ಸರ್ಕಾರಿ ನೌಕರ, ಆದಾಯ ತೆರಿಗೆ ಪಾವತಿದಾರರ ಬಿಪಿಎಲ್‌ ಕಾರ್ಡಷ್ಟೇ ರದ್ದು: ಸಿಎಂ ಸಿದ್ದರಾಮಯ್ಯ

KannadaprabhaNewsNetwork | Updated : Nov 21 2024, 04:54 AM IST

ಸಾರಾಂಶ

ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಬಿಪಿಎಲ್‌ ಪಡಿತರ ಚೀಟಿಯನ್ನೂ ರದ್ದು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

 ಬೆಂಗಳೂರು : ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಬಿಪಿಎಲ್‌ ಪಡಿತರ ಚೀಟಿಯನ್ನೂ ರದ್ದು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದತಿ ಮಾಡುವ ರಾಜ್ಯ ಸರ್ಕಾರದ ಅಭಿಯಾನಕ್ಕೆ ಭಾರೀ ಜನಾಕ್ರೋಶ ಮತ್ತು ಈ ಅಭಿಯಾನದ ವಿರುದ್ಧ ಬಿಜೆಪಿ ನಾಯಕರು ಸರಣಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸೂಚನೆ ನೀಡಿದ್ದಾರೆ.

ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರರಿಗೆ ಬಿಪಿಎಲ್‌ ಕಾರ್ಡ್ ನೀಡಿದ್ದರೆ ಅದನ್ನು ರದ್ದುಪಡಿಸಿ ಎಪಿಎಲ್‌ಗೆ ಪರಿವರ್ತಿಸಬೇಕು. ಇವರನ್ನು ಹೊರತುಪಡಿಸಿದಂತೆ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸು ನೀಡುವಂತೆ ಮುಖ್ಯಮಂತ್ರಿಗಳು ಆದೇಶಿಸಿರುವುದಾಗಿ ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಬಡ ಕುಟುಂಬಗಳ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರ ವಿರುದ್ಧ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ.

- ಇನ್ನಾರದೇ ಕಾರ್ಡ್‌ ರದ್ದು ಮಾಡ್ಬೇಡಿ: ಸಿದ್ದು ತಾಕೀತು

- ಈಗಾಗ್ಲೇ ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ ಮರಳಿಸಬೇಕು

ಇವರ ಬಿಪಿಎಲ್‌ ಕಾರ್ಡ್‌ ಬಚಾವ್‌?

- 7.5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವವರು

- ಜೀವನೋಪಾಯಕ್ಕೆ ಬಳಸುವ ಒಂದು ವಾಹನ ಹೊರತುಪಡಿಸಿ 100 ಸಿಸಿಗಿಂತ ಅಧಿಕ ಸಾಮರ್ಥ್ಯದ ವಾಹನಗಳನ್ನು ಹೊಂದಿರುವ ಜನರು 

- ಅಧಿಸೂಚಿತ ಗುತ್ತಿಗೆದಾರರು, ಎಪಿಎಂಸಿ ವ್ಯಾಪಾರಿಗಳು ಅಥವಾ ಕಮಿಷನ್ ಏಜೆಂಟರು

- ತಿಂಗಳಿಗೆ 450 ರು. ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸುವವರು

* ಇವರ ಬಿಪಿಎಲ್‌ ಕಾರ್ಡ್‌ಗಳನ್ನೂ ಸರ್ಕಾರ ರದ್ದುಪಡಿಸಿತ್ತು. ಸಿಎಂ ಸೂಚನೆ ಜಾರಿಗೆ ಬಂದರೆ ಇವರಿಗೆ ಬಿಪಿಎಲ್‌ ಕಾರ್ಡ್‌ ಮರಳಿ ಸಿಗಬೇಕಿದೆ

Share this article