ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ ಕೆಕೆಆರ್‌ಟಿಸಿಗೆ ಇನ್ನೂ ಬಾರದ ಆನ್ಲೈನ್ ಪೇಮೆಂಟ್‌!

KannadaprabhaNewsNetwork | Updated : Feb 07 2025, 08:33 AM IST

ಸಾರಾಂಶ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ ಕೆಕೆಆರ್‌ಟಿಸಿಯಲ್ಲಿ ಇನ್ನೂ ಕ್ಯೂಆರ್‌ ಕೋಡ್ ಸ್ಕ್ಯಾನಿಂಗ್ (ಆನ್ಲೈನ್ ಪೇಮೆಂಟ್ ಮೋಡ್) ಜಾರಿಗೆ ಬಾರದೆ ಇರುವುದರಿಂದ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಜನರು ಇನ್ನೂ ಪರದಾಡುತ್ತಲೇ ಇದ್ದಾರೆ.

ಶಶಿಕಾಂತ ಮೆಂಡೆಗಾರ

 ವಿಜಯಪುರ : ಪ್ರಧಾನಿ ಮೋದಿಯವರ ಆಶಯದಂತೆ ಹೆಚ್ಚಿನ ಒತ್ತುನೀಡಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳು ಸೇರಿ ಎಲ್ಲ ವಲಯಗಳಲ್ಲೂ ಸಹ ಹಣಕಾಸಿನ ವ್ಯವಹಾರಕ್ಕಾಗಿ ಯುಪಿಐ ಆ್ಯಪ್‌, ಕ್ಯೂಆರ್‌ ಕೋಡ್, ಡಿಜಿಟಲೀಕರಣ ವ್ಯವಸ್ಥೆ ಜಾರಿ ಮಾಡಲಾಗಿದೆ. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ ಕೆಕೆಆರ್‌ಟಿಸಿಯಲ್ಲಿ ಇನ್ನೂ ಕ್ಯೂಆರ್‌ ಕೋಡ್ ಸ್ಕ್ಯಾನಿಂಗ್ (ಆನ್ಲೈನ್ ಪೇಮೆಂಟ್ ಮೋಡ್) ಜಾರಿಗೆ ಬಾರದೆ ಇರುವುದರಿಂದ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಜನರು ಇನ್ನೂ ಪರದಾಡುತ್ತಲೇ ಇದ್ದಾರೆ.

ಚಿಲ್ಲರೆ ಇಲ್ಲದೆ ಪರದಾಟ:

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಚಿಲ್ಲರೆಯದ್ದೇ ದೊಡ್ಡ ತಲೆಬಿಸಿಯಾಗಿದೆ. ಡಿಜಿಟಲ್ ಯುಗ ಆರಂಭವಾಗಿದ್ದರಿಂದ ಬಹುತೇಕರು ಜೇಬಿನಲ್ಲಿ ಕಾಸು ಇಡುವುದನ್ನೇ ಮರೆತಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಚಿಲ್ಲರೆ ಫೈಟ್‌ಗಳು ಮುಂದುವರೆದಿವೆ. ಈ ಜಿಲ್ಲೆಗಳಿಂದ ಹೊರಡುವ ಅಂತರ್‌ ರಾಜ್ಯ, ಅಂತರ್‌ ಜಿಲ್ಲಾ, ಗ್ರಾಮೀಣ ಹಾಗೂ ನಗರ ಸಾರಿಗೆ ಬಸ್‌ಗಳಲ್ಲಿ ಕ್ಯೂಆರ್‌ ಕೋಡ್ ಜಾರಿಗೆ ಬಂದಿಲ್ಲ. ಹೀಗಾಗಿ ಪ್ರಯಾಣಿಸುವ ಜನತೆ ಕಂಪಲ್‌ಸಿರಿ ಬಿಡಿಗಾಸು ಇಟ್ಟುಕೊಳ್ಳಬೇಕಿದೆ. ಚಿಲ್ಲರೆ ಇಲ್ಲದ್ದರಿಂದ ಟಿಕೆಟ್ ಪಡೆಯಲು ನಿರ್ವಾಹಕರೊಂದಿಗೆ ಜಟಾಪಟಿ ನಡೆಸುವ ಘಟನೆಗಳು ಇನ್ನೂ ನಡೆಯುತ್ತಲೇ ಇವೆ.

