ಕಿಮ್ಸ್‌ನಲ್ಲಿ ಶೀಘ್ರವೇ ಆನ್‌ಲೈನ್‌ ಓಪಿಡಿ ಪ್ರಾರಂಭ

KannadaprabhaNewsNetwork | Published : Nov 24, 2023 1:30 AM

ಸಾರಾಂಶ

ಇನ್ನು ಮುಂದೆ ನೀವು ಮನೆಯಲ್ಲಿದ್ದುಕೊಂಡೇ ಆನ್‌ಲೈನ್‌ ಮೂಲಕ ಕಿಮ್ಸ್‌ನ ಓಪಿಡಿಯ ನೋಂದಣಿ ಪಡೆದುಕೊಳ್ಳಬಹುದು. ಬೆಂಗಳೂರಿನ ನಿಮ್ಯಾನ್ಸ್‌ ಹೊರತುಪಡಿಸಿದರೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಈ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇನ್ನು ಮುಂದೆ ನೀವು ಮನೆಯಲ್ಲಿದ್ದುಕೊಂಡೇ ಆನ್‌ಲೈನ್‌ ಮೂಲಕ ಕಿಮ್ಸ್‌ನ ಓಪಿಡಿಯ ನೋಂದಣಿ ಪಡೆದುಕೊಳ್ಳಬಹುದು. ಬೆಂಗಳೂರಿನ ನಿಮ್ಯಾನ್ಸ್‌ ಹೊರತುಪಡಿಸಿದರೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಈ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಉತ್ತರ ಕರ್ನಾಟಕ ಭಾಗದಲ್ಲಿಯೇ ಪ್ರಮುಖ ಆಸ್ಪತ್ರೆಯಾದ ಹುಬ್ಬಳ್ಳಿಯ ಕಿಮ್ಸ್‌(ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ)ನಲ್ಲಿ ಕೆಲವೇ ದಿನಗಳಲ್ಲಿ ಆನ್‌ಲೈನ್‌ ಓಪಿಡಿ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ.

ಕಿಮ್ಸ್‌ ಜನದಟ್ಟಣೆಯಿಂದು ಕೂಡಿರುವ ಆಸ್ಪತ್ರೆ. ಇಲ್ಲಿಗೆ ಅಕ್ಕಪಕ್ಕದ ಜಿಲ್ಲೆಗಳಾದ ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಉತ್ತರಕನ್ನಡ ಸೇರಿದಂತೆ ಹಲವು ಜಿಲ್ಲೆಗಳಿಂದ ನಿತ್ಯವೂ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಇದರಿಂದಾಗಿ ನಿತ್ಯವೂ ಬೆಳಗ್ಗೆಯಿಂದ ಸಂಜೆಯ ವರೆಗೂ ಹೊರರೋಗಿಗಳ ನೋಂದಣಿ ಕೌಂಟರ್‌ಗಳು ತುಂಬಿ ಹೋಗಿರುತ್ತವೆ.

ಕಾಯುವಿಕೆಗೆ ಮುಕ್ತಿ:

ಕಿಮ್ಸ್‌ಗೆ ನಿತ್ಯವೂ ಹಲವು ಜಿಲ್ಲೆಗಳಿಂದ 2500ಕ್ಕೂ ಅಧಿಕ ಹೊರರೋಗಿಗಳು ಆಸ್ಪತ್ರೆಗೆ ಭೇಟಿನೀಡಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಓಪಿಡಿ ವಿಭಾಗದಲ್ಲಿ 18 ಕೌಂಟರ್‌ಗಳನ್ನು ತೆರೆಯಲಾಗಿದೆ. ಆದರೂ ಜನದಟ್ಟಣೆ ನಿಯಂತ್ರಣ ಕಡಿಮೆಯಾಗಿಲ್ಲ. ಯಾವಾಗ ಹೋದರೂ ಕೌಂಟರ್‌ಗಳು ಜನರಿಂದ ತುಂಬಿ ಹೋಗಿರುತ್ತವೆ. ಇದನ್ನು ಗಮನಿಸಿ ಈಗ ಕಿಮ್ಸ್‌ನಲ್ಲಿ ಆನ್‌ಲೈನ್‌ ಓಪಿಡಿ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಾಯೋಗಿಕವಾಗಿ ಚಾಲನೆ:

ಕಳೆದ ಒಂದು ತಿಂಗಳಿನಿಂದ ಆನ್‌ಲೈನ್‌ ಓಪಿಡಿ ಪ್ರಾರಂಭಿಸಲಾಗಿದೆ. ಕಿಮ್ಸ್‌ನ 10ಕ್ಕೂ ಅಧಿಕ ಸಿಬ್ಬಂದಿಗಳಿಂದ ಆನ್‌ಲೈನ್‌ ಓಪಿಡಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಲಾಗಿದ್ದು, ನೋಂದಣಿಯಿಂದ ಹಿಡಿದು ಹಣ ಪಾವತಿಯಾಗುವ ಎಲ್ಲ ವ್ಯವಸ್ಥೆಯ ಕುರಿತು ಈಗಾಗಲೇ ಹಲವು ಬಾರಿ ಪರಿಶೀಲಿಸಿ ಚಾಲನಾ ಹಂತಕ್ಕೆ ತರಲಾಗಿದೆ. ಇನ್ನು ಒಂದು ವಾರದೊಳಗೆ ಅಧಿಕೃತವಾಗಿ ನೋಂದಣಿಗೆ ಚಾಲನೆ ನೀಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ವಿಶೇಷ ಜಾಗೃತಿಗೆ ಕ್ರಮ:

