ಬಸವ ಜಯಂತಿ । ಸರ್ವ ಶರಣ ಸಮ್ಮೇಳನ । ವಿಜಯ್‌ಕುಮಾರ್‌ಗೆ ಸನ್ಮಾನ
ಬಸವಣ್ಣನವರು ನಿರ್ನಾಮ ಮಾಡಿದ್ದು ಮೌಢ್ಯತೆಯನ್ನು, ಅಜ್ಞಾನವನ್ನು, ಕಂದಾಚಾರವನ್ನು, ಯಾವುದೇ ಸಮಾಜವನ್ನು ದಿಕ್ಕು ತಪ್ಪಿಸುತ್ತದೆಯೋ ಅದೆಲ್ಲವನ್ನು ಕೂಡ ನಿರ್ನಾಮ ಮಾಡಿದರು. ನಿರ್ಮಾಣ ಮಾಡಿದ್ದು, ಎಲ್ಲರೂ ಒಂದಾಗಿ ಬಾಳುವುದು. ಅಜ್ಞಾನವನ್ನು ಕಳೆದುಕೊಂಡು ಸುಜ್ಞಾನಿಗಳಾಗಬೇಕು ಎಂಬ ಅನೇಕ ವಿಚಾರಗಳನ್ನು ಬಿತ್ತಿದರು. ಆದರೆ ಇವತ್ತಿಗೂ ಕೂಡ ಆ ವಿಚಾರಗಳನ್ನು ಆಚಾರದಲ್ಲಿ ತರುವ ಗಟ್ಟಿತನ ಯಾರಿಗೂ ಇಲ್ಲ. ಅವರು ನುಡಿದಂತೆ ನಡೆದರು. ಅಲ್ಲದೆ ನಡೆದಂತೆ ನುಡಿದರು ಎಂದು ಸಾಣೇಹಳ್ಳಿ ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕಕ್ಕರಗೋಳ ಗ್ರಾಮದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತ್ಯುತ್ಸವ ಹಾಗೂ ಸರ್ವ ಶರಣ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ನಮ್ಮ ಜನರಿಗೆ ಗುಡಿ ಕಟ್ಟೋದರಲ್ಲಿ, ಎಡೆ ಹಿಡಿಯೋದರಲ್ಲಿ, ಫೋಟೋ ಹಾಕಿಸಿಕೊಳ್ಳುವುದರಲ್ಲಿ ಇರುವ ಖುಷಿ, ಬಸವ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಇಲ್ಲ ಎಂದರು.ಬಸವಣ್ಣನವರು ನುಡಿದಂತೆ ನಡೆದವರು, ನಡೆದಂತೆ ನುಡಿದವರು, ನಡೆ-ನುಡಿ ನಡುವೆಯ ಇರುವ ಅಂತರವನ್ನು ತೋರಿಸಿದವರು. ಆಗಿನ ಸಮಾಜದಲ್ಲಿ ಅಲ್ಪ ಕಾಲದಲ್ಲೇ ಅದ್ಭುತವಾದ ಬದಲಾವಣೆ ತರಲು ಸಾಧ್ಯವಾಯಿತು. ಇವತ್ತಿಗೂ ಕೂಡ ಬಸವಣ್ಣನವರು ಹೇಳಿದಂತಹ ತತ್ವಾದರ್ಶಗಳನ್ನು ಜನರು ಆಚರಣೆಯಲ್ಲಿ ತರುವುದರಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ತಿಳಿಸಿದರು.
ಒಂದು ಊರಲ್ಲಿ ಎಷ್ಟು ದೇವಸ್ಥಾನಗಳ ಇವೆ. ಆ ದೇವಸ್ಥಾನಗಳು ಏನಾದರೂ ನಿಮಗೆ ದುಡಿಯುವುದನ್ನು ಕಲಿಸಿವೆಯೇ?, ದುಶ್ಚಟಗಳನ್ನು ತಪ್ಪಿಸಿವೆಯೇ?, ಬಸವಣ್ಣನವರು ಅಂದೇ ಹೇಳಿದ್ದರು. ಶ್ರೀಮಂತರಲ್ಲ ದೊಡ್ಡ ದೊಡ್ಡ ದೇವಸ್ಥಾನ ಕಟ್ಟಿಸುತ್ತಾರೆ. ನಾನು ಬಡವ, ನಾನೆಲ್ಲಿಂದ ಕಟ್ಟಿಸಲಿ ಎಂದು. ಹಾಗಾದರೆ ಬಸವಣ್ಣನವರು ಬಡವರೇನು?, ಆದರೆ ಬಸವಣ್ಣನವರು ದೇವಸ್ಥಾನಗಳನ್ನು ಕಟ್ಟುವ ಬದಲು ವೈಚಾರಿಕ ಚಿಂತನೆಗಳನ್ನು ಜನರ ಹೃದಯಗಳಲ್ಲಿ ಕಟ್ಟಿದರು ಎಂದು ಅಭಿಪ್ರಾಯಪಟ್ಟರು.