ಕನ್ನಡಪ್ರಭ ವಾರ್ತೆ ಧಾರವಾಡ
ಅಸಹಕಾರ ಚಳವಳಿಯಲ್ಲಿ ದೇಶಾದ್ಯಂತ ಸಹಸ್ರಾರು ಹೋರಾಟಗಾರರು ಭಾಗವಹಿಸಿದ್ದರು. ಅದರಂತೆ 1921 ಜುಲೈ 1ರಂದು ಧಾರವಾಡದ ಜಕಣಿ ಬಾವಿ ಹತ್ತಿರವಿದ್ದ ಸಾರಾಯಿ ಅಂಗಡಿಗಳ ಎದುರು ಪ್ರತಿಭಟನೆ ನಡೆಸುತ್ತಿದ್ದಾಗ, ಬ್ರಿಟಿಷರ ಗೋಲಿಬಾರಿಗೆ ಮೂವರು ಖಿಲಾಫತ್ ಕಾರ್ಯಕರ್ತರು ವೀರಮರಣ ಅಪ್ಪಿದ್ದು, ಇದೀಗ ಜು. 1ಕ್ಕೆ ಈ ಘಟನೆ ನಡೆದು ಬರೋಬ್ಬರಿ 103 ವರ್ಷಗಳು ತುಂಬಿವೆ.ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲಿ ಧಾರವಾಡದ ಜನತೆಯೂ ಇದ್ದಾರೆ. ಬ್ರಿಟಿಷರ ಆಡಳಿತ ವಿರೋಧಿಸಿ ದೇಶದ ವಿವಿಧೆಡೆ ಆಗುತ್ತಿದ್ದ ಹೋರಾಟಗಳು ಧಾರವಾಡದಲ್ಲೂ ನಡೆದಿವೆ. ಅದು 1920ನೇ ಇಸವಿಯ ನಂತರ ಭಾರತೀಯರ ಸ್ವಾತಂತ್ರ್ಯದ ಕೂಗು ಬ್ರಿಟಿಷರ ಮೈಮನ ನಡುಗಿಸುವಂತೆ ಎಲ್ಲೆಡೆಯೂ ಆವರಿಸಿತು. ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಸಹಕಾರ ಆಂದೋಲನ ಹೊಸತೊಂದು ಶಕ್ತಿಯಾಗಿ ಸಂಗ್ರಾಮದ ಕಿಚ್ಚನ್ನು ಹೆಚ್ಚಿಸಿತು.
ಸಭೆ-ಮೆರವಣಿಗೆಗಳಲ್ಲದೆ ಸೇಂದಿ, ಸಾರಾಯಿ ಅಂಗಡಿಗಳ ಮುಂದೆ ಪ್ರತಿಭಟನೆ ಈ ಸಮಯದಲ್ಲಿ ಬಿರುಸಾಗಿ ಸಾಗಿತು. ಪತ್ರಿಕೆಗಳು ಈ ವಿಚಾರದಲ್ಲಿ ಉಗ್ರವಾಗಿ ಬರೆಯುತ್ತಿದ್ದವು. ಧಾರವಾಡದಲ್ಲಿ ಜಿಲ್ಲಾಧಿಕಾರಿಯಾದ ಪೇಂಟರ್ ಎಂಬಾತನು ದಬ್ಬಾಳಿಕೆ ಆರಂಭಿಸಿದ್ದನು.ಸಾರಾಯಿ ಅಂಗಡಿ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿ ಇಬ್ಬರು ಖಿಲಾಫತ್ ಸ್ವಯಂ ಸೇವಕರಿಗೆ ಆರು ತಿಂಗಳ ಶಿಕ್ಷೆಯನ್ನು ವಿಧಿಸಿತು. ಅದರ ಪ್ರತಿಭಟನಾರ್ಥ 1921ರ ಜು. 1ರಂದು ಧಾರವಾಡದಲ್ಲಿ ಹರತಾಳ ಆಚರಿಸಿದರು. ಒಂದು ಪ್ರತಿಭಟನಾ ಸಭೆಯೂ ನಡೆಯಿತು. ಆಗ ಸಾರಾಯಿ ಅಂಗಡಿ ಸುಡಲು ಯತ್ನಿಸಿದರು. ದೊಂಬಿ ಮಾಡಿದರು ಎಂದೆಲ್ಲ ಕಾರಣ ಹೇಳಿ ಪೊಲೀಸರು ಗೋಲಿಬಾರು ಮಾಡಿ ಮಲ್ಲಿಕಸಾಬ ಬಿನ್ ಮರ್ದಾನ ಸಾಬ, ಗೌಸುಸಾಬ ಬಿನ್ ಖಾದರ ಸಾಬ, ಅಬ್ದುಲ ಗಫಾರ ಚೌಕಥಾಯಿ ಎಂಬ ಮೂವರು ಖಿಲಾಫತ್ ಕಾರ್ಯಕರ್ತರನ್ನು ಕೊಂದರು. 39 ಜನರಿಗೆ ಗಾಯವಾಯಿತು. ಅಂದು ಕಾಂಗ್ರೆಸ್ ಮುಖಂಡರಲ್ಲಿ ಒಬ್ಬರಾಗಿದ್ದ ಶಿವಲಿಂಗಯ್ಯ ಅಯ್ಯಪ್ಪಯ್ಯ ಲಿಂಬೆಣ್ಣದೇವರಮಠ ಅವರ ಹೊಟ್ಟೆಗೆ ಗುಂಡು ತಗುಲಿ ಒಂದು ತಿಂಗಳ ವರೆಗೆ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ದನ್ನು ಅವರ ಮಗ ಹಿರಿಯ ನಾಗರಿಕ ಸಂಗಮೇಶ್ವರಯ್ಯ ಲಿಂಬೆಣ್ಣದೇವರಮಠ ಈಗಲೂ ಸ್ಮರಿಸುತ್ತಾರೆ.
