ಆರೋಗ್ಯವಂತರು ಮಾತ್ರ ರಕ್ತದಾನ ಮಾಡಲು ಸಾದ್ಯ: ಎಂ.ವಿ.ಪಿ. ಆರಾಧ್ಯ

KannadaprabhaNewsNetwork |  
Published : Dec 17, 2025, 01:45 AM IST
ಪೋಟೋ: 16ಎಸ್‌ಎಂಜಿಕೆಪಿ11 | Kannada Prabha

ಸಾರಾಂಶ

ಮುಂದಿನ ದಿನಗಳಲ್ಲಿ ಯುವಕರು ರಕ್ತದಾನ ಮಾಡಲು ಕೂಡ ಅರ್ಹರಾಗಿರುತ್ತಾರೆಯೇ ಎಂಬ ಪ್ರಶ್ನೆ ನಮ್ಮ ಮುಂದೆ ಇದೆ ಎಂದು ಬಾಪೂಜಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ವಿ.ಪಿ. ಆರಾಧ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಂದಿನ ದಿನಗಳಲ್ಲಿ ಯುವಕರು ರಕ್ತದಾನ ಮಾಡಲು ಕೂಡ ಅರ್ಹರಾಗಿರುತ್ತಾರೆಯೇ ಎಂಬ ಪ್ರಶ್ನೆ ನಮ್ಮ ಮುಂದೆ ಇದೆ ಎಂದು ಬಾಪೂಜಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ವಿ.ಪಿ. ಆರಾಧ್ಯ ಹೇಳಿದರು.

ಇಲ್ಲಿನ ಬಾಪೂಜಿ ಶಿಕ್ಷಣ ಸಮೂಹ ಸಂಸ್ಥೆಗಳು, ಶಿವಮೊಗ್ಗ ಜಿಲ್ಲಾ ಪೊಲೀಸ್, ರೋಟರಿ ರಕ್ತ ಕೇಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವಕರು ಆರೋಗ್ಯವಂತರಾಗಿದ್ದಾಗ ಮಾತ್ರ ರಕ್ತದಾನ ಮಾಡಲು ಅರ್ಹರಾಗಿರುತ್ತಾರೆ. ಆದರೆ, ಯುವಕರು ಇತ್ತೀಚೆಗೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇವರು ಹೇಗೆ ರಕ್ತದಾನ ಮಾಡಲು ಸಾಧ್ಯ. ಹಾಗಾಗಿ ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡುವವರ ಸಂಖ್ಯೆಯ ಕಡಿಮೆಯಾಗಬಹುದು. ಹಾಗಾಗಿ ಯುವಕರು ಮೊದಲು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಕರೆ ನೀಡಿದರು.

ರಕ್ತವು ಜೀವ ದ್ರವ್ಯವಾಗಿ ಪ್ರಾಣ ಉಳಿಸುತ್ತದೆ. ರಕ್ತದಾನ ಮಾಡುವವರು ಭಯಪಡಬೇಕಾದ ಅವಶ್ಯಕತೆ ಇಲ್ಲ. ಇದರಿಂದ ಆರೋಗ್ಯ ಕೂಡ ಸುಧಾರಿತವಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ರಕ್ತದಾನ ಮಾಡಿ ಜೀವ ಉಳಿಸಲು ಕಾರಣರಾಗಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪ ಪೊಲೀಸ್ ಅಧೀಕ್ಷಕ ರಮೇಶ್ ಕುಮಾರ್, ರಕ್ತದಾನವೇ ಶ್ರೇಷ್ಟ ದಾನವಾಗಿದೆ. ಏನನ್ನಾದರೂ ಉತ್ಪಾದನೆ ಮಾಡಬಹುದು. ಆದರೆ, ರಕ್ತ ಉತ್ಪಾದನೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ರಕ್ತದಾನವೇ ಬಹಳ ಶ್ರೇಷ್ಟವಾಗುತ್ತದೆ. ರಕ್ತದಾನದ ಬಗ್ಗೆ ಮೂಢನಂಬಿಕೆಗಳು ಬೇಡ. ಪೊಲೀಸರು ರಕ್ತ ಹೀರುವ ಕೆಲಸ ಮಾಡುವುದಿಲ್ಲ. ರಕ್ತ ಕೊಡುವ ಕಾಯಕದಲ್ಲೂ ಇರುತ್ತಾರೆ. ಪೊಲೀಸರ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹೋಗಬೇಕು ಎಂದರು.

178 ಬಾರಿ ರಕ್ತದಾನ ಮಾಡಿ ಹಾವೇರಿ ಜಿಲ್ಲೆ ಆಡೂರು ಪೊಲೀಸ್ ಠಾಣೆಯ ಕರಬಸಪ್ಪ ಮನೋಹರ ಗೋಂದಿ ಮಾತನಾಡಿ, ನಿಜವಾದ ರಕ್ತ ಸಂಬಂಧಿಗಳು ಎಂದರೆ ರಕ್ತದಾನ ಮಾಡಿದವರು ಮಾತ್ರ. ಇಂದು ರಕ್ತ ಸಂಬಂಧಗಳಲ್ಲಿಯೇ ರಕ್ತದಾನ ಮಾಡುವ ಮನಸ್ಸುಗಳು ಇಲ್ಲವಾಗಿದೆ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ನಾವು ಏನು ಬೇಕಾದರೂ ಸಂಪಾದಿಸಬಹುದು. ಆರೋಗ್ಯ ಸಂಪಾದನೆ ಮಾಡಲು ಬಹಳ ಕಷ್ಟ. ಆರೋಗ್ಯವೇ ಭಾಗ್ಯ ಎಂಬುದನ್ನು ತಿಳಿಯಬೇಕು. ಬಾಪೂಜಿ ಶಿಕ್ಷಣ ಸಮೂಹ ಸಂಸ್ಥೆಯು ಪೊಲೀಸ್ ಇಲಾಖೆ ಹಾಗೂ ರೋಟರಿ ಸಂಸ್ಥೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದಲ್ಲಿ ಮಹತ್ವದ ರಕ್ತದಾನ ಶಿಬಿರ ಏರ್ಪಡಿಸಿದೆ. ಇದು ಪುಣ್ಯದ ಕೆಲಸ ಎಂದರು.

ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಪಿ. ಅಸಿಸ್ಟೆಂಟ್ ಕಮಾಂಡೆಂಟ್ ರಾಚಪ್ಪ ಕಾಜಗಾರ, ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯ ಹಾಲೇಶಪ್ಪ ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕವಿತಾ ಎಸ್.ಡಿ., ಡಾ. ಶೀಲಾ, ಡಾ. ನಿರಂಜನ್, ರೋಟರಿ ಬ್ಲಡ್ ಬ್ಯಾಂಕ್ ಪಿ.ಆರ್.ಒ. ಡಾ. ಆನಂದ್, ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನ ರಾಘವೇಂದ್ರ ಆಚಾರ್, ಅನ್ನಪೂರ್ಣ, ಮಧು ಹೆಚ್.ಕೆ., ಸೇರಿದಂತೆ ಹಲವರಿದ್ದರು.

ಅನಾ ವಿಜಯೇಂದ್ರ ಕಾರ್ಯಕ್ರಮ ನಿರೂಪಿಸಿದರು. ಅನ್ನಪೂರ್ಣ ಪ್ರಾರ್ಥಿಸಿ ಸ್ವರ್ಣ ಶ್ರೀ ಸ್ವಾಗತಿಸಿದರು. ಸಿಂಚನಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