ಕನ್ನಡಪ್ರಭ ವಾರ್ತೆ ಇಳಕಲ್ಲ
ಶಿಕ್ಷಣದಿಂದ ಮಾತ್ರ ಬದುಕಿನ ದಾರಿ ತಿಳಿಯುತ್ತದೆ. ಕಾರಣ ಪ್ರತಿಯೊಬ್ಬ ವಿದ್ಯಾರ್ಥಿಗಳು ಆಸಕ್ತಿಯಿಂದ ಉತ್ತಮ ಶಿಕ್ಷಣ ಪಡೆದು ತಮ್ಮ ಬದುಕಿನ ದಾರಿ ಕಂಡುಕೊಳ್ಳಬೇಕು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗಂಗಾಧರ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮೀಜಿ ತಿಳಿಸಿದರು.ನಗರದ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಜಗದ್ಗುರು ಗಂಗಾಧರ ಮೂರುಸಾವಿರ ಮಠ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಶಿಕ್ಷಣ ಪಡೆದ ಪ್ರತಿಯೊಬ್ಬರು ಕಲಿತ ಸಂಸ್ಥೆ, ಕಲಿಸಿದ ಗುರು ಮತ್ತು ಜನ್ಮ ಕೊಟ್ಟ ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಗ್ಗಾಂವದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಎ.ಸಿ.ವಾಲಿ ಗುರುಜೀ ಮಾತನಾಡಿ, ಗುರುಗಳು ವಿದ್ಯಾರ್ಥಿಗಳ ಭಾರ ಇಳಿಸುವ ಕೆಲಸ ಮಾಡಬೇಕು ಮತ್ತು ಸಮಾಜವನ್ನು ಇಬ್ಭಾಗ ಮಾಡದೇ ಕೂಡಿಸುವ ಕೆಲಸ ಮಾಡಬೇಕು. ಸಮಗ್ರ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಸಾಧನೆ ಮಾಡುವಾಗ ಕಿವಿಗಳನ್ನು ಮುಚ್ಚಿ ಸಾಧನೆ ಮಾಡಬೇಕು. ಸಾಧನೆ ನಂತರ ಬಾಯಿ ಮುಚ್ಚಿಕೊಂಡಿರಬೇಕು ಎಂದು ಕಿವಿ ಮಾತು ಹೇಳಿದರು. ಇಳಕಲ್ಲಿನ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಸಮಾರಂಭ ಉದ್ಘಾಟಿಸಿ, ವಿದ್ಯಾರ್ಥಿ ಜೀವನ ಕುರಿತು ಮಾತನಾಡಿದರು. ಸಂಸ್ಥೆ ಚೇರ್‌ಮನ್ ಬಸವರಾಜ ಗೋಟೂರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಜಿಂದಾಲ್ ಕಂಪನಿಯ ಶರಣಯ್ಯ ಅಂಗಡಿ, ಬೆಂಗಳೂರಿನ ಬಿಜಿಎಂ ಲೈಟಿಂಗ್ ಕಂಪನಿ ಎಂಡಿ ಬಸವರಾಜ ಪಾಟೀಲ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಪಾ ಪ್ರಾರ್ಥಿಸಿ, ಪ್ರಾಚರ್ಯ ಮಂಜುನಾಥ್ ಬೆಳವಣಿಕಿ ಸ್ವಾಗತಿಸಿ, ಶಶಿಧರ್ ಹಿರೇಮಠ ವಂದಿಸಿ, ಶ್ರೀನಿವಾಸ್ ಜೋಶಿ ಹಾಗೂ ಸುರೇಖಾ ಮಾಳಿ ನಿರೂಪಿಸಿದರು.