ದರ ಕುಸಿತಕ್ಕೆ ಕಂಗಾಲಾದ ಈರುಳ್ಳಿ ಬೆಳೆದ ರೈತ

KannadaprabhaNewsNetwork | Published : Apr 21, 2025 12:57 AM

ಸಾರಾಂಶ

ಬಹುತೇಕ ಈರುಳ್ಳಿ ಬೆಳೆದ ರೈತರು ಭವಿಷ್ಯದಲ್ಲಿ ಉತ್ತಮ ಬೆಳೆ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ತಾವು ಬೆಳೆದ ಈರುಳ್ಳಿಯನ್ನು ತಮ್ಮ ಹೊಲಗಳಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಕೊಟ್ಟಿಗೆಗಳಲ್ಲಿ ಸಂಗ್ರಹಿಸುತ್ತಿದ್ದಾರೆ

ವಿ.ಎಂ. ನಾಗಭೂಷಣ ಸಂಡೂರು

ಹವಾಮಾನ ವೈಪರಿತ್ಯದಿಂದ ಒಂದೆಡೆ ಈರುಳ್ಳಿ ಬೆಳೆ ಇಳುವರಿ ಕುಂಠಿತ, ಮತ್ತೊಂದೆಡೆ ದರ ಕುಸಿತ, ಈರುಳ್ಳಿ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ.

ಸಂಡೂರು ಸೇರಿದಂತೆ ತಾಲೂಕಿನ ಭುಜಂಗನಗರ, ಕೃಷ್ಣಾನಗರ, ದೌಲತ್‌ಪುರ, ಲಕ್ಷ್ಮೀಪುರ, ತಾರಾನಗರ ಮುಂತಾದ ಕಡೆಗಳಲ್ಲಿ ಹಿಂಗಾರಿನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಈ ವರ್ಷದ ಹಿಂಗಾರಿನಲ್ಲಿ ತಾಲೂಕಿನಲ್ಲಿ ೧೭೦೦ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಸಂಡೂರು ಸುತ್ತಮುತ್ತ ಬಳ್ಳಾರಿ ರೆಡ್ ಎಂದು ಹೆಸರಾಗಿರುವ ಸ್ಥಳೀಯ ತಳಿಯ ಈರುಳ್ಳಿ ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಈರುಳ್ಳಿ ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿದ್ದರೂ ರುಚಿಗೆ ಹೆಸರಾಗಿದೆ.

ನವಂಬರ್ ಅಥವಾ ಡಿಸೆಂಬರ್‌ನಲ್ಲಿ ನಾಟಿ ಮಾಡಿ ಮಾರ್ಚ್-ಏಪ್ರಿಲ್ ನಲ್ಲಿ ಬೆಳೆ ಕಟಾವು ಮಾಡಲಾಗುತ್ತದೆ. ಈ ಬಾರಿ ಅಕ್ಟೋಬರ್, ನವಂಬರ್ ತಿಂಗಳಲ್ಲಿ ಮಳೆಯಾದ ಕಾರಣ ಈರುಳ್ಳಿ ನಾಟಿ ಕಾರ್ಯ ಸ್ವಲ್ಪ ತಡವಾಯಿತು. ಹವಾಮಾನದಲ್ಲಿನ ವೈಪರಿತ್ಯವೂ ಇಳುವರಿ ಕುಂಠಿತವಾಗಲು ಮತ್ತು ಈರುಳ್ಳಿ ಬೆಳೆಯ ವಿಸ್ತೀರ್ಣ ಕಡಿಮೆಯಾಗಲು ಕಾರಣ ಎಂದು ಈರುಳ್ಳಿ ಬೆಳೆಗಾರರ ಹೇಳುತ್ತಾರೆ.

