ಗದಗ: ಗದಗ- ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ್ ನೇತೃತ್ವದ ಬಿಜೆಪಿ ತಂಡ ಅಲ್ಪ ಅವಧಿಯಲ್ಲೇ ಒಂದು ಸುತ್ತು ಪ್ರಚಾರಕಾರ್ಯ ಪೂರ್ಣಗೊಳಿಸಿದ್ದು, ಭಾರೀ ಸಂಖ್ಯೆಯಲ್ಲಿ ಬಂದು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದೆ.
ಆಯಾ ಗ್ರಾಮಗಳಲ್ಲಿನ ಪಕ್ಷದ ಪ್ರಮುಖರು ಮತ್ತು ಯುವಕರನ್ನು ಒಂದೆಡೆ ಸೇರಿಸಿ, ಹಳೆ ಬೇರು ಹೊಸ ಚಿಗುರು ಸೇರಿಸಿ ಚುನಾವಣೆ ನಡೆಸುವ ರಣತಂತ್ರ ರೂಪಿಸಿ ಎಲ್ಲರಲ್ಲಿಯೂ ಜಾಗೃತಿ ಮೂಡಿಸಿದರು.
ಪ್ರೀತಿ, ಮತಗಳಾಗಲಿ:ಬೇರೆ ಬೇರೆ ಸಣ್ಣ ಪುಟ್ಟ ಕಾರಣಗಳಿಂದ ಪಕ್ಷದಿಂದ ದೂರವಾದವರು, ಮುನಿಸಿಕೊಂಡು ಮನೆಯಲ್ಲಿದ್ದವರನ್ನು ಖುದ್ದು ಸಂಪರ್ಕಿಸಿ ಅವರಲ್ಲಿ ಭರವಸೆ ಮೂಡಿಸಿ. ಪಕ್ಷ ದೊಡ್ಡದು, ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ಅದಕ್ಕಾಗಿ ಎಲ್ಲರೂ ಶ್ರಮಿಸುವುದು ಹೇಗೆ? ದೇಶದ ಪ್ರತಿಯೊಬ್ಬರ ಮೋದಿ ಅವರನ್ನು ಪ್ರೀತಿಸುತ್ತಾರೆ, ಆದರೆ ಈ ಪ್ರೀತಿ ಮತಗಳಾಗಿ ರೂಪಿಸಬೇಕು ಎಂದು ಯುವ ಕಾರ್ಯಕರ್ತರಿಗೆ ಮನವರಿಕೆ ಮಾಡಿದರು.
ಈಗಾಗಲೇ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಲಾಗಿದೆ. ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರಿಗೆ ಬೇಸರ ಉಂಟಾಗಿದೆ. ನಮ್ಮ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅತೀ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.ಗದಗ ಜಿಲ್ಲೆಯಾದ್ಯಂತ ನಮ್ಮ ಪಕ್ಷದ, ಹಿರಿಯ ನಾಯಕರು, ಕಾರ್ಯಕರ್ತರು ಪ್ರಧಾನಿ ಮೋದಿ ಅವರ ಜನಪರ ಕಾರ್ಯಗಳನ್ನು ತಿಳಿಸುತ್ತಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ಕಂಡು ಬರುತ್ತಿದೆ ಎಂದು ಹಾವೇರಿ, ಗದಗ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.