ಕಿಮ್ಸ್‌ಗೆ ಚಿಕಿತ್ಸೆಗಾಗಿ ಬರುವ ಹೊರರೋಗಿಗಳ ಅನುಕೂಲಕ್ಕಾಗಿ ಆರಂಭಿಸಲು ಉದ್ದೇಶಿಸಿರುವ ವೆಬ್‌ಸೈಟ್‌ನ ಸಮಗ್ರ ಮಾಹಿತಿ ಕುರಿತು ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ಹು-ಧಾ ಒನ್‌ ಸೆಂಟರ್‌, ನಾಡಕಚೇರಿ, ಸರ್ಕಾರಿ ಸಂಸ್ಥೆಗಳಲ್ಲಿ ವೆಬ್‌ಸೈಟ್ ಕಾರ್ಯನಿರ್ವಹಣೆ, ಹೇಗೆ ಆನ್‌ಲೈನ್‌ ನೋಂದಣಿ ಮಾಡಿಕೊಳ್ಳುವುದು ಎಂಬ ಸಮಗ್ರ ಮಾಹಿತಿಯುಳ್ಳ ಫಲಕ ಅಳವಡಿಸಲು, ಸಾರ್ವಜನಿಕ ಪ್ರಕಟಣೆ ಹೊರಡಿಸಲು ಚಿಂತನೆ ನಡೆಸಲಾಗಿದೆ. ಆನ್‌ಲೈನ್‌ ನೋಂದಣಿ ಆರಂಭವಾದ ಮೇಲೆ ಹು-ಧಾ ಒನ್‌ ಸೇವಾಕೇಂದ್ರ, ನಾಡಕಚೇರಿಗಳಿಗೆ ಹೋಗಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ನೋಂದಣಿ ಮಾಡಿಕೊಳ್ಳುವುದು ಹೇಗೆ?:

ಈಗಾಗಲೇ ಇದಕ್ಕಾಗಿಯೇ ಪ್ರತ್ಯೇಕ ವೆಬ್‌ಸೈಟ್‌ ತಯಾರಿಸಲಾಗಿದ್ದು, https://ors.gov.in/orsportal ಪೋರ್ಟಲ್‌ ಓಪನ್‌ ಮಾಡಬೇಕು. ಅಲ್ಲಿ ಯಾವ ಆಸ್ಪತ್ರೆಯಲ್ಲಿ ನೋಂದಾಯಿಸಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ವೈದ್ಯರ ಸಲಹೆಗಾಗಿ ಆಯ್ಕೆ ಮಾಡಬೇಕು. ನೇಮಕಾತಿಗಾಗಿ ಆಯ್ಕೆ, ಇಲಾಖೆಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಮಗೆ ಯಾವ ದಿನದಂದು ಚಿಕಿತ್ಸೆಗೆ ಬರಲು ಆಗುವುದೋ ಆ ದಿನ ಹಾಗೂ ನಿರ್ದಿಷ್ಟ ವೇಳೆಯನ್ನು ಆಯ್ಕೆ ಮಾಡಿಕೊಂಡು ರೋಗಿಯ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತರ ಯುಪಿಐ, ಡೆಬಿಟ್ ಕಾರ್ಡ್, ಕ್ರೆಡಿಟ್‌ ಕಾರ್ಡ್‌ ಯಾವುದಾದರೂ ಒಂದರ ಮೂಲಕ ₹ 10 ಸಂದಾಯ ಮಾಡಿದ ಮೇಲೆ ನಿಮ್ಮ ಮೊಬೈಲ್‌ಗೆ ನೋಂದಣಿ ಸಂಖ್ಯೆ ಬರಲಿದೆ. ಆಸ್ಪತ್ರೆಗೆ ಹೋದ ವೇಳೆ ಕೌಂಟರ್‌ನಲ್ಲಿ ಈ ನೋಂದಣಿ ಸಂಖ್ಯೆ ತೋರಿಸಿದರೆ ಸಾಕು ನಿಮಗೆ ನೋಂದಣಿ ಚೀಟಿ ದೊರೆಯಲಿದೆ. ಇನ್ನು ಕ್ಯೂಆರ್‌ ಕೋಡ್‌ ಮೂಲಕವೂ ಸ್ಕ್ಯಾನ್‌ ಮಾಡಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಬೆಂಗಳೂರಿನ ನಿಮ್ಯಾನ್ಸ್‌ ಹೊರತುಪಡಿಸಿದರೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ಹೊರರೋಗಿಗಳಿಗಾಗಿ ಆನ್‌ಲೈನ್‌ ನೋಂದಣಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

ಹೊರರೋಗಿಗಳಿಗೆ ಆನ್‌ಲೈನ್‌ ನೋಂದಣಿ ವ್ಯವಸ್ಥೆ ಮಾಡಿರುವುದು ಅಭಿನಂದನಾರ್ಹ. ಈಗಾಗಲೇ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿರುವುದು ತಿಳಿದುಬಂದಿದೆ. ಆದಷ್ಟು ಬೇಗನೆ ಈ ವ್ಯವಸ್ಥೆಗೆ ಜಾರಿಯಾಗಲಿದೆ ಎನ್ನುತ್ತಾರೆ ಚಿಕಿತ್ಸೆಗಾಗಿ ಕೊಪ್ಪಳದಿಂದ ಆಗಮಿಸಿದ್ದ ಯುವಕ ಅಭಿನಂದನ್‌.

Share this article