ಎಲ್ಲೆಲ್ಲಿದೆ, ಎಲ್ಲಿಲ್ಲ ಯುಪಿಐ, ಡಿಜಿಟಲ್ ವ್ಯವಸ್ಥೆ:

ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲುಕೆಆರ್‌ಟಿಸಿ ಈ ಮೂರು ವಿಭಾಗಗಳಲ್ಲಿನ ಎಲ್ಲ ಜಿಲ್ಲೆಗಳಲ್ಲೂ ಡಿಜಿಟಲೀಕರಣ ಪೇಮೆಂಟ್ ಮೋಡ್ ಜಾರಿಯಾಗಿದೆ. ಆದರೆ ಕೆಕೆಆರ್‌ಟಿಸಿ ವ್ಯಾಪ್ತಿಗೆ ಒಳಪಡುವ ವಿಜಯಪುರ, ಬೀದರ್‌, ಕಲಬುರಗಿ ವಿಭಾಗ-1, ಕಲಬುರಗಿ ವಿಭಾಗ-2, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಈ 7 ಜಿಲ್ಲೆಗಳಿಗೆ ಡಿಜಿಟಲ್ ವ್ಯವಸ್ಥೆ ಜಾರಿಯಾಗಬೇಕಿದೆ‌. ಈ ಜಿಲ್ಲೆಗಳಲ್ಲೂ ಸಹ ನಿರ್ವಾಹಕರಿಗೆ ಡಿಜಿಟಲ್ ಯಂತ್ರ ನೀಡಿ ಪೇಮೆಂಟ್ ಪಡೆಯುವ ಸೌಲಭ್ಯ ನೀಡಿದಾಗ ಚಿಲ್ಲರೆ ಸಮಸ್ಯೆಗೆ ಇತಿಶ್ರೀ ಹಾಡಬಹುದಾಗಿದೆ.

ಸಾರಿಗೆ ಸಚಿವರೇ ಗಮನಿಸಿ:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ವಿಭಾಗಗಳಲ್ಲಿ ಮೂರುಕಡೆ ಈ ವ್ಯವಸ್ಥೆ ಜಾರಿಯಾಗಿ ಈಗಾಗಲೇ ಒಂದು ವರ್ಷವಾಯಿತು. ಆದರೆ ಈ ಭಾಗದಲ್ಲಿನ ಬಸ್ಸುಗಳಲ್ಲಿ ಮಾತ್ರ ಇನ್ನೂ ಅದೇ ಹಳೆಯ ಚಿಲ್ಲರೆ ಕೊಡಿ ಎಂಬ ಕಂಠಧ್ವನಿಯಿಂದ ಕಂಡಕ್ಟರ್‌ ಕೇಳುವ ಸ್ಥಿತಿ ಇದೆ. ಸಾರಿಗೆ ಸಚಿವರೇ ತಾವು ಇತ್ತಕಡೆ ಗಮನಿಸಿ, ಈ ಸಮಸ್ಯೆಗೆ ಬೇಗನೆ ಪರಿಹಾರ ಒದಗಿಸಿ ಎಂದು ಈ ಭಾಗದ ಜನರು ಕೇಳಿಕೊಳ್ಳುತ್ತಿದ್ದಾರೆ.

