ಮಳೆ ಹೆಚ್ಚಳದಿಂದ ಈರುಳ್ಳಿ ಹಾನಿ ಪರಿಣಾಮ : ಚಿಲ್ಲರೆ ಮಾರುಕಟ್ಟೆಯಲ್ಲಿ ದರ 60ಕ್ಕೆ, ಬೆಳ್ಳುಳ್ಳಿ ಕೇಜಿಗೆ ₹400

KannadaprabhaNewsNetwork |  
Published : Aug 29, 2024, 02:06 AM ISTUpdated : Aug 29, 2024, 05:32 AM IST
ಈರುಳ್ಳಿ | Kannada Prabha

ಸಾರಾಂಶ

ಈರುಳ್ಳಿ ಬೆಳೆ ಮಳೆಗೆ ಸಿಲುಕಿ ಸಮಸ್ಯೆಗೆ ಸಿಲುಕಿದ ಬೆನ್ನಲ್ಲೇ ನಗರದಲ್ಲಿ ಗ್ರಾಹಕರಿಗೆ ಈರುಳ್ಳಿ ಕಣ್ಣೀರು ತರಿಸುತ್ತಿದೆ.

 ಬೆಂಗಳೂರು :  ಮಳೆ ಹೆಚ್ಚಳದಿಂದ ಈರುಳ್ಳಿ ಹಾನಿಯಾದ ಪರಿಣಾಮ ಬೆಲೆ ಹೆಚ್ಚಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ₹60 ಏರಿಕೆಯಾಗಿದೆ. ರಾಜ್ಯದಲ್ಲಿ ಬೆಳೆ ಕೊರತೆ ಕಾರಣದಿಂದ ಮಹಾರಾಷ್ಟ್ರದಿಂದಲೇ ಹೆಚ್ಚಿನ ಪ್ರಮಾಣದ ಈರುಳ್ಳಿ ಬರುತ್ತಿದೆ.

ರಾಜ್ಯದಲ್ಲಿ ಈರುಳ್ಳಿ ಉತ್ಪಾದನೆಗೆ ಇನ್ನೂ ಒಂದು ತಿಂಗಳು ಬೇಕು. ಈ ನಡುವೆ ಪುನಃ ಮಳೆ ಹೆಚ್ಚಾದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತಾಗುತ್ತದೆ. ಒಂದು ವೇಳೆ ಹೀಗಾದರೆ ಬೆಲೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಈರುಳ್ಳಿ ವರ್ತಕರ ಸಂಘ ತಿಳಿಸಿದೆ.

ಇಲ್ಲಿನ ಯಶವಂತಪುರ ಹಾಗೂ ದಾಸನಪುರ ಎಪಿಎಂಸಿಗೆ ಬುಧವಾರ 127 ಲಾರಿಗಳಲ್ಲಿ 38,415 ಚೀಲ ಈರುಳ್ಳಿ ಆವಕವಾಗಿದೆ. ಇದರಲ್ಲಿ ರಾಜ್ಯದ ಹತ್ತಿಪ್ಪತ್ತು ಲಾರಿಗಳು ಮಾತ್ರ ಸೇರಿವೆ. ಉಳಿದವೆಲ್ಲ ಪೂಣಾದಿಂದ ಬಂದಿವೆ. ಸಗಟು ದರ ಕ್ವಿಂಟಲ್‌ಗೆ ಕನಿಷ್ಠ ₹2 ಸಾವಿರ ಗರಿಷ್ಠ ₹4500 ಇತ್ತು. ಇದು ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ ₹55 - ₹60 ವರೆಗೆ ಮಾರಾಟವಾಗಿದೆ.