ಈ ಘಟನೆ ಕುರಿತು ಸರ್ಕಾರ ವಿಚಾರಣೆ ನಡೆಸಬೇಕೆಂಬ ಬೇಡಿಕೆ ಬಂದಾಗ ಸರ್ಕಾರ ವಿಚಾರಣಾ ಆಯೋಗ ನೇಮಿಸಿತು. ಇಡೀ ದೇಶದಲ್ಲಿ ಈ ಘಟನೆಗೆ ವಿಶೇಷ ಪ್ರಚಾರ ಸಿಕ್ಕಿತು. ಈ ಸಂಬಂಧವಾಗಿ ಸರ್ಕಾರ 29 ಜನರನ್ನು ಬಂಧಿಸಿ ದೊಂಬಿಯ ನೆಪಹೇಳಿ 27 ಜನರ ಮೇಲೆ ಸುಳ್ಳು ಖಟ್ಲೆ ಹಾಕಿತು. ಈ ಖಟ್ಲೆ ದೀರ್ಘಕಾಲ ನಡೆದಿರಲು, ಅದೇ ಕಾಲಕ್ಕೆ ಲಾಲಾ ಲಜಪತರಾಯ್ ಧಾರವಾಡಕ್ಕೆ ಬಂದು ಕೈದಿಗಳನ್ನೆಲ್ಲ ಕಂಡು ಅವರಿಗೆ ಧೈರ್ಯ ಹೇಳಿ ಸಾರ್ವಜನಿಕ ಭಾಷಣ ಕೂಡ ಮಾಡಿದ್ದರು ಎಂದು ಹಿರಿಯರು ಹೇಳುತ್ತಾರೆ.ಹುತಾತ್ಮರಿಗೆ ಸ್ಮಾರಕ:
ಧಾರವಾಡ ಗೋಲಿಬಾರಿನ ಪ್ರತಿಕ್ರಿಯೆ ತೀವ್ರವಾಗಿತ್ತು. ಅನೇಕ ವರ್ಷ ಅದರ ದಿನಾಚರಣೆ ಮಾಡಲಾಗುತ್ತಿತ್ತು. 1921 ಜು. 1ರಂದು ಧಾರವಾಡದಲ್ಲಿ ಅಸಹಕಾರ ಅಂದೋಲನ ನಡೆದ ಸಂದರ್ಭದಲ್ಲಿ ಗೋಲಿಬಾರ್ ನಡೆದು ಮೂವರು ಖಿಲಾಪತ್ ಕಾರ್ಯಕರ್ತರು ಮೃತರಾದರು. ಇವರ ಸ್ಮರಣೆಗಾಗಿ ಭಾರತ ಸರ್ಕಾರ 25ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ಹುತಾತ್ಮರ ಸ್ಮಾರಕ ನಿರ್ಮಿಸಿದೆ. ಪ್ರತಿವರ್ಷದಂತೆ ಈ ಬಾರಿಯೂ ಜು. 1ರಂದು ಮುಂಜಾನೆ 9.30ಕ್ಕೆ ನಗರದ ಜಕಣ ಬಾವಿ ರಸ್ತೆಯಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಹುತಾತ್ಮರ ದಿನ ಆಚರಿಸಲಾಗುತ್ತಿದ್ದು, ಜಿಲ್ಲಾಧಿಕಾರಿ ದಿವ್ಯ ಪ್ರಭು ಆಗಮಿಸಲಿದ್ದಾರೆ ಎಂದು ಉದಯ ಮ. ಯಂಡಿಗೇರಿ ಮಾಹಿತಿ ನೀಡಿದರು.