ವಜ್ರ ಮಹೋತ್ಸವ । ಎಂ.ಸಿ.ರಮೇಶ ಅಭಿಪ್ರಾಯ । ಕಲೆಯಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸಿ, ಕಲಾ ಕಾಲೇಜಿಗೂ ದಾಖಲಿಸಲು ಸಲಹೆ । ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ
ವೈದ್ಯ, ಎಂಜಿನಿಯರ್ ಆಗುವ ಕನಸ್ಸನ್ನು ಮಾತ್ರವೇ ಕಟ್ಟಿಕೊಳ್ಳದೇ, ಪ್ರಸಿದ್ಧ ಕಲಾವಿದರಾಗುವತ್ತಲೂ ವಿದ್ಯಾರ್ಥಿ, ಯುವಜನರು ಗಮನಹರಿಸಬೇಕು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಯುನಿವರ್ಸಿಟಿ ಕಾಲೇಜ್ ಆಫ್ ವಿಜ್ಯುವಲ್ ಆರ್ಟ್ಸ್ ಅಲುಮ್ನಿ ಅಸೋಸಿಯೇಷನ್ ಕಾಲೇಜಿನ ವಜ್ರ ಮಹೋತ್ಸವ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಚಿಗುರು ಚಿತ್ತಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರೂ ವೈದ್ಯ, ಎಂಜಿನಿಯರ್ ಆಗಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲರೂ ಕಲಾವಿದರಾಗುವುದಕ್ಕೂ ಸಾಧ್ಯವಿಲ್ಲ. ಕಲಾವಿದ ಆಗುವುದೆಂದರೆ ಅದೊಂದು ಅದ್ಭುತ ಅವಕಾಶ. ಚಿಕ್ಕ ವಯಸ್ಸಿನಲ್ಲಿ ಚಂದವಾಗಿ ಚಿತ್ರ ಬರೆದಿರುವ ಇಲ್ಲಿರುವ ಅನೇಕ ಬಾಲಪ್ರತಿಭೆಗಳು ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಬಹುದು. ಹಾಗಾಗಿ, ಮಕ್ಕಳ ಆಸಕ್ತಿ ಜೊತೆಗೆ ತಂದೆ, ತಾಯಿಯ ಪೋತ್ಸಾಹವೂ ಅತಿ ಮುಖ್ಯ ಎಂದು ತಿಳಿಸಿದರು.
ಕಲಾ ಕಾಲೇಜಿನಲ್ಲಿ ಎಲ್ಲ ಸೌಲಭ್ಯಗಳೂ ಇವೆ. 12ನೇ ತರಗತಿ ನಂತರ 4 ವರ್ಷಗಳ ಕೋರ್ಸ್ ಮುಗಿಸಿದರೆ ಒಳ್ಳೆಯ ಭವಿಷ್ಯವೂ ಇದೆ. ಕಲಾ ಕಾಲೇಜಿನಲ್ಲಿ ಓದಿ, ದೇಶ, ವಿದೇಶಗಳಲ್ಲಿ ಹೆಸರು ಮಾಡಿ, ಉತ್ತಮ ಸ್ಥಾನಮಾನ, ಗೌರವಗಳನ್ನು ಗಳಿಸಿರುವ ಅನೇಕ ಸಾಧಕರು ಇದೇ ಕಾಲೇಜಿನಿಂದ ಹೊರಬಂದವರು. ವೈದ್ಯರು, ಎಂಜಿನಿಯರ್‌ಗಳಿಗೆ ಇರುವಂತೆ ಕಲಾವಿದರಿಗೂ ಉತ್ತಮ ಅವಕಾಶಗಳು ಇದ್ದೇ ಇವೆ ಎಂದು ರಮೇಶ ವಿವರಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಚಾರ್ಯ ಡಾ.ಜೈರಾಜ ಚಿಕ್ಕಪಾಟೀಲ, ಸಹಾಯಕ ಪ್ರಾಧ್ಯಾಪಕ ಡಾ.ಸತೀಶಕುಮಾರ ಪಿ. ವಲ್ಲೇಪುರೆ, ಶಿಲ್ಪಕಲಾ ಅಕಾಡೆಮಿ ಸದಸ್ಯ ವೈ.ಕುಮಾರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪಾಲಕರು ಇದ್ದರು.