- ಶೀಘ್ರ ನಷ್ಟ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ರೈತರ ಆಗ್ರಹ
- - -ಕನ್ನಡಪ್ರಭ ವಾರ್ತೆ ಹರಿಹರ
ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ, ಬೆಳ್ಳುಳ್ಳಿ ಬೆಳೆಗಳು ಕೊಳೆತು ಹೋಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.ತಾಲೂಕಿನ ಎರೆಹೊಸಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ 250ರಿಂದ 300 ಎಕರೆ ಪ್ರದೇಶದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಳೆಯಲಾಗಿದೆ. ಬೆಳ್ಳುಳ್ಳಿ ಬಹುತೇಕ ಕೀಳುವ ಹಂತಕ್ಕೆ ಬಂದಿದೆ. ಈರುಳ್ಳಿ ಸಹ ಈಗಾಗಲೇ ಗಡ್ಡೆ ಕಟ್ಟಿವೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ₹100 ರಿಂದ ₹150 ದರವಿದೆ. ಉತ್ತಮ ದರಕ್ಕೆ ಬೆಳ್ಳುಳ್ಳಿ ಮಾರಾಟ ಮಾಡಿ ಲಕ್ಷಾಂತರ ಹಣ ಗಳಿಸುವ ಕನಸಿನಲ್ಲಿದ್ದ ರೈತರಿಗೆ ನಿರಂತರ ಮಳೆ ಈಗ ಕಣ್ಣೀರು ತರಿಸಿದೆ.
ಎರೆಹೊಸಳ್ಳಿ ರೈತ ಅಶೋಕ ರೆಡ್ಡಿ ಮುಂತಾದವರು ತಮ್ಮ 15, 20 ಎಕರೆ ಹೊಲದಲ್ಲಿ ಬೆಳೆದಿದ್ದ ಬೆಳ್ಳುಳ್ಳಿ ಬೆಳೆ ಸಂಪೂರ್ಣ ಹಾಳಾಗಿದೆ. ಬೆಳ್ಳುಳ್ಳಿ ಬೆಳೆ ಬೆಳೆಯಲು ಪ್ರತಿ ಎಕರೆಗೆ ಹೊಲ ಹದ ಮಾಡಲು, ಬಿತ್ತನೆಬೀಜ, ಗೊಬ್ಬರ, ಕಳೆ, ಕೆಲಸಗಾರರ ಕೂಲಿ ಸೇರಿದಂತೆ ಎಕರೆಗೆ ₹30ರಿಂದ ₹40 ಸಾವಿರ ಖರ್ಚಾಗಿದೆ. 15ರಿಂದ 20 ಎಕರೆಗೆ ಸುಮಾರು ₹5ರಿಂದ ₹6 ಲಕ್ಷ ಖರ್ಚು ಹಣ ಮಾಡಲಾಗಿದೆ. ಈಗ ಮಳೆಯಿಂದಾಗಿ ಎಲ್ಲವೂ ನಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.ಈರುಳ್ಳಿಯೂ ಹಾಳು:
ರೈತ ಹನುಮಂತಪ್ಪ ಮಾತನಾಡಿ, ಈಗಾಗಲೇ ಈರುಳ್ಳಿ ಬೆಳೆ ಸಹ ಗಡ್ಡೆ ಕಟ್ಟಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಈರುಳ್ಳಿ ಫಸಲು ಕೈಗೆ ಬರುತಿತ್ತು, ನಿರಂತರ ಮಳೆ ಸುರಿದ ಕಾರಣ ಈಗಾಗಲೇ ಈರುಳ್ಳಿ ಹೊಲದಲ್ಲೇ ಕೊಳೆಯುತ್ತಿದೆ. ಸಂಪೂರ್ಣ ಬೆಳೆಹಾನಿ ಸಂಭವಿಸಲಿದೆ. ಬೆಳ್ಳುಳ್ಳಿ-ಈರುಳ್ಳಿ ಬೆಳೆಗಳ ಬೆಳೆದು ರೈತರು ಕಣ್ಣಿರು ಹಾಕುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನೊಂದ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ನಷ್ಟ ಪರಿಶೀಲಿಸಿ, ಸೂಕ್ತ ಪರಿಹಾರರ ನೀಡಿ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.- - -
-20ಎಚ್‌ಆರ್‌ಆರ್‌೦3:ಹರಿಹರ ತಾಲೂಕಿನ ಎರೆ ಹೊಸಳ್ಳಿಯಲ್ಲಿ ಬೆಳ್ಳುಳ್ಳಿ ಬೆಳೆ ಮಳೆನೀರಿಗೆ ಕೊಳೆತಿರುವುದನ್ನು ರೈತರು ಪ್ರದರ್ಶಿಸಿದರು.