ವಿಜಯಪುರದಲ್ಲಿದೆ ಓನ್ಲಿ ಕ್ಯಾಶ್ ಪೇ ಬೋರ್ಡ್:

ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾಲಿಟ್ಟರೆ ಸಾಕು, ಬುಕಿಂಗ್ ಕೌಂಟರ್ ಬಳಿ ನೋ ಸ್ಕ್ರ್ಯಾಚ್‌ಕಾರ್ಡ್‌, ನೋ ಫೋನ್‌ಪೇ, ನೋ ಎಟಿಎಂ ಕಾರ್ಡ್‌ ಸ್ವೈಪ್, ಓನ್ಲಿ ಕ್ಯಾಶ್ ಪೇ ಎಂದು ಬೋರ್ಡ್‌ ಹಾಕಲಾಗಿದೆ. ಜೇಬಿನಲ್ಲಿ ಹಣವಿಲ್ಲದೆ ಮುಂಗಡ ಟಿಕೆಟ್ ಬುಕ್ ಮಾಡಲು ಬಂದ ಅದೆಷ್ಟೋ ಜನರು ಕೇವಲ ನಗದು ವ್ಯವಹಾರ ಮಾತ್ರ ಎಂಬ ಫಲಕ ಕಂಡು ಶಾಕ್ ಆಗಿದ್ದಾರೆ. ಬಸ್‌ಗಳಲ್ಲೂ ನಿರ್ವಾಹಕರ ಬಳಿ ವ್ಯವಸ್ಥೆ ಇಲ್ಲ. ಕೊನೆಪಕ್ಷ ಮುಂಗಡ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗಾದರೂ ಈ ಸೌಲಭ್ಯ ಒದಗಿಸಬೇಕಿತ್ತು ಎಂದು ಜನರು ಗೊಣಗುತ್ತಿದ್ಧಾರೆ.

ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಕ್ಯೂಆರ್‌ ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆ ಜಾರಿಗೆ ಬಂದಿದೆ. ಅಲ್ಲಿ ಪ್ರಯಾಣಿಸುವಾಗ ಟಿಕೆಟ್ ತೆಗೆದುಕೊಳ್ಳುವ ವೇಳೆ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡಲು ಅವಕಾಶ ಇರುವುದರಿಂದ ಚಿಲ್ಲರೆ ಸಮಸ್ಯೆ ಬರುವುದಿಲ್ಲ. ಆದರೆ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಇನ್ನೂ ಡಿಜಿಟಲ್ ವ್ಯವಸ್ಥೆ ಬಾರದಿರುವುದರಿಂದ ಟಿಕೆಟ್ ಪಡೆಯಲು ಚಿಲ್ಲರೆ ಇಲ್ಲದೆ ಪರದಾಡುವ ಸ್ಥಿತಿ ಮುಂದುವರೆದಿದೆ. ಆದಷ್ಟು ಬೇಗ ಸಾರಿಗೆ ಸಚಿವರು ಕ್ರಮ ಕೈಗೊಂಡು ಡಿಜಿಟಲ್ ವ್ಯವಸ್ಥೆ ಜಾರಿ ಮಾಡಬೇಕಿದೆ.

ಸುನೀಲ.ಎಸ್‌.ಜಿ, ಪ್ರಯಾಣಿಕ.

ಇಲಾಖೆಯಿಂದ ಈಗಾಗಲೇ ಮೂರು ವಿಭಾಗಗಳಲ್ಲಿ ಡಿಜಿಟಲೀಕರಣ ವ್ಯವಸ್ಥೆ ಮಾಡಲಾಗಿದೆ. ಕೆಕೆಆರ್‌ಟಿಸಿ ಯಲ್ಲಿ ಮಾತ್ರ ಬಾಕಿ ಉಳಿದಿದ್ದು, ಆ ಕೆಲಸವೂ ಈಗ ತ್ವರಿತಗತಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲೂ ಕ್ಯೂಆರ್‌ ಕೋಡ್ ವ್ಯವಸ್ಥೆ ಬರಲಿದ್ದು, ಶೀಘ್ರದಲ್ಲೇ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ನಾರಾಯಣಪ್ಪ ಕುರುಬರ, ಕೆಎಸ್‌ಆರ್‌ಟಿಸಿ ಡಿಸಿ

Share this article