಿತಿ 47 ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳಿದ್ದು, ಈ ಪೈಕಿ 32 ಪಕ್ಷಗಳು ಒಪ್ಪಿಗೆ ಸೂಚಿಸಿವೆ. ದೇಶದ ಬಹುಸಂಖ್ಯೆಯ ರಾಜಕೀಯ ಪಕ್ಷಗಳು ಅವರ ಪರವಾಗಿವೆ. ಹೀಗಾಗಿ, ಜನರು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿವಿಗಾಗಿ ಇದನ್ನು ವಿರೋಧಿಸಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತ ಎ.ನಾರಾಯಣ್‌ ಮಾತನಾಡಿ, ಹೊಸ ಚುನಾವಣೆ ವ್ಯವಸ್ಥೆ ಜಾರಿಯ ಮೂಲ ಉದ್ದೇಶವೇ ರಾಜ್ಯಗಳ ಅಧಿಕಾರ ಅಸ್ಥಿರಗೊಳಿಸುವುದಾಗಿದೆ. ರಾಜ್ಯಗಳ ಆಡಳಿತವನ್ನು ಕೇಂದ್ರವೇ ನಡೆಸುವುದು ಮತ್ತು ದೇಶವನ್ನು ಪಕ್ಷ ಮುಕ್ತ ಮಾಡುವ ಜತೆಗೆ, ರಾಜ್ಯ ಮುಕ್ತಗೊಳಿಸುವ ದುರುದ್ದೇಶ ಹೊಂದಿದೆ. ದೇಶವನ್ನು ಕೇವಲ ಒಂದು ಪಕ್ಷ, ಧರ್ಮ ಹಾಗೂ ವರ್ಗಕ್ಕೆ ಸೀಮಿತಗೊಳಿಸುವ ಕುತಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡು, ಮುಖಂಡರಾದ ಇಂದುಧರ ಹೊನ್ನಾಪುರ, ಮರಿಯಪ್ಪಹಳ್ಳಿ, ಎನ್‌.ವೆಂಕಟೇಶ್‌, ಮುನಿಸ್ವಾಮಿ, ದಂಟರಮಕ್ಕಿ ಶ್ರೀನಿವಾಸ, ಪ್ರೊ.ಹುಲ್ಕೆರೆ ಮಹಾದೇವ, ಗಂಗನಂಜಯ್ಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