ಸದ್ಯ ಚಿತ್ರದುರ್ಗ, ಚಳ್ಳಕೆರೆ ಭಾಗದಿಂದ ಈರುಳ್ಳಿ ರಾಜ್ಯದ ಮಾರುಕಟ್ಟೆಗೆ ಬರುತ್ತಿದೆ. ಉತ್ತರ ಕರ್ನಾಟಕ ಭಾಗದ ಈರುಳ್ಳಿ ಬರಲು ಒಂದು ತಿಂಗಳು ಹಿಡಿಯುತ್ತದೆ. ಈಗ ಬರುತ್ತಿರುವ ಬೆಳೆ ಕೂಡ ಅಷ್ಟೊಂದು ಗುಣಮಟ್ಟದಿಂದ ಕೂಡಿಲ್ಲ. ಪೂನಾ ಈರುಳ್ಳಿಗೆ ಹೆಚ್ಚಿನ ಬೆಲೆಯಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ಇರುವ ಕಾರಣಕ್ಕೆ ಅಲ್ಲಿನ ಉತ್ಪನ್ನಕ್ಕೆ ಹೆಚ್ಚಿನ ದರವಿದೆ ಎಂದು ಈರುಳ್ಳಿ ವರ್ತಕರ ಸಂಘದ ಬಿ.ರವಿಶಂಕರ್‌ ತಿಳಿಸಿದರು.

ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಳದಿಂದ ಈರುಳ್ಳಿಗೆ ಕೊಳೆ ರೋಗ ಆವರಿಸಿದೆ. ಹಿಂದಿನ ವರ್ಷಕ್ಕಿಂತಲೂ ಕಡಿಮೆ ಬೆಳೆ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ಹೇಳಿದರು.

ಬೆಳ್ಳುಳ್ಳಿ ಕೇಜಿಗೆ ₹400

ಇನ್ನು, ಮಳೆ ಕಾರಣಕ್ಕೆ ಬೆಳ್ಳುಳ್ಳಿ ದರವೂ ಪುನಃ ಗಗನಕ್ಕೇರಿದೆ. ಬುಧವಾರ ಮಾರುಕಟ್ಟೆಯಲ್ಲಿ ಕೇಜಿಗೆ ₹400 ದರವಿತ್ತು.

ಕಳೆದ ಡಿಸೆಂಬರ್‌, ಜನವರಿ ವೇಳೆಗೆ ಬೆಳ್ಳುಳ್ಳಿ ಕೆಜಿಗೆ ದಾಖಲೆಯ ₹500ವರೆಗೆ ಏರಿಕೆಯಾಗಿ ಬಳಿಕ ₹280, ₹250ರವರೆಗೆ ಇಳಿಕೆಯಾಗಿತ್ತು. ಕರ್ನಾಟಕದಲ್ಲಿ ಬೆಳ್ಳುಳ್ಳಿ ಬೆಳೆ ಅತ್ಯಲ್ಪ. ರಾಜ್ಯಕ್ಕೆ ಹೆಚ್ಚಾಗಿ ಪೂರೈಸುವ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮಳೆ ಹೆಚ್ಚಾಗಿ ಬೆಳ್ಳುಳ್ಳಿ ಉತ್ಪಾದನೆ ಕುಸಿತವಾಗಿದೆ. ಹೀಗಾಗಿ ಮಾರುಕಟ್ಟೆಗೆ ಉತ್ಪನ್ನ ಕೊರತೆಯಾಗಿದೆ.

ಇದು ಮತ್ತೆ ಬೆಳ್ಳುಳ್ಳಿ ಬೆಲೆಯೇರಿಕೆಗೆ ಕಾರಣವಾಗಿದೆ. ಹಬ್ಬದ ಸೀಸನ್‌, ಮದುವೆ ಮತ್ತಿತರ ಕಾರ್ಯಕ್ರಮಗಳು ಹೆಚ್ಚಾಗಲಿರುವ ಕಾರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಹೆಚ್ಚಾಗಬಹುದು. ಬೆಳ್ಳುಳ್ಳಿ ಪೂರೈಕೆ ರಾಜ್ಯದ ವ್ಯಾಪಾರಿಗಳ ಬಳಿ ದಾಸ್ತಾನು ಕಡಿಮೆ ಇದೆ, ಅಲ್ಲಿನ ರೈತರು ಇನ್ನಷ್ಟು ಬೆಲೆ ಹೆಚ್ಚಿದ ಬಳಿಕ ತಮ್ಮ ದಾಸ್ತಾನನ್ನು ಮಾರುಕಟ್ಟೆಗೆ ಬಿಡುವ ಸಾಧ್ಯತೆಯಿದೆ ಹೀಗಾಗಿ ಕೇಜಿಗೆ ₹450 ದಾಟುವ ಸಾಧ್ಯತೆಯಿದೆ ಎಂದು ವರ್ತಕರು ಹೇಳಿದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