ಮಾರ್ಚ್ ಅಂತ್ಯದೊಳಗೆ ನೂರರಷ್ಟು ಗುರಿ ಸಾಧನೆಯಾಗಬೇಕು-ಡಾ. ದಾನಮ್ಮನವರ

KannadaprabhaNewsNetwork |  
Published : Nov 21, 2025, 02:15 AM IST
20ಎಚ್‌ವಿಆರ್5- | Kannada Prabha

ಸಾರಾಂಶ

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನವನ್ನು ಮಾರ್ಚ್ ಅಂತ್ಯದೊಳಗೆ ನೂರಕ್ಕೆ ನೂರು ಗುರಿ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಹಾವೇರಿ: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನವನ್ನು ಮಾರ್ಚ್ ಅಂತ್ಯದೊಳಗೆ ನೂರಕ್ಕೆ ನೂರು ಗುರಿ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಜರುಗಿದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ ಜಿಲ್ಲಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಸಮುದಾಯಕ್ಕೆ ಮೀಸಲಾತಿ ಇರುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಹಾಗೂ ಸರ್ಕಾರದ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡಬೇಕು ಎಂದು ಸೂಚಿಸಿದರು.ಪೇಶ ಇಮಾಮ ಮತ್ತು ಮುವಜ್ಜನವರ ಗೌರವ ಧನ ಸಂದಾಯದ ಸಮಸ್ಯೆ, ಉರ್ದು ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ, ಅತಿಥಿ ಶಿಕ್ಷಕರ ನೇಮಕ, ಶಾಲೆಗಳ ಆಟದ ಮೈದಾನದ ಸಮಸ್ಯೆ, ಶಾಲಾ ಕೊಠಡಿ ಸಮಸ್ಯೆ ಸರಿಪಡಿಸುವಂತೆ ಜಿಲ್ಲಾ ಸಮಿತಿ ನಾಮ ನಿರ್ದೇಶಿತ ಸದಸ್ಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.ಹಾವೇರಿ ನಗರದ ವೈಭವ ಲಕ್ಷ್ಮಿ ಪಾರ್ಕನಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆ ಖಾಸಗಿ ಶಾಲೆಗಿಂತ ಉತ್ತಮವಾಗಿದೆ. ಅದೇ ರೀತಿ ಉಳಿದ ಶಾಲೆಗಳಿಗೆ ಆಟದ ಮೈದಾನ, ಅತಿಥಿ ಶಿಕ್ಷಕರ ನೇಮಕ ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು ಎಂದು ಶಾಲಾ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ 277 ಸರ್ಕಾರಿ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು, ಎಲ್ಲ ಶಾಲೆಗಳಿಗೂ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುವುದರಿಂದ ಅಂತಹ ಶಾಲೆಗಳಿಗೆ ಹೆಚ್ಚುವರಿ ಕೊಠಡಿ, ಅಡುಗೆ ಕೋಣೆ, ಕೌಂಪೌಂಡ್, ಗ್ರಂಥಾಲಯ, ಪ್ರಯೋಗಾಲಯ, ಡೆಸ್ಕ್, ಸ್ಮಾರ್ಟ್ಕ್ಲಾಸ್ ಮತ್ತು ಗಣಕಯಂತ್ರ ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಈ ಶಾಲೆಗಳಿಗೆ ಪ್ರಥಮಾದ್ಯತೆಯಲ್ಲಿ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 378 ಪೇಶ ಇಮಾಮ ಹಾಗೂ 378 ಮುವಜ್ಜನ ಇವರುಗಳಿಗೆ ಪ್ರತಿ ತಿಂಗಳು ಗೌರವಧನ ನೀಡಲಾಗುತ್ತಿದೆ. ಕರ್ನಾಟಕ್ ಗ್ರಾಮೀಣ ಬ್ಯಾಂಕ್ ತಾಂತ್ರಿಕ ಸಮಸ್ಯೆಯಿಂದ ಕೆಲವರಿಗೆ ಗೌರವಧನ ಸಂದಾಯವಾಗಿರಲಿಲ್ಲ. ಈಗ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದ್ದು, ಎಲ್ಲರಿಗೂ ಗೌರವಧನ ಸಂದಾಯವಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಗಂಗಾ ಕಲ್ಯಾಣ ಯೋಜನೆಯಡಿ ಪಂಪಸೆಟ್, ಮೋಟಾರ್, ಇತರೆ ಪೂರಕ ಸಾಮಗ್ರಿಗಳ ವಿತರಣೆಗೆ ಜಿಪಿಎಸ್ ಪೋಟೋ ಹಾಗೂ ಇತರೆ ದಾಖಲೆಗಳೊಂದಿಗೆ ಈ ತಿಂಗಳ ಅಂತ್ಯದವರೆಗೆ 62 ಕೊಳವೆಬಾವಿಗಳಿಗೆ ವಿದ್ಯುದ್ದೀಕರಣಕ್ಕಾಗಿ ಆನ್‌ಲೈನ್ ನೋಂದಣಿ ಕಾರ್ಯ ಮಾಡಲಾಗುತ್ತಿದೆ. ಕೊಳವೆಬಾವಿ ಕೊರೆಯಲು ಬಾಕಿ ಇರುವ 45 ಫಲಾನುಭವಿಗಳ ಜಮೀನಿನಲ್ಲಿ ಕೊಳವೆಬಾವಿ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸಭೆಗೆ ಮಾಹಿತಿ ನೀಡಿದರು.ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಿ.ಸಿ.ಎಂ. ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯ ಮೀಸಲಾತಿ ಕಾರ್ಯಕ್ರಮಗಳ ಪ್ರಗತಿ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುಬ್ರಾ ನಾಯ್ಕ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸಮಿತಿ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪಿಎಚ್‌ಡಿ ಫೆಲೋಶಿಪ್ ಸೇರಿದಂತೆ ವಿವಿಧ ಸೌಲಭ್ಯಗಳಿದ್ದು, ಈ ಎಲ್ಲ ಮಾಹಿತಿಗಳನ್ನು ಕಾಲಕಾಲಕ್ಕೆ ವಿದ್ಯಾರ್ಥಿಗಳಿಗೆ ನೀಡಬೇಕು, ಪಾಲಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಲು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!