ಜಾಗೃತಿಯಿಂದ ಮಾತ್ರ ಎಚ್ಐವಿಯಿಂದ ದೂರವಿರಲು ಸಾಧ್ಯ: ಡಿಸಿ ಡಾ. ವಿದ್ಯಾಕುಮಾರಿ

KannadaprabhaNewsNetwork | Published : Dec 3, 2024 12:31 AM

ಸಾರಾಂಶ

ಉಡುಪಿ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆಯ ಪ್ರಗತಿಸೌಧ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಉಡುಪಿ: ವಿಶ್ವ ಏಡ್ಸ್ ದಿನ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಉಡುಪಿ

ಎಚ್ಐವಿ ರೋಗದ ಹರಡುವಿಕೆ, ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಹೊಂದಿ, ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸಿದ್ದಲ್ಲಿ ಮಾತ್ರ ಈ ರೋಗದಿಂದ ದೂರವಿರಲು ಸಾಧ್ಯ. ಇದಕ್ಕೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.

ಅವರು ಸೋಮವಾರ ನಗರದ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆಯ ಪ್ರಗತಿಸೌಧ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಏಡ್ಸ್ ದಿನ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಜನರೇ ಹೆಚ್ಚು ಈ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅನೇಕರು ತಮ್ಮದಲ್ಲದ ತಪ್ಪಿನಿಂದಾಗಿ ಏಡ್ಸ್ ರೋಗಕ್ಕೆ ತುತ್ತಾಗುತ್ತಾರೆ. ಅಸುರಕ್ಷಿತ ಲೈಂಗಿಕತೆ, ಸೋಂಕಿತರ ರಕ್ತವನ್ನು ಪಡೆಯುವುದು, ಸಂಸ್ಕರಣೆ ಮಾಡದ ಸಿರಿಂಜ್ ಬಳಕೆ, ಸೋಂಕಿತ ತಾಯಿಯಿಂದ ಮಗುವಿನ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಈ ರೋಗ ಹರಡುತ್ತದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದ ಅವರು, ಎಚ್ಐವಿ ರೋಗಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಹಾಗೂ ಔಷಧೋಪಚಾರಗಳನ್ನು ನೀಡಲಾಗುತ್ತಿದೆ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಯೋಗೇಶ್ ಮಾತನಾಡಿದರು.

ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಗಣನೀಯ ಸೇವೆ ಸಲ್ಲಿಸಿದ ಅನುರಾಧಾ ವಿ.ಎಸ್., ಜಯ ಸಾಲಿಯಾನ್, ನರಸಿಂಹ ಮೂರ್ತಿ ವೈ., ಶ್ರೀನಿವಾಸ ಶೆಟ್ಟಿಗಾರ್, ಚಂದ್ರಣ್ಣ, ಡಾ. ವ್ಯಾಸರಾಜ್ ತಂತ್ರಿ, ಡಾ.ವಿಮಲ ಚಂದ್ರಶೇಖರ್, ಶ್ರೀಲತಾ, ಡಾ. ನವನೀತ ಕೆ.ಪಿ. ಹಾಗೂ ಎಝಿಲ್ ಮೆಲ್ವಿನ್ ಕ್ಯಾಸ್ತಲಿನೊ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ. ಗಡಾದ್, ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಎಸ್.ಕೆ.ಆರ್.ಡಿ.ಪಿ. ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಮೇಲ್ವಿಚಾರಕ ಮಹಾಬಲೇಶ್ವರ ಬಿ.ಎಂ ಸ್ವಾಗತಿಸಿದರು. ಮಂಜುನಾಥ ಗಾಣಿಗ ನಿರೂಪಿಸಿ, ವಂದಿಸಿದರು.

Share this article