ಕೊಟ್ಟಿಗೆ ಸೇರುತ್ತಿರುವ ಈರುಳ್ಳಿ:ಆರಂಭದಲ್ಲಿ ಕ್ವಿಂಟಲ್ ಈರುಳ್ಳಿ ಬೆಲೆ ₹೧೫೦೦-೨೦೦೦ ಇದ್ದದ್ದು ಇದೀಗ ₹ ೮೦೦-೧೦೦೦ಗೆ ಕುಸಿದಿದೆ. ಇದರಿಂದ ಬಹುತೇಕ ಈರುಳ್ಳಿ ಬೆಳೆದ ರೈತರು ಭವಿಷ್ಯದಲ್ಲಿ ಉತ್ತಮ ಬೆಳೆ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ತಾವು ಬೆಳೆದ ಈರುಳ್ಳಿಯನ್ನು ತಮ್ಮ ಹೊಲಗಳಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಕೊಟ್ಟಿಗೆಗಳಲ್ಲಿ ಸಂಗ್ರಹಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಯನ್ನು ಮಾರಾಟಗಾರರು ₹೨೦-೨೫ ರಂತೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಈ ಬೆಲೆ ರೈತರಿಗೆ ಸಿಗುತ್ತಿಲ್ಲ. ರೈತರು ಬೆಳೆದ ಈರುಳ್ಳಿ ಕ್ವಿಂಟಲ್‌ಗೆ ೮೦೦-೧೦೦೦ಕ್ಕೆ ಕೇಳುತ್ತಿರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಬಹುತೇಕ ಈರುಳ್ಳಿ ಬೆಳೆಗಾರರು ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಿದಾಗ ಮಾರಾಟ ಮಾಡಿದರಾಯಿತೆಂದು ತಾವು ಬೆಳೆದ ಈರುಳ್ಳಿಯನ್ನು ಕೊಟ್ಟಿಗೆಯಲ್ಲಿ ಸಂಗ್ರಹಿಸುತ್ತಿದ್ದಾರೆ. ಗ್ರಾಹಕರಿಗೂ ಹೆಚ್ಚಿನ ಹೊರೆಯಾಗದಂತೆ ರೈತರಿಗೂ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆತು ಲಾಭ ಕಾಣುವಂತಹ ಬೆಲೆ ನಿಗದಿಯಾಗಬೇಕಿದೆ.

ಈರುಳ್ಳಿ ಸೀಜನ್ ಆರಂಭದ ದಿನಗಳಲ್ಲಿ ಕ್ವಿಂಟಲ್ ಈರುಳ್ಳಿ ಬೆಲೆ ₹೨೦೦೦ವರೆಗೆ ಇದ್ದದ್ದು ಈಗ ೮೦೦-೧೦೦೦ಕ್ಕೆ ಇಳಿದಿದೆ. ಈ ಬೆಲೆಗೆ ಮಾರಾಟ ಮಾಡಿದರೆ ನಾವು ಹಾಕಿದ ಖರ್ಚು ಕೈಗೆ ಬರುವುದಿಲ್ಲ. ಬೆಲೆ ಕುಸಿತವಾಗುತ್ತಿರುವುದರಿಂದ ಖರೀದಿದಾರರು ಇತ್ತೀಚೆಗೆ ಖರೀದಿಗೂ ಬರುತ್ತಿಲ್ಲ. ನಾನು ೪ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೇನೆ. ದರ ಕುಸಿತ ಕಂಡಿರುವುದರಿಂದ ಕೊಟ್ಟಿಗೆಯಲ್ಲಿ ಸಂಗ್ರಹಿಸಿದ್ದೇವೆ ಎಂದು ಕೃಷ್ಣಾನಗರದ ರೈತ ಶಿವಕುಮಾರ್ ಹೇಳಿದರು.

ಬೆಲೆ ಕುಸಿತದಿಂದ ಈರುಳ್ಳಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ರೈತ ಸಂಘದ ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ಎಂ.ಎಲ್.ಕೆ.ನಾಯ್ಡು ಹೇಳಿದ್ದಾರೆ.

Share this article